Supreme Court and TV  
ಸುದ್ದಿಗಳು

ರಾಜಕೀಯ ಸೇಡಿನ ಪ್ರಕರಣ: ಕನ್ನಡ ಸುದ್ದಿವಾಹಿನಿ ಪವರ್ ಟಿವಿ ವಿರುದ್ಧ ಕೇಂದ್ರದ ಕ್ರಮಕ್ಕೆ ಸುಪ್ರೀಂ ಅಸಮಾಧಾನ

Bar & Bench

ಪರವಾನಗಿ ನವೀಕರಿಸದ ಆರೋಪದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಪ್ರಸಾರ ಮಾಡದಂತೆ ಕರ್ನಾಟಕದ  ಸುದ್ದಿ ವಾಹಿನಿ ಪವರ್‌ ಟಿವಿ ಮತ್ತದರ ಅಂಗ ಸಂಸ್ಥೆ ಮಿಟ್‌ಕಾಯಿನ್‌ ಇನ್ಫ್ರಾಸ್ಟ್ರಕ್ಚರ್‌ಗೆ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಮಧ್ಯಂತರ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ತಡೆಯಾಜ್ಞೆ ನೀಡಿದೆ.  

ಅಮಾನತುಗೊಂಡಿರುವ ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳ ಆರೋಪಗಳನ್ನು ವರದಿ ಮಾಡುವಲ್ಲಿ ಕನ್ನಡ ಸುದ್ದಿ ವಾಹಿನಿ ಪವರ್ ಟಿವಿ ಮುಂಚೂಣಿಯಲ್ಲಿತ್ತು.

ರಾಜಕೀಯ ದ್ವೇಷದ ಕಾರಣಕ್ಕೆ ವಾಹಿನಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್  ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.

" ನಾವು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಲು ಒಲವು ಹೊಂದಿದ್ದೇವೆ.ಇದನ್ನು ಹೆಚ್ಚು ಆಲಿಸಿದಷ್ಟೂ ಇದು ರಾಜಕೀಯ ದ್ವೇಷದ ಸರಳ ಪ್ರಕರಣದಂತೆ ಕಾಣುತ್ತದೆ. ಅರ್ಜಿದಾರರನ್ನು ರಕ್ಷಿಸದಿದ್ದರೆ ನ್ಯಾಯಾಲಯ ತನ್ನ ಕರ್ತವ್ಯದಲ್ಲಿ ಸೋತಂತಾಗುತ್ತದೆ" ಎಂದು ಸಿಜೆಐ ಹೇಳಿದರು.

ಈ ಹಿನ್ನೆಲೆಯಲ್ಲಿ ಸೋಮವಾರದವರೆಗೆ (ಜುಲೈ 15) ವಾಹಿನಿಯ ಎಲ್ಲಾ ಪ್ರಸಾರ ಸ್ಥಗಿತಗೊಳಿಸುವಂತೆ ಹೈಕೋರ್ಟ್ ನೀಡಿದ್ದ ಮಧ್ಯಂತರ ಆದೇಶಕ್ಕೆ ತಡೆ ನೀಡಿದ ಸುಪ್ರೀಂ ಕೋರ್ಟ್‌ ಸಂಬಂಧ ಪಟ್ಟ ಕಕ್ಷಿದಾರರರಿಗೆ ಅರ್ಜಿದಾರರ ಮೇಲ್ಮನವಿ ಕುರಿತಂತೆ ನೋಟಿಸ್‌ ನೀಡಿತು.

 ಸುದ್ದಿ ವಾಹಿನಿ ತನ್ನ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಸಕ್ರಿಯ ಪರವಾನಗಿ ಹೊಂದಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್‌ ವಾಹಿನಿಯ ಯಾವುದೇ ಕಾರ್ಯಕ್ರಮ ಪ್ರಸಾರ ಮಾಡದಂತೆ ಈಚೆಗೆ ಆದೇಶಿಸಿತ್ತು.   ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರ ನೀಡಿದ್ದ ಶೋಕಾಸ್‌ ನೋಟಿಸ್‌ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿತ್ತು.

