ಪೋಕ್ಸೊ ಪ್ರಕರಣ ರದ್ದು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ

ಎಫ್‌ಐಆರ್‌ ದಾಖಲಾದ ನಂತರ ಏಪ್ರಿಲ್‌ 12ರಂದು ಪೊಲೀಸರ ವಿಚಾರಣೆಗೆ ಹಾಜರಾಗಿದ್ದೇನೆ. ಪೊಲೀಸರು ಹೇಳಿಕೆ ದಾಖಲಿಸಿಕೊಳ್ಳದೇ ಧ್ವನಿ ಮಾದರಿ ಸಂಗ್ರಹಿಸಿದರು ಎಂದು ಬಿಎಸ್‌ವೈ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.  
B.S. Yediyurappa
B.S. Yediyurappa
Published on

ಪೋಕ್ಸೊ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಂಕಷ್ಟಕ್ಕೆ ಸಿಲುಕಿದ್ದಾರೆ. ತನಿಖೆ ನಡೆಸಲು ಸಿಐಡಿ ಪೊಲೀಸರು ಯಡಿಯೂರಪ್ಪ ಅವರಿಗೆ ನೋಟಿಸ್ ಜಾರಿಗೊಳಿಸಿರುವ ಬೆನ್ನಿಗೇ ಅವರು ಪ್ರಕರಣ ರದ್ದು ಕೋರಿ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾರೆ. ಅರ್ಜಿಯು ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ  ಪೋಕ್ಸೊ ಪ್ರಕರಣವನ್ನು ರದ್ದುಗೊಳಿಸುವಂತೆ ಬಿಎಸ್‌ವೈ ಕೋರಿದ್ದಾರೆ. ತಾನು ಯಾವುದೇ ಕಾನೂನುಬಾಹಿರ ಕೃತ್ಯ ಎಸಗಿಲ್ಲ. ಫಿರ್ಯಾದಿ ಮಹಿಳೆಗೆ ದೂರು ನೀಡುವುದೇ ಹವ್ಯಾಸವಾಗಿದೆ. ಹೀಗಾಗಿ, ಅನಗತ್ಯ ದೂರು ನೀಡಿದ್ದಾರೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಎಫ್‌ಐಆರ್‌ ದಾಖಲಾದ ನಂತರ ಏಪ್ರಿಲ್‌ 12ರಂದು ಪೊಲೀಸರ ವಿಚಾರಣೆಗೆ ಹಾಜರಾಗಿದ್ದೇನೆ. ಪೊಲೀಸರು ಹೇಳಿಕೆ ದಾಖಲಿಸಿಕೊಳ್ಳದೇ ಧ್ವನಿ ಮಾದರಿ ಸಂಗ್ರಹಿಸಿದರು. ದೂರಿನಲ್ಲಿ ಅಪರಾಧದ ಅಂಶಗಳಿಲ್ಲದಿರುವುದರಿಂದ ಎಫ್‌ಐಆರ್‌ ರದ್ದು ಪಡಿಸಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಕರಣದ ಹಿನ್ನೆಲೆ: ಸಂತ್ರಸ್ತೆಯ ತಾಯಿ ನೀಡಿದ್ದ ದೂರಿನ ಅನ್ವಯ ಸಂತ್ರಸ್ತೆಯ ಮೇಲೆ ಈ ಹಿಂದೆ ಅತ್ಯಾಚಾರವಾಗಿದ್ದು, ಈ ಸಂಬಂಧ ವಿಶೇಷ ತನಿಖಾ ದಳ ರಚಿಸಲು ರಾಜ್ಯ ಸರ್ಕಾರದ ಮೇಲೆ ಒತ್ತಡ ತರುವ ಮೂಲಕ ನೆರವಾಗುವಂತೆ ಕೋರಲು ಸಂತ್ರಸ್ತೆ ಮತ್ತು ಆಕೆಯ ತಾಯಿ ಯಡಿಯೂರಪ್ಪ ಅವರನ್ನು 2024ರ ಫೆಬ್ರವರಿ 2ರಂದು ಅವರ ನಿವಾಸದಲ್ಲಿ ಭೇಟಿ ಮಾಡಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರು ನಮ್ಮ ಜೊತೆ ಒಂಭತ್ತು ನಿಮಿಷ ಮಾತನಾಡಿ, ನಮಗೆ ಟೀ ಕುಡಿಸಿದರು. ಆನಂತರ ನನ್ನ ಮಗಳನ್ನು ಕೊಠಡಿಗೆ ಕರೆದೊಯ್ದು ಚಿಲಕ ಹಾಕಿಕೊಂಡಿದ್ದರು. ಈ ವೇಳೆ ಆಕೆಯ ಬಲಭಾಗದ ಸ್ತನವನ್ನು ಸ್ಪರ್ಶಿಸಿ ಲೈಂಗಿಕ ದೌರ್ಜನ್ಯವೆಸಗಿದ್ದರು. ಆಕೆ ಹೊರಹೋಗಲು ಬಾಗಿಲು ತೆರೆಯುವಂತೆ ಒತ್ತಾಯಿಸಿದ್ದಳು. ಆನಂತರ ಯಡಿಯೂರಪ್ಪ ಅವರೇ ಬಾಗಿಲು ತೆರೆದಿದ್ದು, ತಕ್ಷಣ ಓಡಿ ಬಂದ ನನ್ನ ಪುತ್ರಿ ಘಟನೆಯನ್ನು ವಿವರಿಸಿದಳು ಎಂದು ದೂರಲಾಗಿತ್ತು.

ಈ ಕುರಿತು ಯಡಿಯೂರಪ್ಪ ಅವರನ್ನು ಪ್ರಶ್ನಿಸಲಾಗಿ ಅದಕ್ಕೆ ಅವರು ನಿಮ್ಮ ಮಗಳಿಗೆ ರೇಪ್‌ ಆಗಿದೆಯೋ? ಇಲ್ಲವೋ? ಎಂಬುದನ್ನು ಚೆಕ್‌ ಮಾಡಲು ಹಾಗೆ ಮಾಡಿದೆ ಎಂದರು. ತಕ್ಷಣ ನಮ್ಮ ಕ್ಷಮೆಯಾಚಿಸಿದ ಯಡಿಯೂರಪ್ಪ ಅವರು ನಿಮಗೆ ಮೋಸ ಆಗಿರುವ ಬಗ್ಗೆ ಸಹಾಯ ಮಾಡುತ್ತೇನೆ ಎಂದರು. ಇದಕ್ಕೆ ನಾನು ಒಪ್ಪಲಿಲ್ಲ. ಅದಾಗ್ಯೂ, ಯಡಿಯೂರಪ್ಪ ಅವರು ಈ ವಿಚಾರವನ್ನು ಹೊರೆಗೆ ಬಾಯಿ ಬಿಡದಂತೆ ತಡೆಯಲು ತುಂಬಾ ಪ್ರಯತ್ನಿಸಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಸದಾಶಿವನಗರ ಠಾಣೆಗೆ ದೂರು ನೀಡಿದ್ದರು. ಇದನ್ನು ಆಧರಿಸಿ ಪೊಲೀಸರು ಪೋಕ್ಸೊ ಕಾಯಿದೆ ಸೆಕ್ಷನ್‌ 8 (ಲೈಂಗಿಕ ದೌರ್ಜನ್ಯ) ಮತ್ತು ಐಪಿಸಿ ಸೆಕ್ಷನ್‌ 354 (ಎ) ಅಡಿ (ಲೈಂಗಿಕ ಕಿರುಕುಳ) ಯಡಿಯೂರಪ್ಪ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

Kannada Bar & Bench
kannada.barandbench.com