Punjab and Haryana High Court, Chandigarh 
ಸುದ್ದಿಗಳು

ಲಾರೆನ್ಸ್ ಬಿಷ್ಣೋಯಿಗಾಗಿ ಟಿವಿ ಸ್ಟುಡಿಯೋ ಆದ ಪೊಲೀಸ್ ಠಾಣೆ: ಪಂಜಾಬ್ ಹೈಕೋರ್ಟ್ ಕಿಡಿ

ಬಿಷ್ಣೋಯಿ ಎಬಿಪಿ ನ್ಯೂಸ್‌ಗೆ ನೀಡಿದ ಸಂದರ್ಶನಕ್ಕೆ ಸಂಬಂಧಿಸಿದಂತೆ ರದ್ದತಿ ವರದಿ ಸಲ್ಲಿಸುವ ಎಸ್ಐಟಿ ನಿರ್ಧಾರವನ್ನು ಕೂಡ ಪೀಠ ಇದೇ ವೇಳೆ ಪ್ರಶ್ನಿಸಿತು.

Bar & Bench

ಪಂಜಾಬಿ ಗಾಯಕ ಸಿದ್ದು ಮೂಸೆವಾಲಾ ಹತ್ಯೆ, ನಟ ಸಲ್ಮಾನ್‌ ಖಾನ್‌ಗೆ ಜೀವ ಬೆದರಿಕೆ, ರಾಜಕಾರಣಿ ಬಾಬಾ ಸಿದ್ದೀಕ್‌ ಹತ್ಯೆ, ಖಾಲಿಸ್ತಾನಿ ಪ್ರತ್ಯೇಕವಾದಿ ನಾಯಕ ಹರ್‌ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಪ್ರಕರಣಗಳ ಆರೋಪಿ ಪಾತಕಿ ಲಾರೆನ್ಸ್‌ ಬಿಷ್ಣೋಯಿ ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಲು ಅನುಕೂಲವಾಗುವಂತೆ ಪಂಜಾಬ್‌ ಪೊಲೀಸರು ಸ್ಟುಡಿಯೋದಂತಹ ಸೌಲಭ್ಯ ಒದಗಿಸಿದ್ದಾರೆ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಬುಧವಾರ ಕೆಂಡಕಾರಿದೆ [ಸ್ವಯಂ ಪ್ರೇರಿತ ಪ್ರಕರಣ ಮತ್ತು ಪಂಜಾಬ್‌ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಜೈಲು ಆವರಣದೊಳಗೆ ಕೈದಿಗಳು ಮೊಬೈಲ್ ಫೋನ್ ಬಳಸುತ್ತಿರುವುದಕ್ಕೆ ಸಂಬಂಧಿಸಿದ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಅನುಪಿಂದರ್ ಸಿಂಗ್ ಗ್ರೆವಾಲ್ ಮತ್ತು ಲಪಿತಾ ಬ್ಯಾನರ್ಜಿ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು. 

"ಪೊಲೀಸ್ ಅಧಿಕಾರಿಗಳು ಅಪರಾಧಿಗೆ ಎಲೆಕ್ಟ್ರಾನಿಕ್ ಸಾಧನ ಬಳಸಲು ಅವಕಾಶ ಮಾಡಿಕೊಟ್ಟರು ಮತ್ತು ಸಂದರ್ಶನ ನಡೆಸಲು ಸ್ಟುಡಿಯೊದಂತಹ ಸೌಲಭ್ಯ ಒದಗಿಸಿದರು. ಇದು ಅಪರಾಧಿ ಮತ್ತು ಅವನ ಸಹಚರು ಸುಲಿಗೆ ಸೇರಿದಂತೆ ಇತರ ಅಪರಾಧ ನಡೆಸುವ ಸಂಭವನೀಯತೆಯ ಜೊತೆಗೆ ಅಪರಾಧ ವೈಭವೀಕರಿಸಲು ಕಾರಣವಾಗಿದೆ. ಪೋಲೀಸ್ ಅಧಿಕಾರಿಗಳು ಭಾಗಿಯಾಗಿರುವುದು ಅಪರಾಧಿ ಅಥವಾ ಆತನ ಸಹಚರರಿಂದ ಅಕ್ರಮ ಲಾಭ ಪಡೆದಿರುವುದನ್ನು ಹೇಳುವಂತಿದ್ದು ಭ್ರಷ್ಟಾಚಾರ ತಡೆ ಕಾಯಿದೆಯಡಿ ಆರೋಪ ನಿಗದಿಪಡಿಸಬಹುದಾಗಿದೆ. ಹೀಗಾಗಿ ಹೆಚ್ಚಿನ ತನಿಖೆ ಅಗತ್ಯವಿದೆ" ಎಂದು ನ್ಯಾಯಾಲಯ ಹೇಳಿದೆ.

