Karnataka HC and Online games 
ಸುದ್ದಿಗಳು

[ಆನ್‌ಲೈನ್‌ ಜೂಜು ನಿಷೇಧ] ಸಮಾಜದ ಸ್ವಾಸ್ಥ್ಯ ಕಾಪಾಡಲು ಕಾಯಿದೆಗೆ ತಿದ್ದುಪಡಿ: ಎಜಿ ಪ್ರಭುಲಿಂಗ ನಾವದಗಿ

ಜೂಜು ನಿಷೇಧಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್ ಸೂದ್ ವರದಿಯ ಶಿಫಾರಸುಗಳನ್ನು ಆಧರಿಸಿಯೇ ಸರ್ಕಾರವು ಕಾಯಿದೆಗೆ ತಿದ್ದುಪಡಿ ತಂದಿದೆ ಎಂದ ಎಜಿ.

Bar & Bench

ಆನ್‌ಲೈನ್‌ ಜೂಜಾಟ ಇಂದು ಸಾಮಾಜಿಕ ಪಿಡುಗಾಗಿ ಪರಿಣಿಮಿಸಿದ್ದು, ಅದನ್ನು ಹತ್ತಿಕ್ಕುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುವ ಉದ್ದೇಶದಿಂದ ಕರ್ನಾಟಕ ಪೊಲೀಸ್ ಕಾಯಿದೆಗೆ ತಿದ್ದುಪಡಿ ತರಲಾಗಿದೆ ಎಂದು ಬುಧವಾರ ರಾಜ್ಯ ಸರ್ಕಾರವು ತನ್ನ ನಿಲುವನ್ನು ಬಲವಾಗಿ ಕರ್ನಾಟಕ ಹೈಕೋರ್ಟ್ ಮುಂದೆ ಸಮರ್ಥಿಸಿಕೊಂಡಿತು.

ಆಲ್ ಇಂಡಿಯಾ ಗೇಮಿಂಗ್ ಫೆಡರೇಷನ್ ಮತ್ತಿತರ ಕಂಪೆನಿಗಳು ಸಲ್ಲಿಸಿರುವ ರಿಟ್‌ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ನೇತೃತ್ವದ ವಿಶೇಷ ವಿಭಾಗೀಯ ಪೀಠ ನಡೆಸಿತು.

ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು “ಸರ್ಕಾರ ತಂದಿರುವ ತಿದ್ದುಪಡಿಯನ್ನು ನ್ಯಾಯಾಲಯ ಕೇವಲ ಮಾಹಿತಿ ತಂತ್ರಜ್ಞಾನ ಕಾಯಿದೆ ಅಥವಾ ಪ್ರಸರಣ ಕಾಯಿದೆ ಅಡಿಯಲ್ಲಿ ನೋಡಬಾರದು. ಸಮಾಜದಲ್ಲಿ ಹಲವರು ಹಣ ಕಳೆದುಕೊಳ್ಳುತ್ತಿರುವುದರಿಂದ ಆನ್‌ಲೈನ್ ಗೇಮ್ ಗಳನ್ನು ನಿಷೇಸಲಾಗಿದೆ. ಜೂಜು ನಿಷೇಧಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್ ಸೂದ್ ವರದಿಯ ಶಿಫಾರಸುಗಳನ್ನು ಆಧರಿಸಿಯೇ ಸರ್ಕಾರವು ಕಾಯಿದೆಗೆ ತಿದ್ದುಪಡಿ ತಂದಿದೆ” ಎಂದು ವಿವರಿಸಿದರು.

ಇದೊಂದು ಹೊಸ ಮತ್ತು ಅಪರೂಪದ ಸಂದರ್ಭ. ಈ ಪ್ರಕರಣವನ್ನು ಕಾನೂನಾತ್ಮಕ ವಿಮರ್ಶೆಯ ಜೊತೆ ಜೊತೆಗೇ, ಜೂಜನ್ನು ಒಂದು ಪಿಡುಗು ಎಂದು ಭಾವಿಸಿ ಪರಿಶೀಲಿಸಬೇಕಾದ ಅವಶ್ಯಕತೆ ಇದೆ. ತಿದ್ದುಪಡಿ ಮಸೂದೆಗೆ ಶಾಸನಸಭೆಯ ಸದಸ್ಯರು ಅತ್ಯಂತ ವಿವೇಚನೆಯಿಂದ ಒಪ್ಪಿಗೆ ನೀಡಿದ್ದಾರೆ. ಆದ್ದರಿಂದ, ಪೀಠವು ಇದನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು ಎಂದು ಮನವಿ ಮಾಡಿದರು.

ವಾದ ಆಲಿಸಿದ ನ್ಯಾಯಾಲಯವು ವಿಚಾರಣೆಯನ್ನು ಡಿಸೆಂಬರ್ 6ಕ್ಕೆ ಮುಂದೂಡಿತು.