ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ದೇವಾಲಯದ ಆವರಣದಲ್ಲಿ ರಾಜಕೀಯ ಭಾಷಣ ಮಾಡಿದ ಆರೋಪದಡಿ ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ತಡೆ ನೀಡಿದೆ.
ಶಿವಮೊಗ್ಗದ ತುಂಗಾ ನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಹಾಗೂ ಆರೋಪ ಪಟ್ಟಿ ರದ್ದುಪಡಿಸಬೇಕು ಎಂದು ಕೋರಿ ಈಶ್ವರಪ್ಪ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಈಶ್ವರಪ್ಪ ಪರ ವಕೀಲ ಲೀಲೇಶ್ ಕೃಷ್ಣ ಅವರ ವಾದ ಆಲಿಸಿದ ಪೀಠ ಪ್ರಕರಣಕ್ಕೆ ತಡೆ ನೀಡಿ ಆದೇಶಿಸಿತು.
ಪ್ರಕರಣದ ಹಿನ್ನೆಲೆ: 2024ರ ಲೋಕಸಭಾ ಚುನಾವಣೆಯ ವೇಳೆ ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಶಿವಮೊಗ್ಗದ ಆದಿ ರಂಗನಾಥ ದೇವಾಲಯದಲ್ಲಿ ಈಶ್ವರಪ್ಪ ಮತ್ತು ಇತರರು ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತಂತೆ ಸಭೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾ ವೀಕ್ಷಕರು ತುಂಗಾ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರನ್ವಯ ಈಶ್ವರಪ್ಪ ಸೇರಿದಂತೆ ಒಂಬತ್ತು ಜನರ ವಿರುದ್ಧ ಧಾರ್ಮಿಕ ಸಂಸ್ಥೆಗಳ ದುರ್ಬಳಕೆ ತಡೆ ಕಾಯಿದೆ ಸೆಕ್ಷನ್‌ಗಳಾದ 3, 6 ಮತ್ತು 7ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು.