ಅಪ್ರಾಪ್ತ ಹೆಣ್ಣು ಮಕ್ಕಳ ಮೇಲಿನ ಲೌಂಗಿಕ ದೌರ್ಜನ್ಯ ಆರೋಪದ ಮೇಲೆ ದಾಖಲಾಗಿರುವ ಎರಡನೇ ಎಫ್‌ಐಆರ್‌ನಲ್ಲಿ ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರನ್ನು ನ್ಯಾಯಾಂಗ ಬಂಧನಕ್ಕೆ ನೀಡಬೇಕು ಎಂದು ತನಿಖಾಧಿಕಾರಿಯು ವಿಶೇಷ ನ್ಯಾಯಾಲಯಕ್ಕೆ ಶುಕ್ರವಾರ ಅರ್ಜಿ ಸಲ್ಲಿಸಿದ್ದಾರೆ.
ಚಿತ್ರದುರ್ಗದ ಗ್ರಾಮೀಣ ಠಾಣೆಯ ತನಿಖಾಧಿಕಾರಿ ಸಲ್ಲಿಸಿರುವ ಅರ್ಜಿಯನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಬಿ ಕೆ ಕೋಮಲಾ ಅವರು ವಿಚಾರಣೆ ನಡೆಸಿದರು. ತನಿಖಾಧಿಕಾರಿಯ ಅರ್ಜಿಗೆ ಆರೋಪಿ ಸ್ವಾಮೀಜಿ ಪರ ವಕೀಲ ಸಂದೀಪ್ ಪಾಟೀಲ್ ಆಕ್ಷೇಪಿಸಿದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಅವರಿಗೆ ಲಿಖಿತ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿ, ವಿಚಾರಣೆಯನ್ನು ನವೆಂಬರ್ 15ಕ್ಕೆ ಮುಂದೂಡಿದೆ.
ತನಿಖಾಧಿಕಾರಿಯನ್ನು ಪ್ರತಿನಿಧಿಸಿದ್ದ ಸರ್ಕಾರಿ ಅಭಿಯೋಜಕರಾದ ಜಗದೀಶ್ ಅವರು “ಮೊದಲನೇ ಎಫ್‌ಐಆರ್‌ನಲ್ಲಿ ಆರೋಪಿ ಮುರುಘಾ ಶರಣರಿಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರಾಗಿದೆ. ಮೊದಲ ಪ್ರಕರಣದಲ್ಲಿ ಅವರು ನ್ಯಾಯಾಂಗ ಬಂಧನದಲ್ಲಿದ್ದರಿಂದ ಎರಡನೇ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಪಡೆದಿರಲಿಲ್ಲ. ಒಬ್ಬ ಆರೋಪಿ ವಿರುದ್ಧ ಎರಡು ಪ್ರಕರಣ ದಾಖಲಾದರೆ ಅವರನ್ನು ಎರಡೂ ಪ್ರಕರಣಗಳಲ್ಲಿ ನ್ಯಾಯಾಂಗ ಬಂಧನಕ್ಕೆ ಪಡೆಯಲು ಕಾನೂನಿನಲ್ಲಿ ಅವಕಾಶ ಇಲ್ಲ. ಹೀಗಾಗಿ, ಎರಡನೇ ಪ್ರಕರಣದಲ್ಲಿ ಆರೋಪಿ ಸ್ವಾಮೀಜಿಯನ್ನು ಬಾಡಿ ವಾರೆಂಟ್ ಮೂಲಕ ವಶಕ್ಕೆ ಪಡೆಯಲಾಗಿತ್ತು. ಈಗ ಆರೋಪಿ ಸ್ವಾಮೀಜಿಗೆ ಮೊದಲ ಪ್ರಕರಣದಲ್ಲಿ ಜಾಮೀನು ಮಂಜೂರಾಗಿರುವುದರಿಂದ ಎರಡನೇ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಕೋರಲಾಗಿದೆ” ಎಂದರು.
