ಅಪ್ರಾಪ್ತ ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ದಾಖಲಾಗಿರುವ ಎರಡನೇ ಎಫ್‌ಐಆರ್‌ನಲ್ಲಿ ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರನ್ನು ನ್ಯಾಯಾಂಗ ಬಂಧನಕ್ಕೆ ನೀಡಬೇಕು ಎಂದು ತನಿಖಾಧಿಕಾರಿಯು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಬುಧವಾರ ಆರೋಪಿ ಸ್ವಾಮೀಜಿ ಅವರ ಕಡೆಯಿಂದ ಆಕ್ಷೇಪಣೆ ಸಲ್ಲಿಕೆಯಾಗಿದೆ.
ಚಿತ್ರದುರ್ಗದ ಗ್ರಾಮೀಣ ಠಾಣೆಯ ತನಿಖಾಧಿಕಾರಿ ಸಲ್ಲಿಸಿರುವ ಅರ್ಜಿಯನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಬಿ ಕೆ ಕೋಮಲಾ ಅವರು ಇಂದು ವಿಚಾರಣೆ ನಡೆಸಿದರು. ತನಿಖಾಧಿಕಾರಿಯ ಅರ್ಜಿಗೆ ಆರೋಪಿ ಸ್ವಾಮೀಜಿ ಪರ ವಕೀಲ ಸಂದೀಪ್ ಪಾಟೀಲ್ ಆಕ್ಷೇಪಣೆ ಸಲ್ಲಿಸಿದರು. ವಾದ ಮಂಡಿಸಲು ಕಾಲಾವಕಾಶ ನೀಡುವಂತೆ ಸರ್ಕಾರಿ ಅಭಿಯೋಜಕರಾದ ಜಗದೀಶ್ ಅವರ ಕೋರಿಕೆಯ ಮೇರೆಗೆ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ. ಅಲ್ಲದೇ, ಆರೋಪಿ ಸ್ವಾಮೀಜಿ ಅವರ ಬಾಡಿ ವಾರೆಂಟ್ ಅನ್ನು ಗುರುವಾರದವರೆಗೆ ವಿಸ್ತರಿಸಲಾಗಿದೆ.
ಮೊದಲ ಪ್ರಕರಣದಲ್ಲಿ ಆರೋಪಿ ಸ್ವಾಮೀಜಿಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರಾಗಿದೆ. ಎರಡನೇ ಎಫ್‌ಐಆರ್‌ನಲ್ಲಿ ಅವರನ್ನು ಬಾಡಿ ವಾರೆಂಟ್ ಮೂಲಕ ವಿಚಾರಣೆಗೆ ಪಡೆದು ನ್ಯಾಯಾಂಗ ಬಂಧನಕ್ಕೆ ಮರಳಿಸಲಾಗಿದೆ. ಈ ಸಂಬಂಧ ಹೈಕೋರ್ಟ್‌ನ ಆದೇಶ ಸ್ಪಷ್ಟವಾಗಿದೆ. ಅಲ್ಲದೇ, ಎರಡು ಎಫ್‌ಐಆರ್‌ಗಳಿಗೂ ಹೈಕೋರ್ಟ್‌ನಿಂದ ತಡೆಯಾಜ್ಞೆ ಇದೆ. ಹೀಗಾಗಿ, ವಿಚಾರಣೆ ಮುಂದುವರಿಸಬಾರದು ಎಂದು ಸ್ವಾಮೀಜಿ ಪರವಾಗಿ ಸಲ್ಲಸಿರುವ ಆಕ್ಷೇಪಣೆಯಲ್ಲಿ ಕೋರಲಾಗಿದೆ.
ಮೊದಲ ಪ್ರಕರಣದಲ್ಲಿ ಬಿಡುಗಡೆ ಸೂಚನೆ: ಮೊದಲ ಪ್ರಕರಣದಲ್ಲಿ ಆರೋಪಿ ಸ್ವಾಮೀಜಿ ಬಿಡುಗಡೆಗೆ ಇಬ್ಬರ ಭದ್ರತಾ ಖಾತರಿ ಒದಗಿಸಬೇಕು ಎಂಬ ಹೈಕೋರ್ಟ್ ಆದೇಶದಂತೆ ಸಲ್ಲಿಸಲಾಗಿದ್ದ ಇಬ್ಬರ ಭದ್ರತಾ ಖಾತರಿಯನ್ನು ವಿಶೇಷ ನ್ಯಾಯಾಲಯ ಒಪ್ಪಿದ್ದು, ಬಿಡುಗಡೆ ಸೂಚನೆಯನ್ನು ಚಿತ್ರದುರ್ಗದ ಕಾರಾಗೃಹಕ್ಕೆ ಕಳುಹಿಸಿಕೊಡಲಾಗಿದೆ.