ಬಿಷ್ಣೋಯಿ ಅವರು ಎಬಿಪಿ ನ್ಯೂಸ್‌ಗೆ ನೀಡಿದ ಸಂದರ್ಶನಕ್ಕೆ ಸಂಬಂಧಿಸಿದಂತೆ ರದ್ದತಿ ವರದಿ ಸಲ್ಲಿಸುವ ಎಸ್ಐಟಿ ನಿರ್ಧಾರವನ್ನು ಪೀಠ ಇದೇ ವೇಳೆ ಪ್ರಶ್ನಿಸಿತು.

ಪಂಜಾಬಿ ಗಾಯಕ ಶುಭದೀಪ್ ಸಿಂಗ್ ಸಿಧು ಅಲಿಯಾಸ್ ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಬಿಷ್ಣೋಯಿ ಶಂಕಿತ ಆರೋಪಿಯಾಗಿದ್ದ. ಆಗ ಆತನ ಸಂದರ್ಶನವನ್ನು ಮಾರ್ಚ್ 2023 ರಲ್ಲಿ ಸುದ್ದಿ ವಾಹಿನಿ ಎಬಿಪಿ ನ್ಯೂಸ್‌ ಪ್ರಸಾರ ಮಾಡಿತ್ತು. ಸುದ್ದಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಆತ ಕೊಲೆಯ ಸಂಚಿನ ಬಗ್ಗೆ ತನಗೆ  ತಿಳಿದಿತ್ತು ಎಂದಿದ್ದ.

ವಿಚಾರಣೆ ವೇಳೆ ನ್ಯಾಯಾಲಯ “ ಸಂದರ್ಶನ ನಡೆಸಲು ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿಯ ಕಚೇರಿಯನ್ನು ಸ್ಟುಡಿಯೋವಾಗಿ ಬಳಸಲಾಗಿದೆ. ಸಂದರ್ಶನ ನಡೆಸುವುದಕ್ಕಾಗಿ ಠಾಣೆಯ ವೈ-ಫೈ  ಸೌಲಭ್ಯವನ್ನು ಒದಗಿಸಿರುವುದು ಕ್ರಿಮಿನಲ್ ಪಿತೂರಿಯ ಕಡೆಗೆ ಬೆರಳು ಮಾಡುತ್ತದೆ.. ರೋಜ್‌ನಾಮ್‌ಚಾ (ಠಾಣಾ ಡೈರಿ) ಕೂಡ ನಕಲಿ, ಜೊತೆಗೆ ತಿರುಚಲಾಗಿದೆ ಎಂದು ವರದಿ ಸೂಚಿಸುತ್ತದೆ. ಇದು ಹೆಚ್ಚಿನ ತನಿಖೆಗೆ ಕರೆ ನೀಡುತ್ತದೆ. ಉಳಿದ ಅಪರಾಧಗಳ ಜೊತೆಗೆ ಭ್ರಷ್ಟಾಚಾರ ತಡೆ ಕಾಯಿದೆಯಡಿಯ ಅಪರಾಧಗಳ ಕುರಿತಾಗಿ ಪರಿಶೀಲಿಸಬೇಕಿದೆ” ಎಂದು ಅದು ಹೇಳಿದೆ.

