Atiq Ahmed and Supreme Court 
ಸುದ್ದಿಗಳು

ಅತೀಕ್ ಅಹಮದ್‌ ಹತ್ಯೆ: ಪೊಲೀಸರ ತಪ್ಪಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಉತ್ತರ ಪ್ರದೇಶ ಸರ್ಕಾರದ ವಿವರಣೆ

ಅತೀಕ್ ಅಹಮದ್‌ ಹತ್ಯೆಯ ತನಿಖೆಯಲ್ಲಿ ತಾನು ಯಾವುದೇ ಅಂಶವನ್ನು ಕಡೆಗಣಿಸಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರ ಸಮರ್ಥಿಸಿಕೊಂಡಿದ್ದು ಪೊಲೀಸರ ವಿರುದ್ಧ ಮಾಡಿದ ವ್ಯಾಪಕ ಆರೋಪಗಳು ಸುಳ್ಳು ಎಂದು ಅದು ವಾದಿಸಿದೆ.

Bar & Bench

ಕಳೆದ ಏಪ್ರಿಲ್‌ನಲ್ಲಿ ಆಸ್ಪತ್ರೆಯೊಂದರ ಹೊರಗೆ ಪೊಲೀಸರ ವಶದಲ್ಲಿದ್ದ ಪಾತಕಿ ಮತ್ತು ರಾಜಕಾರಣಿ ಅತೀಕ್‌ ಅಹಮದ್‌ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರ ಲೋಪ ಇಲ್ಲ ಎಂದು ಉತ್ತರ ಪ್ರದೇಶ ಸರ್ಕಾರ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ [ವಿಶಾಲ್ ತಿವಾರಿ ಮತ್ತು ಉ ಪ್ರದೇಶ ಸರ್ಕಾರ ನಡುವಣ ಪ್ರಕರಣ].

ಅತೀಕ್‌ ಹತ್ಯೆ ಸೇರಿದಂತೆ ನಕಲಿ ಎಂದು ಆರೋಪಿಸಲಾದ ಏಳು ಎನ್‌ಕೌಂಟರ್ ಹತ್ಯೆಗಳ ಬಗ್ಗೆ ತನಿಖೆ ನಡೆಸಿರುವುದಾಗಿ ಸರ್ಕಾರ ಹೇಳಿದ್ದು ಉತ್ತರ ಪ್ರದೇಶ ಪೊಲೀಸರು ಯಾವುದೇ ಲೋಪ ಎಸಗಿಲ್ಲ ಎಂದು ಅದು ಹೇಳಿದೆ.

ಈ ಏಳು ಹತ್ಯೆಗಳಲ್ಲಿ ಅತೀಕ್‌ನನ್ನು ಕೊಲ್ಲುವ ಎರಡು ದಿನಗಳ ಮುನ್ನ ಆತನ ಪುತ್ರನನ್ನು ಕೊಲ್ಲಲಾದ ಪ್ರಕರಣ ಮತ್ತು ಅತೀಕ್‌ ಜೊತೆಗೆ ಆತನ ಸಹೋದರನನ್ನು ಹತ್ಯೆ ಮಾಡಿದ ಪ್ರಕರಣ ಹಾಗೂ 2020 ರಲ್ಲಿ ಹತನಾದ ದರೋಡೆಕಾರ ವಿಕಾಸ್‌ ದುಬೆ ಪ್ರಕರಣಗಳು ಸೇರಿವೆ.

ಅತೀಕ್ ಅಹಮದ್‌ ಹತ್ಯೆಯ ತನಿಖೆಯಲ್ಲಿ ಎಲ್ಲಾ ಅಂಶಗಳನ್ನು ಪರಿಗಣಿಸಲಾಗಿದೆ ಎಂಬುದನ್ನು ಪುನರುಚ್ಚರಿಸಿದ ಸರ್ಕಾರ ಮತ್ತು ಪೊಲೀಸರ ವಿರುದ್ಧ ಮಾಡಿದ ವ್ಯಾಪಕ ಆರೋಪಗಳು ಸುಳ್ಳು ಎಂದಿದೆ.