ಯಾವುದೇ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಳ್ಳುವವರೆಗೆ ಪೊಲೀಸರು ಪ್ರಕರಣದ ತನಿಖೆಯ ಕುರಿತಾಗಿ, ಅದರ ಆರೋಪಿಗಳು ಅಥವಾ ಸಂತ್ರಸ್ತರ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡದಂತೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಮಂಗಳವಾರ ಸೂಚಿಸಿದೆ. ಈ ಸಂಬಂಧ ನಾಲ್ಕು ವಾರಗಳಲ್ಲಿ ಮಾರ್ಗಸೂಚಿ, ನಿರ್ದೇಶನಗಳನ್ನು ರೂಪಿಸುವಂತೆಯೂ ಅದು ನಿರ್ದೇಶಿಸಿದೆ.
ಮುಖ್ಯ ನ್ಯಾಯಮೂರ್ತಿಗಳಾದ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ನಿಯಮ ಉಲ್ಲಂಘಿಸುವ ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದೂ ಸೂಚಿಸಿದೆ.
“ತನಿಖೆ ಪೂರ್ಣಗೊಳ್ಳುವ ಮೊದಲು ಅದರ ಸ್ವರೂಪವನ್ನು ತನಿಖಾಧಿಕಾರಿಗಳು ಬಹಿರಂಗಪಡಿಸದಂತೆ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸಮಗ್ರ ನಿರ್ದೇಶನ ನೀಡಬೇಕು ಎಂಬುದು ನಮ್ಮ ನಿಲುವು. ದೂರುದಾರರು ಮತ್ತು ಆರೋಪಿಗಳ ಕುರಿತು ಕೂಡ ಅವರು ಮಾಹಿತಿ ನೀಡುವಂತಿಲ್ಲ ಎನ್ನುವುದು ಇನ್ನೊಂದು ನಿರ್ದೇಶನವಾಗಿದೆ. ನಿರ್ದೇಶನ ನೀಡಿದ ಮಾತ್ರಕ್ಕೆ ಉದ್ದೇಶ ಪೂರ್ಣಗೊಂಡಂತಾಗುವುದಿಲ್ಲ. (ನಿಯಮ) ಉಲ್ಲಂಘನೆಗಾಗಿ ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ. ಈ ಸಂಬಂಧ ನಾಲ್ಕು ವಾರಗಳಲ್ಲಿ ಮಾರ್ಗಸೂಚಿ, ನಿರ್ದೇಶನಗಳನ್ನು ರೂಪಿಸುವಂತೆ ಅದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಎಲೆಕ್ಟ್ರಾನಿಕ್ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಸುದ್ದಿ ಅಥವಾ ಇನ್ನಾವುದೇ ಕಾರ್ಯಕ್ರಮದ ಭಾಗವಾಗಿ ಅಸಭ್ಯ ಮತ್ತು ಅಶ್ಲೀಲ ವಿಚಾರ ಪ್ರಕಟಿಸುವುದಕ್ಕೆ ತಡೆ ನೀಡಲು ಶಾಸನಬದ್ಧ ನಿಯಮ ರೂಪಿಸಲು ನಿರ್ದೇಶನ ನೀಡಬೇಕೆಂದು ಕೋರಿ ವಕೀಲೆ ದೀಪಶ್ರೀ ಅವರು ಸಲ್ಲಿಸಿದ ಅರ್ಜಿಯ ಮೇರೆಗೆ ಈ ಆದೇಶ ಜಾರಿಗೊಳಿಸಲಾಗಿದೆ.
