Supreme Court 
ಸುದ್ದಿಗಳು

ಪೊಲೀಸರು, ನ್ಯಾಯಾಲಯಗಳಿಗೆ ವಂಚನೆ ಮತ್ತು ಕ್ರಿಮಿನಲ್‌ ವಿಶ್ವಾಸದ್ರೋಹದ ನಡುವಿನ ವ್ಯತ್ಯಾಸ ತಿಳಿದಿಲ್ಲ: ಸುಪ್ರೀಂ ಬೇಸರ

Bar & Bench

ಭಾರತೀಯ ದಂಡ ಸಂಹಿತೆ (ಐಪಿಸಿ) ಜಾರಿಯಾಗಿ 162 ವರ್ಷಗಳಾದರೂ, ಕ್ರಿಮಿನಲ್ ವಿಶ್ವಾಸ ದ್ರೋಹ ಮತ್ತು ವಂಚನೆ ನಡುವಿನ ಸರಿಯಾದ ವ್ಯತ್ಯಾಸ ಅರ್ಥಮಾಡಿಕೊಳ್ಳಲು ಪೊಲೀಸರು ಮತ್ತು ನ್ಯಾಯಾಲಯಗಳಿಗೆ ಸಾಧ್ಯವಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ವಿಷಾದ ವ್ಯಕ್ತಪಡಿಸಿದೆ [ದೆಹಲಿ ರೇಸ್ (1940) ಲಿಮಿಟೆಡ್ ಮತ್ತಿತರರು ಹಾಗೂ ಉತ್ತರ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಅಪ್ರಾಮಾಣಿಕತೆ ಅಥವಾ ವಂಚನೆಯ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಅಧಿಕಾರಿಗಳು ಯಾಂತ್ರಿಕವಾಗಿ ಎಫ್‌ಐಆರ್‌‌ ದಾಖಲಿಸುತ್ತಿರುವುದು ಬೇಸರದ ಸಂಗತಿ ಎಂದು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್‌‌ ಮಿಶ್ರಾ ಅವರಿದ್ದ ಪೀಠ ತಿಳಿಸಿದ್ದು ಈ ಸಂಬಂಧ ಪೊಲೀಸ್ ಅಧಿಕಾರಿಗಳ ತರಬೇತಿಗೆ ಕರೆ ನೀಡಿದೆ.

ಕ್ರಿಮಿನಲ್‌ ವಿಶ್ವಾಸ ದ್ರೋಹ ಮತ್ತು ಅಪ್ರಾಮಾಣಿಕತೆ ಇಲ್ಲವೇ ವಂಚನೆಯ ಎರಡು ಆರೋಪಗಳಿಗೆ ಸಂಬಂಧಿಸಿದಂತೆ ರೂಢಿಗತವಾಗಿ ಮತ್ತು ಯಾಂತ್ರಿಕವಾಗಿ ಎಫ್‌ಐಆರ್‌ ದಾಖಲಿಸುವುದು ಪೊಲೀಸರಿಗೆ ಅಭ್ಯಾಸವಾಗಿಬಿಟ್ಟಿದೆ. ಎರಡೂ ಅಪರಾಧಗಳು ಬೇರೆ ಬೇರೆಯಾಗಿದ್ದು ಒಂದೇ ಅರ್ಥ ಹೊಮ್ಮಿಸದ ಅವುಗಳ ನಡುವಿನ ಸರಿಯಾದ ವ್ಯತ್ಯಾಸ ಅರ್ಥಮಾಡಿಕೊಳ್ಳಲು ದೇಶದ ಎಲ್ಲಾ ಪೊಲೀಸರಿಗೆ ಸೂಕ್ತ ತರಬೇತಿ ನೀಡುವ ಅಗತ್ಯವಿದೆ ಎಂಬುದಾಗಿ ನ್ಯಾಯಾಲಯ ನುಡಿದಿದೆ.