ಈ ಸಂಬಂಧ ಮಾತನಾಡಿದ್ದ ವಕೀಲ ಸಂದೀಪ್ ಪಾಟೀಲ್ ಅವರು “ಮುರುಘಾ ಶರಣರ ವಿರುದ್ಧ ಎರಡು ಎಫ್‌ಐಆರ್‌ಗಳು ದಾಖಲಾಗಿವೆ. ಮೊದಲ ಎಫ್‌ಐಆರ್‌ನಲ್ಲಿ ಇಬ್ಬರು ಸಂತ್ರಸ್ತ ಮಕ್ಕಳು ಇದ್ದುದ್ದರಿಂದ ಎರಡು ಆರೋಪ ಪಟ್ಟಿ ಸಲ್ಲಿಸಲಾಗಿದೆ. ಹೀಗಾಗಿ, ನಾವು ಎರಡು ಜಾಮೀನು ಅರ್ಜಿ ಸಲ್ಲಿಸಿದ್ದೆವು. ಈಗ ಎರಡೂ ಅರ್ಜಿಗಳನ್ನು ಹೈಕೋರ್ಟ್ ಪುರಸ್ಕರಿಸಿದೆ. ಎರಡನೇ ಎಫ್‌ಐಆರ್‌ನಲ್ಲಿ ಸ್ವಾಮೀಜಿ ಬಂಧನವಾಗಿಲ್ಲ. ಆ ಪ್ರಕರಣದಲ್ಲಿ ಬಾಡಿ ವಾರೆಂಟ್ ಮೂಲಕ ಕಸ್ಟಡಿಗೆ ಪಡೆದು ಬಳಿಕ ನ್ಯಾಯಾಂಗ ಬಂಧನಕ್ಕೆ ನೀಡಲು ಕೋರಲಾಗಿದೆ. ಈಗ ಆರೋಪಿ ಯಾವ ಪ್ರಕರಣದಲ್ಲಿ ಕಸ್ಟಡಿಯಲ್ಲಿದ್ದಾರೋ ಆ ಪ್ರಕರಣದಲ್ಲಿ ಜಾಮೀನು ಮಂಜೂರಾದರೆ ಬಿಡುಗಡೆ ಮಾಡಬೇಕು ಎಂದು ಬೇರೆ ಪ್ರಕರಣದಲ್ಲಿ ಹೈಕೋರ್ಟ್ ಆದೇಶವಿದೆ. ಈ ಆದೇಶ ಬಹಳ ಮಂದಿಗೆ ತಿಳಿದಿಲ್ಲ. ಮೊದಲ ಪ್ರಕರಣದಲ್ಲಿ ಜಾಮೀನು ಮಂಜೂರಾಗಿದ್ದು, ಎರಡನೇ ಪ್ರಕರಣದಲ್ಲಿ ಜಾಮೀನು ಮಂಜೂರು ಆಗುವವರೆಗೆ ಬಿಡುಗಡೆ ಮಾಡಲಾಗದು ಎಂದು ಸಹಜವಾಗಿ ಹೇಳುತ್ತಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ಎರಡೂ ಆದೇಶಗಳನ್ನು ಸಲ್ಲಿಸಲಾಗುವುದು. ಇದಕ್ಕೆ ವಿಚಾರಣಾಧೀನ ನ್ಯಾಯಾಲಯ ಒಪ್ಪಿದರೆ ಸ್ವಾಮೀಜಿ ಬಿಡುಗಡೆಯಾಗುತ್ತಾರೆ. ಇಲ್ಲವಾದಲ್ಲಿ ಎರಡನೇ ಪ್ರಕರಣದಲ್ಲೂ ಹೈಕೋರ್ಟ್ ಮೆಟ್ಟಿಲೇರಿ ಜಾಮೀನು ಮಂಜೂರು ಮಾಡಿಸಿಕೊಂಡು ಬಿಡುಗಡೆ ಕೋರಬೇಕಿದೆ” ಎಂದಿದ್ದರು.
ಜಾಮೀನು ಪ್ರಕ್ರಿಯೆ: ಮೊದಲನೇ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಹೈಕೋರ್ಟ್ ಆರೋಪಿ ಮುರುಘಾ ಶರಣರಿಗೆ ಜಾಮೀನು ಮಂಜೂರು ಮಾಡಿದ್ದು, ಭದ್ರತಾ ಖಾತರಿ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಭದ್ರತೆ ನೀಡುವವರು ಸಲ್ಲಿಸುವ ಆಸ್ತಿ ದಾಖಲೆಗಳನ್ನು ʼಭೂಮಿʼ ಅಪ್ಲಿಕೇಶನ್‌ನಲ್ಲಿ ಪರಿಶೀಲಿಸುವುದನ್ನು ಹೈಕೋರ್ಟ್ ಕಡ್ಡಾಯಗೊಳಿಸಿದೆ. ಈ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ನವೆಂಬರ್ 15ರಂದು ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಸರ್ಕಾರಿ ಅಭಿಯೋಜಕಿ ಕೆ ಬಿ ನಾಗವೇಣಿ ಅವರು “ಬಾರ್ ಅಂಡ್ ಬೆಂಚ್”ಗೆ ತಿಳಿಸಿದ್ದಾರೆ.