ಆದರೆ ಈ ವಿಚಾರದಲ್ಲಿ ತನಗೆ ತಾರತಮ್ಯ ಉಂಟು ಮಾಡಲಾಗಿದೆ ಎಂದು ಪವರ್‌ ಟಿವಿ ವಾದಿಸಿತ್ತು. ಅಮಾನತುಗೊಂಡಿರುವ ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ಹಗರಣವನ್ನು ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ತನ್ನನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂದಿತ್ತು.

ತನ್ನ ಸಿಇಒ ರಾಕೇಶ್‌ ಶೆಟ್ಟಿ ಅವರಿಗೆ ಏಪ್ರಿಲ್‌ 25ರಂದು ಪ್ರಜ್ವಲ್‌ ರೇವಣ್ಣ ಅವರ ತಂದೆ ಮಾಜಿ ಸಚಿವ, ಜೆಡಿಎಸ್‌ ಶಾಸಕ ಎಚ್‌ ಡಿ ರೇವಣ್ಣ ಅವರಿಂದ ಕರೆ ಬಂದಿತ್ತು. ಪ್ರಜ್ವಲ್‌ ರೇವಣ್ಣ ಅವರ ವಿರುದ್ಧದ ಆರೋಪಗಳನ್ನು ಪ್ರಸಾರ ಮಾಡದಿದ್ದರೆ ವಾಹಿನಿ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂಬುದಾಗಿ ಆಮಿಷ ಒಡ್ಡಲಾಗಿತ್ತು ಎಂದು ಪವರ್‌ ಟಿವಿ ದೂರಿತು.

 ಕೇಂದ್ರ ಸಂಪುಟ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಸಂಬಂಧಿಸಿದ ಅಧಿಕಾರಿಯೊಬ್ಬರು ಏಪ್ರಿಲ್ 27 ರಂದು ರಾಕೇಶ್ ಶೆಟ್ಟಿ ಅವರಿಗೆ ಕರೆ ಮಾಡಿ, ಟಿವಿ ಚಾನೆಲ್ ಪ್ರಜ್ವಲ್ ರೇವಣ್ಣ ಅವರ ಪ್ರಸಾರವನ್ನು ರದ್ದುಗೊಳಿಸದಿದ್ದರೆ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದರು ಎಂಬುದಾಗಿ ನ್ಯಾಯಾಲಯಕ್ಕೆ ತಿಳಿಸಲಾಯಿತು.

ಜೂನ್ 21ರಂದು ಪವರ್ ಟಿವಿ ಪ್ರಜ್ವಲ್ ಅವರ ಸಹೋದರ ಸೂರಜ್ ರೇವಣ್ಣ ವಿರುದ್ಧ ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಗಳ ಕುರಿತಂತೆ ವರದಿ ಪ್ರಸಾರ ಮಾಡಿತ್ತು.

ವಾಹಿನಿಯ ಮಾಲೀಕರು ಅಥವಾ ಅದರ ನಿರ್ವಾಹಕರು ಸೂಕ್ತ ಪರವಾನಗಿ ಹೊಂದಿಲ್ಲ ಎಂಬ ಕಾರಣಕ್ಕೆ ಜೂನ್ 25 ರಂದು, ಕರ್ನಾಟಕ ಹೈಕೋರ್ಟ್‌ ಏಕಸದಸ್ಯ ಪೀಠ ಪವರ್‌ ಟಿವಿಯ ಎಲ್ಲಾ ಪ್ರಸಾರ ಸ್ಥಗಿತಗೊಳಿಸುವಂತೆ ಮಧ್ಯಂತರ ಆದೇಶ ಹೊರಡಿಸಿತ್ತು.

ಜೂನ್ 25ರಂದು ನಡೆದ ವಿಚಾರಣೆ ವೇಳೆ, ಹಿರಿಯ ಐಪಿಎಸ್ ಅಧಿಕಾರಿ ಮತ್ತು ಜೆಡಿಎಸ್ ನಾಯಕರೊಬ್ಬರು ತಮಗೆ ಮಾನಹಾನಿ ಮಾಡಲಾಗಿದೆ ಎಂದು ಆರೋಪಿಸಿ ಅರ್ಜಿಗಳನ್ನು ಸಲ್ಲಿಸಿದ್ದರೂ ಸಹ, ಕೇಂದ್ರ ಸರ್ಕಾರ ಪ್ರಸಾರ ಸ್ಥಗಿತಗೊಳಿಸುವಂತೆ ತರ್ಕರಹಿತವಾಗಿ ಒತ್ತಡ ಹೇರಿದೆ ಎಂದು ಪವರ್ ಟಿವಿ ಈಗ ವಾದಿಸಿದೆ.