ಪ್ರಕರಣಗಳ ವಿಚಾರಣೆ ವೇಳೆ ಪೊಲೀಸ್ ಅಧಿಕಾರಿಗಳು ಮಾಧ್ಯಮಗಳಿಗೆ ತನಿಖೆಯ ವಿವರಗಳನ್ನು ಬಹಿರಂಗ ಪಡಿಸುವ ಘಟನೆಗಳು ಹೆಚ್ಚುತ್ತಿವೆ ಎಂಬುದನ್ನು ನ್ಯಾಯಾಲಯ ಗಮನಿಸಿದ್ದು ಸರ್ಕಾರವನ್ನುದ್ದೇಶಿಸಿ “ನಿಮ್ಮ ಪೊಲೀಸ್ ಅಧಿಕಾರಿಗಳು ಮಾಧ್ಯಮಗಳಿಗೆ ಆರೋಪಿಗಳ ಬಗ್ಗೆ100% ಪುರಾವೆಗಳಿವೆ ಎಂದು ಹೇಳುತ್ತಾರೆ. ಅಧಿಕಾರಿಗಳಿಗೆ ಮಾದರಿ ನೀತಿ ಸಂಹಿತೆ ಇರಬೇಕು” ಎಂದು ಹೇಳಿತು. ಅಂತಹ ಅಧಿಕಾರಿಗಳ ವಿರುದ್ಧ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಶ್ನಿಸಿದ ನ್ಯಾಯಾಲಯ ಆ ರೀತಿಯ ನಿದರ್ಶನಗಳನ್ನು ನ್ಯಾಯಾಂಗ ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿತು.
ಆಗ ರಾಜ್ಯ ಸರ್ಕಾರದ ಪರ ಹಾಜರಾದ ವಕೀಲರು, “ತನಿಖಾಧಿಕಾರಿಗಳು ಮಾಧ್ಯಮಗಳೊಂದಿಗೆ ಒಂದು ʼಮಾತೂʼ ಆಡುವುದಿಲ್ಲ” ಎಂದು ಸಮಜಾಯಿಷಿ ನೀಡಿದರು. ಈ ಹಂತದಲ್ಲಿ ಪೀಠ “ಆ ಬಳಿಕ ನೇರವಾಗಿ ಅಥವಾ ಪರೋಕ್ಷವಾಗಿ ಮಾಹಿತಿಯನ್ನು ಸೋರಿಕೆ ಮಾಡಲಾಗುತ್ತಿದೆ” ಎಂದು ತಿರುಗೇಟು ನೀಡಿತು.
"ಕೇಬಲ್ ಟಿವಿ ಕಾಯಿದೆಯಡಿ ರೂಪಿಸಲಾಗಿರುವ ಕಾರ್ಯಕ್ರಮ ಸಂಹಿತೆ ಎಲೆಕ್ಟ್ರಾನಿಕ್ ಮಾಧ್ಯಮವನ್ನು ನಿಯಂತ್ರಿಸುತ್ತಾದರೂ ಅದಕ್ಕೆ ಹಲ್ಲುಗಳಿಲ್ಲ" ಎಂದು ಅರ್ಜಿದಾರರು ವಾದಿಸಿದರು. ಆಗ ನ್ಯಾಯಾಲಯ “ಇದು ನಿಯಂತ್ರಿಸಲು ಸಾಧ್ಯವಿಲ್ಲದ ವಿಚಾರವಾಗಿದ್ದು. ಆಗ ಅವು (ಎಲೆಕ್ಟ್ರಾನಿಕ್ ಮಾಧ್ಯಮಗಳು) ಯೂಟ್ಯೂಬ್ ಚಾನೆಲ್ ಆರಂಭಿಸಬಹುದು” ಎಂದು ಅಭಿಪ್ರಾಯಪಟ್ಟಿತು.
ಅಲ್ಲದೆ ಪೀಠ “ಮಾಧ್ಯಮಗಳ ತನಿಖೆಗೆ ಸಂಬಂಧಿಸಿದ ಮಾಹಿತಿ ಸೋರಿಕೆ ಮಾಡುವುದರಿಂದ ಅದು ತನಿಖೆಯ ಮೇಲೆ ಪರಿಣಾಮ ಬೀರುತ್ತದೆ. ಆರೋಪಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರೆ ಆಗ ನ್ಯಾಯಾಂಗದ ವಿಚಾರಣೆಯ ಮೇಲೂ ಪ್ರಭಾವ ಬೀರುತ್ತದೆ” ಎಂದು ಹೇಳಿದೆ. ಪ್ರಕರಣವನ್ನು ಜುಲೈ 20ಕ್ಕೆ ಮುಂದೂಡಲಾಗಿದ್ದು ಅಷ್ಟರಲ್ಲಿ ಪೊಲೀಸರು ಮಾಧ್ಯಮಗಳೊಂದಿಗೆ ಸಂವಹನ ನಡೆಸುವ ಕುರಿತು ಮಾರ್ಗಸೂಚಿಗಳನ್ನು ರೂಪಿಸುವ ನಿರೀಕ್ಷೆ ಇದೆ.