Chief Justice Sandeep Mehta, Gauhati HC
Chief Justice Sandeep Mehta, Gauhati HC  
ಸುದ್ದಿಗಳು

21 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ: ವಾರ್ಡನ್ ವಿರುದ್ಧ ಸ್ವಪ್ರೇರಿತ ವಿಚಾರಣೆ ಆರಂಭಿಸಿದ ಗುವಾಹಟಿ ಹೈಕೋರ್ಟ್

Bar & Bench

ಹನ್ನೆರಡು ವರ್ಷದೊಳಗಿನ 21 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಎಸಗಿ ಜಾಮೀನು ಪಡೆದಿದ್ದ ಹಾಸ್ಟೆಲ್‌ ವಾರ್ಡನ್‌ ವಿರುದ್ಧ ಗುವಾಹಟಿ ಹೈಕೋರ್ಟ್‌ ಶುಕ್ರವಾರ ಸ್ವಯಂ ಪ್ರೇರಿತ ಜಾಮೀನು ರದ್ದತಿ ಪ್ರಕರಣದ ವಿಚಾರಣೆ ಆರಂಭಿಸಿದೆ [ಎಕ್ಸ್ ಮತ್ತು ಅರುಣಾಚಲಪ್ರದೇಶ ಸರ್ಕಾರ ಇನ್ನಿಬ್ಬರ ನಡುವಣ ಪ್ರಕರಣ].

ಅರುಣಾಚಲ ಪ್ರದೇಶದ ಶಿ ಯೋಮಿ ಜಿಲ್ಲೆಯ ಮೊನಿಗಾಂಗ್‌ನ ಕರೋ ಎಂಬಲ್ಲಿನ ಸರ್ಕಾರಿ ವಸತಿ ಶಾಲೆಯ ಹಾಸ್ಟೆಲ್ ವಾರ್ಡನ್ ಆಗಿರುವ ಆರೋಪಿ ಯುಮ್ಕೆನ್ ಬಾಗ್ರಾಗೆ ಜಾಮೀನು ಮಂಜೂರು ಮಾಡಿರುವ ಕುರಿತು “ಪೂರ್ವಾಂಚಲ್ ಪ್ರಹರಿ” ಮತ್ತು “ದಿ ಅರುಣಾಚಲ ಟೈಮ್ಸ್” ಪತ್ರಿಕೆಗಳಲ್ಲಿ ಪ್ರಕಟವಾದ ವರದಿ ಆಧರಿಸಿ ನ್ಯಾಯಾಲಯ ಪ್ರಕರಣ ದಾಖಲಿಸಿಕೊಂಡಿದೆ.

ಮಕ್ಕಳ ಲೈಂಗಿಕ ಅಪರಾಧಗಳ ರಕ್ಷಣೆ ಕಾಯಿದೆ- 2012 (ಪೋಕ್ಸೊ ಕಾಯಿದೆ) ಅಡಿಯಲ್ಲಿ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಧೀಶರು ಫೆಬ್ರವರಿ 23ರಂದು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದ್ದಕ್ಕಾಗಿ ಮುಖ್ಯ ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರು ಆಘಾತ ವ್ಯಕ್ತಪಡಿಸಿದ್ದಾರೆ.

"ಇಂತಹ ಗಂಭೀರ ಮತ್ತು ಸೂಕ್ಷ್ಮ ಸ್ವರೂಪದ ಪ್ರಕರಣಗಳಲ್ಲಿ ಯಾವುದೇ ಸಮಂಜಸ ಕಾರಣ ನೀಡದೆ ಪ್ರಮುಖ ಆರೋಪಿಗೆ ಜಾಮೀನು ಮಂಜೂರು ಮಾಡುವ ಮೂಲಕ ಸಂಪೂರ್ಣವಾಗಿ ದಾರ್ಷ್ಟ್ಯದಿಂದ ವರ್ತಿಸಿರುವುದು ನ್ಯಾಯಾಲಯದ ಆತ್ಮಸಾಕ್ಷಿಯನ್ನು ಅಲುಗಾಡಿಸಿದೆ” ಎಂದು ನ್ಯಾಯಾಲಯ ಜಾಮೀನು ತೀರ್ಪನ್ನುದ್ದೇಶಿಸಿ ಕಳವಳ ಸೂಚಿಸಿದೆ.