 ಐಪಿಸಿ ಸೆಕ್ಷನ್ 406 (ಕ್ರಿಮಿನಲ್ ವಿಶ್ವಾಸ ದ್ರೋಹ), 420 (ವಂಚನೆ) ಮತ್ತು 120 ಬಿ (ಅಪರಾಧ ಪಿತೂರಿ) ಅಡಿಯಲ್ಲಿ ದಾಖಲಿಸಲಾಗಿದ್ದ ದೂರಿಗೆ ಸಂಬಂಧಿಸಿದಂತೆ ಸಮನ್ಸ್ ಆದೇಶ ರದ್ದುಗೊಳಿಸಲು ನಿರಾಕರಿಸಿದ್ದ ಅಲಾಹಾಬಾದ್ ಹೈಕೋರ್ಟ್ ಆದೇಶ ಪ್ರಶ್ನಿಸಿ ಕುದುರೆ ರೇಸಿಂಗ್ ಕಂಪನಿ ಮತ್ತು ಅದರ ಕಾರ್ಯದರ್ಶಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಂಶಗಳನ್ನು ತಿಳಿಸಿದೆ.

ಕುದುರೆ ಆಹಾರಕ್ಕಾಗಿ ರೇಸಿಂಗ್‌ ಕಂಪೆನಿ ತಮಗೆ ₹9,11,434 ಪಾವತಿಸಿಲ್ಲ ಎಂದು ದೂರುದಾರರು ಆರೋಪಿಸಿದ್ದರು . ತನ್ನ ವಿರುದ್ಧ ವಿಚಾರಣಾ ನ್ಯಾಯಾಲಯ ನೀಡಿದ್ದ ಸಮನ್ಸ್‌ ತಡೆಹಿಡಿಯಲು ಅಲಾಹಾಬಾದ್‌ ಹೈಕೋರ್ಟ್‌ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಕಂಪೆನಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.

 ವಂಚನೆ ಅಥವಾ ಕ್ರಿಮಿನಲ್‌ ವಿಶ್ವಾಸ ದ್ರೋಹ ಎಸಗಿದ ಅಪರಾಧಗಳಿಗೆ ಸಂಬಂಧಿಸಿದಂತೆ ಕಂಪೆನಿಯ ಪದಾಧಿಕಾರಿಗಳನ್ನು ಆರೋಪಿಗಳನ್ನಾಗಿಸಿರುವುದರ ಸಂಬಂಧ ಐಪಿಸಿಯಡಿ ಯಾವುದೇ ನಿಬಂಧನೆಗಳಿಲ್ಲ. ದೂರಿನ ಸಂಪೂರ್ಣ ನಿಖರತೆಯನ್ನು ಅಳೆಯಲು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ವಿಫಲವಾಗಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. 

ಇದಲ್ಲದೆ, ದೂರನ್ನು ಸ್ಥೂಲವಾಗಿ ಗಮನಿಸಿದರೂ ಕೂಡ, ವಂಚನೆ ಅಥವಾ ವಿಶ್ವಾಸದ್ರೋಹದ ಆರೋಪ ಹೊರಿಸಲಾಗದು ಎಂದು ನ್ಯಾಯಾಲಯ ಹೇಳಿದೆ. ಈ ಎರಡೂ ಅಪರಾಧಕ್ಕೆ ಸಂಬಂಧಿಸಿದ ಸೆಕ್ಷನ್‌ಗಳು ಅಪ್ರಾಮಾಣಿಕತೆಯನ್ನು ಗುರಿಯಾಗಿಸಿಕೊಂಡಿದ್ದರೂ, ಅವು  ಪರಸ್ಪರ ಬೇರೆ ಎಂದು ಅದು ಸ್ಪಷ್ಟಪಡಿಸಿದೆ.

ವಂಚನೆಯ ವಿಚಾರದಲ್ಲಿ ಸುಳ್ಳು ಅಥವಾ ತಪ್ಪುದಾರಿಗೆಳೆಯುವುದಕ್ಕೆ ಸಂಬಂಧಿಸಿದಂತೆ ಆರೋಪಿಗೆ ಕ್ರಿಮಿನಲ್‌ ಉದ್ದೇಶ ಇರುವುದು ಸಾಬೀತಾಗಿರಬೇಕು. ಆದರೆ ಕ್ರಿಮಿನಲ್‌ ವಿಶ್ವಾಸದ್ರೋಹದ ವಿಚಾರದಲ್ಲಿ ಕೇವಲ ವಿಶ್ವಾಸದ ಪುರಾವೆ ಸಾಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.