Justice N V Ramana
Justice N V Ramana 
ಸುದ್ದಿಗಳು

ಪ್ರತಿಕೂಲವಾಗಿ ಬದಲಾಗುತ್ತಿರುವ ರಾಜಕೀಯ ವಿರೋಧ, ಆರೋಗ್ಯಕರ ಪ್ರಜಾಪ್ರಭುತ್ವದ ಲಕ್ಷಣವಲ್ಲ: ಸಿಜೆಐ ರಮಣ

Bar & Bench

ದೇಶದಲ್ಲಿನ ರಾಜಕಾರಣದ ದ್ವೇಷ ಮತ್ತು ಪ್ರತಿಕೂಲ ಸ್ವರೂಪದಿಂದಾಗಿ ವಿರೋಧಕ್ಕೆ ಅವಕಾಶ ಕಡಿಮೆಯಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ವಿ ರಮಣ ವಿಷಾದ ವ್ಯಕ್ತಪಡಿಸಿದರು.

ಜೈಪುರದಲ್ಲಿ ಶನಿವಾರ ನಡೆದ ಡಿಜಿಟಲ್ ವಸ್ತುಸಂಗ್ರಾಹಲಯ ಉದ್ಘಾಟನೆ ಮತ್ತು ʼರಾಜಸ್ಥಾನ ವಿಧಾನಸಭೆಯಲ್ಲಿ 75 ವರ್ಷಗಳ ಸಂಸದೀಯ ಪ್ರಜಾಪ್ರಭುತ್ವʼ ಕುರಿತ ವಿಚಾರ ಸಂಕಿರಣದಲ್ಲಿ ಸಿಜೆಐ ಮಾತನಾಡಿದರು.

"ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಪರಸ್ಪರ ಸಾಕಷ್ಟು ಗೌರವವಿತ್ತು. ದುರದೃಷ್ಟವಶಾತ್ ವಿರೋಧಕ್ಕೆ ಅವಕಾಶ ಕಡಿಮೆಯಾಗುತ್ತಿದೆ. ವಿವರವಾದ ಚರ್ಚೆ ಮತ್ತು ಪರಿಶೀಲನೆ ಇಲ್ಲದೆ ಕಾನೂನು ಜಾರಿಗೆ ತರುತ್ತಿರುವುದನ್ನು ನಾವು ನೋಡುತ್ತಿದ್ದೇವೆ” ಎಂದರು.

ಸಿಜೆಐ ಭಾಷಣದ ಪ್ರಮುಖಾಂಶಗಳು

  • ಪ್ರಜಾಪ್ರಭುತ್ವ ಮುಂದುವರಿಸಲು ಅರ್ಥಪೂರ್ಣ ಚರ್ಚೆಗಳಲ್ಲಿ ತೊಡಗಿಸಿಕೊಳ್ಳುವ ಬದಲು ರಾಜಕೀಯ ಎಂಬುದು ದ್ವೇಷವಾಗಿ ಮಾರ್ಪಟ್ಟಿದೆ. ಅಭಿಪ್ರಾಯ ವೈವಿಧ್ಯತೆ ರಾಜಕೀಯ ಮತ್ತು ಸಮಾಜವನ್ನು ಶ್ರೀಮಂತಗೊಳಿಸುತ್ತದೆ. ರಾಜಕೀಯ ವಿರೋಧವು ದ್ವೇಷವಾಗಿ ಬದಲಾಗಬಾರದು, ನಾವು ಈ ದಿನಗಳಲ್ಲಿ ಅದನ್ನು ದುಃಖದಿಂದ ನೋಡುತ್ತಿದ್ದೇವೆ. ಇದು ಆರೋಗ್ಯಕರ ಪ್ರಜಾಪ್ರಭುತ್ವದ ಲಕ್ಷಣಗಳಲ್ಲ.

  • ಪ್ರಜಾಪ್ರಭುತ್ವದ ತಿರುಳು ಪ್ರಾತಿನಿಧ್ಯದ ಪರಿಕಲ್ಪನೆಯಲ್ಲಿದೆ. ಈ ನಿಟ್ಟಿನಲ್ಲಿ ಬಹುತ್ವ ಕಾಪಾಡುವುದಕ್ಕಾಗಿ ಪ್ರಾತಿನಿಧಿಕ ಪ್ರಜಾಪ್ರಭುತ್ವವನ್ನು ನಮ್ಮ ಸಂವಿಧಾನದಲ್ಲಿ ನೀಡಲಾಗಿದೆ.

  • ಸಂಸದೀಯ ಪ್ರಜಾಪ್ರಭುತ್ವದಿಂದ ನಾವು ಬಹುಮತದ ಆಡಳಿತವನ್ನು ರೂಪಿಸಲು ಸಾಧ್ಯಗಾಗಕೂಡದು ಎಂದು ಅಂಬೇಡ್ಕರ್‌ ಎಚ್ಚರಿಸಿದ್ದರು. ಬಹುಮತದ ಆಡಳಿತ ಸೈದ್ಧಾಂತಿಕವಾಗಿ ಅಸಮರ್ಥನೀಯವಾಗಿದ್ದು ಪ್ರಾಯೋಗಿಕವೂ ಅಲ್ಲ ಎಂದು ಅವರು ಹೇಳಿದ್ದರು.

  • ಸರ್ಕಾರ ಜನರ ಆಶೋತ್ತರಗಳ ಪರವಾಗಿ ನಿಲ್ಲಲು ವಿಫಲವಾದಾಗ ಚಾರಿತ್ರಿಕವಾಗಿ ಅವರು ಬದಲಾವಣೆಗೆ ತಮ್ಮ ಒಲವು ತೋರಿದ್ದಾರೆ. ಕಡೆಗೆ ಭಾರತದ ಪ್ರಜಾಪ್ರಭುತ್ವದ ಭವಿಷ್ಯವನ್ನು ರೂಪಿಸುವವರು ಜನರೇ ಆಗಿದ್ದಾರೆ.

  • ಶಾಸಕಾಂಗ ಕಡಿಮೆ ಸಭೆ ಸೇರುತ್ತಿರುವುದನ್ನು ಹಾಗೂ ಅದರ ಸಾಮರ್ಥ್ಯ ಕಡಿಮೆ ಮಟ್ಟದಲ್ಲಿ ಬಳಕೆಯಾಗುತ್ತಿರುವುದನ್ನು ಸಮಕಾಲೀನ ರಾಜಕೀಯ ವ್ಯಾಖ್ಯಾನ ಖಂಡಿಸುತ್ತದೆ.

  • ಭಾರತವು ಸಂಸದೀಯ ಪ್ರಜಾಪ್ರಭುತ್ವವಾಗಿರಬೇಕೇ ಹೊರತು ಸಂಸದೀಯ ಸರ್ಕಾರವಲ್ಲ.

  • ಬಡತನ, ತಾರತಮ್ಯ ಮತ್ತು ಅನಕ್ಷರತೆಯಂತಹ ಸಮಸ್ಯೆಗಳು ಉಳಿದಿದ್ದರೂ, ಅವುಗಳನ್ನು ನಿರ್ಮೂಲನೆ ಮಾಡುವ ಮತ್ತು ಸಾಂವಿಧಾನಿಕ ಆಶಯಗಳನ್ನು ಈಡೇರಿಸುವ ಹೊಣೆ ಸರ್ಕಾರದ ಎಲ್ಲಾ ಮೂರು ಅಂಗಗಳ ಮೇಲಿದೆ.