ತಡೆಯಾಜ್ಞೆ ಹಿಂಪಡೆಯಲು ನಿರಾಕರಿಸಿದ್ದ ಹೈಕೋರ್ಟ್‌ ವಿಭಾಗೀಯ ಪೀಠ ಪರವಾನಗಿ ವಿವಾದದ ಬಗ್ಗೆ ಆರು ವಾರಗಳಲ್ಲಿ ನಿರ್ಧರಿಸಲು ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.

ತನ್ನ ಪರವಾನಗಿಯನ್ನು ಔಪಚಾರಿಕವಾಗಿ ತಿರಸ್ಕರಿಸುವ ಮುನ್ನ ಖೊಟ್ಟಿ ಔಪಚಾರಿಕತೆಯಾಗಿ ಪ್ರಸಾರವನ್ನು ನಿಷೇಧಿಸಲಾಗಿದೆ ಎಂಬುದು ತನ್ನ ಆತಂಕ ಎಂದು ಪವರ್‌ ಟಿವಿ ಜುಲೈ 3 ರಂದು ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

ಸಹಾರಾ ಮತ್ತು ನ್ಯೂಡೆಲ್ಲಿ ಟೆಲಿವಿಷನ್ಸ್ ಲಿಮಿಟೆಡ್ (ಎನ್‌ಡಿಟಿವಿ) ನಡೆಸುತ್ತಿರುವ ಟಿವಿ ವಾಹಿನಿಗಳಿಗೆ ಸಂಬಂಧಿಸಿದಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನೀಡಿದ ಕೆಲವು ಪತ್ರಗಳನ್ನು ದಾಖಲೆಯಲ್ಲಿ ಸಲ್ಲಿಸಿದ ಪವರ್‌ ಟಿವಿ ಈ ಚಾನಲ್‌ಗಳಿಗೆ ಆಗಸ್ಟ್ 2023ರಲ್ಲಿ  ಹತ್ತು ವರ್ಷಗಳವರೆಗೆ ಪೂರ್ವಾನ್ವಯವಾಗುವಂತೆ ಪರವಾನಗಿ ನವೀಕರಣ ನೀಡಲಾಗಿದೆ ಎಂದಿತು.

ಈ ನಡುವಿನ ಮಧ್ಯಂತರ ಅವಧಿಯಲ್ಲಿ ಈ ವಾಹಿನಿಗಳ ಕಾರ್ಯಾಚರಣೆ ಮುಂದುವರೆಸಲು ಅನುಮತಿಸಲಾಗಿದ್ದು ಅವುಗಳ ಪ್ರಸಾರವನ್ನು ಎಂದಿಗೂ ನಿಷೇಧಿಸಿಲ್ಲ ಎಂದು ಅದು ಹೇಳಿತು. ವಾದಗಳನ್ನು ಸಂಕ್ಷಿಪ್ತವಾಗಿ ಆಲಿಸಿದ ಸುಪ್ರೀಂ ಕೋರ್ಟ್‌ ಪವರ್‌ ಟಿವಿ ಪ್ರಸಾರ ಸ್ಥಗಿತ ಆದೇಶಕ್ಕೆ ತಡೆ ನೀಡಿತು.

ಪವರ್ ಟಿವಿ ಪರ ಹಿರಿಯ ವಕೀಲರಾದ ರಂಜಿತ್ ಕುಮಾರ್, ಸುನಿಲ್ ಫರ್ನಾಂಡಿಸ್ ಹಾಗೂ ವಕೀಲರಾದ ಮಿಥು ಜೈನ್ ಮತ್ತು ಸಂಚಿತ್ ಗರ್ಗಾ ಅವರು ವಾದ ಮಂಡಿಸಿದ್ದರು.