ಅಲ್ಲದೆ ಅಸ್ಸಾಂ, ನಾಗಾಲ್ಯಾಂಡ್, ಮಿಜೋರಾಂ ಹಾಗೂ ಅರುಣಾಚಲ ಪ್ರದೇಶದ ಪೋಕ್ಸೊ ನ್ಯಾಯಾಲಯಗಳ ನ್ಯಾಯಾಧೀಶರು ಸಂವೇದನಾಶೀಲರಾಗಬೇಕು ಎಂದು ಕೂಡ ನ್ಯಾಯಾಲಯ ಬುದ್ಧಿಮಾತು ಹೇಳಿದ್ದು ತರಬೇತಿ ನೀಡಲು ಅಸ್ಸಾಂ ನ್ಯಾಯಾಂಗ ಅಕಾಡೆಮಿಯ ನಿರ್ದೇಶಕರಿಗೆ ತಿಳಿಸಿದೆ.

ರಾಜ್ಯದಾದ್ಯಂತ ಲೈಂಗಿಕ ದೌರ್ಜನ್ಯಕ್ಕೊಳಗಾಗುವ ಅಪ್ರಾಪ್ತ ವಯಸ್ಕರಿಗೆ ರಕ್ಷಣೆ ನೀಡಲು ಅರುಣಾಚಲ ಪ್ರದೇಶ  ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ನ್ಯಾಯಾಲಯಕ್ಕೆ ತಿಳಿಸುವಂತೆಯೂ  ಮುಖ್ಯ ನ್ಯಾಯಮೂರ್ತಿಗಳು, ಅಡ್ವೊಕೇಟ್ ಜನರಲ್‌ ಅವರಿಗೆ ಸೂಚಿಸಿದರು.

ಆರೋಪಿಯು 2019 ರಿಂದ 2022 ರ ನಡುವೆ 15 ಹುಡುಗಿಯರು ಮತ್ತು 6 ಹುಡುಗರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂಬ ಆರೋಪ ಕೇಳಿಬಂದಿತ್ತು. ಪ್ರಕರಣದ ಇನ್ನೊಬ್ಬ ಆರೋಪಿ ಪತ್ತೆಗೆ ಕಾಯುತ್ತಾ ವಿಚಾರಣೆ ಸ್ಥಗಿತಗೊಳಿಸದೆ ಪ್ರತ್ಯೇಕವಾಗಿ ಆರೋಪಿಗಳ ವಿಚಾರಣೆ ನಡೆಸಬಹುದಿತ್ತು ಎಂದು ಮುಖ್ಯ ನ್ಯಾಯಮೂರ್ತಿಗಳು ಕಿವಿಮಾತು ಹೇಳಿದ್ದಾರೆ. ಅಲ್ಲದೆ ಪ್ರಕರಣದ ಬಾತ್ಮಿದಾರರನ್ನು ಆಲಿಸದೆಯೇ ಮುಖ್ಯ ಆರೋಪಿಗೆ ಜಾಮೀನು ನೀಡಿರುವುದಕ್ಕೆ ಪೋಕ್ಸೊ ನ್ಯಾಯಾಲಯವೊಂದನ್ನು ಅದು ತರಾಟೆಗೆ ತೆಗೆದುಕೊಂಡಿತು.

ಅಲ್ಲದೆ ವಿದ್ಯಾರ್ಥಿನಿಯರ ರಕ್ಷಕನಾಗಿರಬೇಕಿದ್ದ ಹಾಸ್ಟೆಲ್‌ ವಾರ್ಡನ್‌ ಪೈಶಾಚಿಕವಾಗಿ ವರ್ತಿಸಿರುವುದನ್ನು ಖಂಡಿಸಿದ ನ್ಯಾಯಾಲಯ ಆರೋಪಿ ಮತ್ತು ಅರುಣಾಚಲ ಪ್ರದೇಶ ಸರ್ಕಾರಕ್ಕೆ ನೋಟಿಸ್‌ ನೀಡಿ ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 27ಕ್ಕೆ ನಿಗದಿಪಡಿಸಿತು.