ಪಂಜಾಬ್ ರಾಜ್ಯ ಮಾನವ ಹಕ್ಕುಗಳ ಆಯೋಗದ ವಿಶೇಷ ಡಿಜಿಪಿ ಪ್ರಬೋಧ್ ಕುಮಾರ್ ಅವರು ಭ್ರಷ್ಟಾಚಾರ ತಡೆ ಕಾಯಿದೆ ಸೇರಿದಂತೆ ಇತರ ಅಪರಾಧಗಳನ್ನು ಪರಿಶೀಲಿಸುವ ಅಧಿಕಾರವನ್ನು ಎಸ್ಐಟಿ ಹೊಂದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಆದರೆ, ಇದನ್ನು ಒಪ್ಪದ ನ್ಯಾಯಾಲಯ, ಪ್ರಕರಣದ ಕುರಿತು ಹೆಚ್ಚಿನ ತನಿಖೆಗೆ ಆದೇಶಿಸಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಗೆಜೆಟೆಡ್ ಅಧಿಕಾರಿಗಳು ಸೇರಿದಂತೆ ಏಳು ಪಂಜಾಬ್ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದ್ದು 8 ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆ ಆರಂಭಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಈ ಹಿಂದೆ ತಿಳಿಸಲಾಗಿತ್ತು. ಸೇವೆಯಲ್ಲಿ ಮುಂದುವರೆದಿದ್ದ ಠಾಣೆಯ ಅಂದಿನ ಪ್ರಭಾರಿ ಅಧಿಕಾರಿಯಾಗಿದ್ದ ಇನ್‌ಸ್ಪೆಕ್ಟರ್‌ ಶಿವಕುಮಾರ್‌ ಅವರನ್ನು ವಜಾಗೊಳಿಸಲಾಗಿದೆ ಎಂದು ವಿವರಿಸಲಾಗಿತ್ತು.

ಸಂದರ್ಶನಕ್ಕೆ ಅನುಕೂಲ ಮಾಡಿಕೊಟ್ಟ ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಕೆಳಹಂತದ ಅಧಿಕಾರಿಗಳನ್ನು ಗುರಿಪಡಿಸಬಾರದು ಎಂದು ತಾನು ಈ ಹಿಂದೆ ತಿಳಿಸಿದ್ದನ್ನು  ಪ್ರಸ್ತಾಪಿಸಿದ ನ್ಯಾಯಾಲಯ ಹಿರಿಯ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಂತೆ ಕಾಣುತ್ತಿಲ್ಲ ಎಂದಿತು.   

ಈ ಬಗ್ಗೆ ಅಫಿಡವಿಟ್‌ ಸಲ್ಲಿಸುವಂತೆ ಡಿಜಿಪಿ ಅವರಿಗೆ ನ್ಯಾಯಾಲಯ ಸೂಚಿಸಿದೆ.  ಸಂದರ್ಶನ ಪಂಜಾಬ್‌ ಜೈಲಿನಲ್ಲಿ ನಡೆದಿಲ್ಲ ಎಂದು ಹಿಂದಿನ ಪತ್ರಿಕಾಗೋಷ್ಠಿಯಲ್ಲಿ ತಾನು ನೀಡಿದ್ದ ಹೇಳಿಕೆ ಸಮರ್ಥಿಸಿಕೊಳ್ಳುವುಂತೆಯೂ ಡಿಜಿಪಿ ಅವರಿಗೆ ಸೂಚಿಸಿದೆ.  ಇದೇ ವೇಳೆ ಅಂತರ್ಜಾಲದಲ್ಲಿ ಸಂದರ್ಶನ ಈಗಲೂ ಪ್ರಸಾರವಾಗುತ್ತಿದ್ದರೆ ಅದನ್ನು ಕೂಡಲೇ ತೆಗೆದುಹಾಕಬೇಕು ಎಂದು ಅದು ತಾಕೀತು ಮಾಡಿದೆ.