ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ ಯೋಜನೆ (ಐಸಿಡಿಎಸ್) ಅಡಿ ಮಕ್ಕಳು, ಗರ್ಭಿಣಿಯರು ಮತ್ತು ಎದೆ ಹಾಲುಣಿಸುವ ತಾಯಂದಿರಿಗೆ ಪೌಷ್ಟಿಕಾಂಶಯುಕ್ತ ಆಹಾರ ಪೂರೈಸುವುದಕ್ಕೆ ಸಂಬಂಧಿಸಿದಂತೆ ಹೊರಡಿಸಲಾಗಿದ್ದ ರಾಜ್ಯ ಸರ್ಕಾರದ ಎರಡು ಆಕ್ಷೇಪಾರ್ಹ ಆದೇಶಗಳಿಗೆ ಮುಂದಿನ ವಿಚಾರಣೆವರೆಗೆ ಕರ್ನಾಟಕ ಹೈಕೋರ್ಟ್ ಸೋಮವಾರ ತಡೆ ನೀಡಿದೆ.
ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ ಯೋಜನೆ (ಐಸಿಡಿಎಸ್) ಅಡಿ ಮಕ್ಕಳು, ಗರ್ಭಿಣಿಯರು ಮತ್ತು ಎದೆ ಹಾಲುಣಿಸುವ ತಾಯಂದಿರಿಗೆ ಕಳಪೆ ಗುಣಮಟ್ಟದ ಆಹಾರ ಪದಾರ್ಥ ಪೂರೈಸಲಾಗುತ್ತಿದೆ ಎಂದು ಆಕ್ಷೇಪಿಸಿ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಅಮರಾವತಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಸಂಗೀತಾ ಗದುಗಿನ್ ಹಾಗೂ ಸಂಬಂಧಿತರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
ಆಕ್ಷೇಪಾರ್ಹ ಆದೇಶಗಳಿಗೆ ತಡೆಯಾಗಿರುವ ಹಿನ್ನೆಲೆಯಲ್ಲಿ ಐಸಿಡಿಎಸ್ ಯೋಜನೆ ಜಾರಿಗಾಗಿ ಪೂರಕ ಪೌಷ್ಟಿಕಾಂಶ ತಯಾರಿ ಮಹಿಳಾ ತರಬೇತಿ ಕೇಂದ್ರಗಳನ್ನು (ಎಂಎಸ್‌ಪಿಟಿಸಿ) ರಚಿಸಲಾಗಿದೆ. ಭಾರತೀಯ ಗುಣಮಟ್ಟ ಸಂಸ್ಥೆ (ಬಿಐಎಸ್) ಜೊತೆ ಒಪ್ಪಂದ ಮಾಡಿಕೊಳ್ಳುವ ಕುರಿತು ಎಂಎಸ್‌ಪಿಟಿಸಿಗೆ 2021ರ ಮೇ 5ರಂದು ಸರ್ಕಾರ ಆದೇಶ ಮಾಡಿದೆ. ಪೂರಕ ಪೌಷ್ಟಿಕಾಂಶ ಯೋಜನೆ (ಎಸ್‌ಎನ್‌ಪಿ) ಅಡಿ ಆಹಾರ ಪೂರೈಕೆ ಪರವಾನಗಿ ಹೊಂದಿರುವ ಮಹಿಳಾ ಗುಂಪುಗಳು ಅಂಗನವಾಡಿ ಕೇಂದ್ರಗಳಲ್ಲಿನ ಫಲಾನುಭವಿಗಳಿಗೆ ಆಹಾರದ ಗುಣಮಟ್ಟ ಖಾತರಿಪಡಿಸಬೇಕು ಎಂದು ಹೇಳಲಾಗಿರುವ ಈ ಆದೇಶವು ತಕ್ಷಣದಿಂದ ಚಾಲ್ತಿಗೆ ಬರಲಿದೆ ಎಂದು ಪೀಠವು ಹೇಳಿದೆ.
ಮಕ್ಕಳು ಮತ್ತು ಗರ್ಭಿಣಿಯರ ಹಿತದೃಷ್ಟಿಯಿಂದ ಅವರಿಗೆ ಪೌಷ್ಟಿಕಾಂಶಯುಕ್ತ ಆಹಾರ ಪೂರೈಸುವ ನಿಟ್ಟಿನಲ್ಲಿ ಪರಿಹಾರ ಹುಡುಕುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ತಾಂತ್ರಿಕ ಸಮಿತಿ ರಚಿಸಲಾಗಿತ್ತು. ಈ ಸಮಿತಿ ನೀಡಿರುವ ವರದಿಯ ಬಗೆಗಿನ ತನ್ನ ನಿರ್ಧಾರವನ್ನು ಮುಂದಿನ ಸ್ಥಿತಿಗತಿ ವರದಿಯಲ್ಲಿ ರಾಜ್ಯ ಸರ್ಕಾರ ತಿಳಿಸಬೇಕು ಎಂದು ಪೀಠವು ಸೂಚಿಸಿತು.
ಇದಕ್ಕೂ ಮುನ್ನ, ವಿಚಾರಣೆ ಆರಂಭವಾಗುತ್ತಿದ್ದಂತೆ ಸರ್ಕಾರದ ವಕೀಲರು “ಮಾರ್ಚ್ 11ರಂದು ತಾಂತ್ರಿಕ ಸಮಿತಿ ಸದಸ್ಯರ ಸಭೆ ಕರೆಯಲಾಗಿತ್ತು. ಅನಿವಾರ್ಯ ಕಾರಣಗಳಿಂದ ಅವರು ಸಭೆಯಲ್ಲಿ ಭಾಗಿಯಾಗಿಲ್ಲ. ಏಪ್ರಿಲ್ ಮೊದಲ ವಾರದಲ್ಲಿ ತಾಂತ್ರಿಕ ಸಮಿತಿಯ ಸಭೆ ಕರೆಯಲು ಉದ್ದೇಶಿಸಲಾಗಿದೆ ಎಂಬ ಅಂಶಗಳನ್ನು ಒಳಗೊಂಡ ಸ್ಥಿತಿಗತಿ ವರದಿಯನ್ನು ಪೀಠಕ್ಕೆ ಸಲ್ಲಿಸಿದರು. ಅಲ್ಲದೇ, ಇದಕ್ಕಾಗಿ ವಿಚಾರಣೆ ಮುಂದೂಡಬೇಕು” ಎಂದು ಕೋರಿದರು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎ ಎಸ್ ಪೊನ್ನಣ್ಣ ಮತ್ತು ವಕೀಲ ರೋಹನ್ ತಿಗಾಡಿ ಅವರು “ರಾಜ್ಯ ಸರ್ಕಾರವು ಒಂದಲ್ಲಾ ಒಂದು ಕಾರಣ ನೀಡಿ ನ್ಯಾಯಾಲಯದ ಆದೇಶಗಳನ್ನು ಪಾಲಿಸುತ್ತಿಲ್ಲ. ಪ್ರಕರಣವನ್ನು ಎಳೆದಾಡುತ್ತಿದೆ. ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೆ ಏಕಸದಸ್ಯ ಪೀಠ ಮಾಡಿರುವ ನಿರ್ದೇಶನಗಳನ್ನೂ ಸಲ್ಲಿಸಲಾಗಿದೆ. ಆದರೂ, ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ” ಎಂದು ಪೀಠದ ಗಮನಸೆಳೆದರು.
ಆಗ ಮುಖ್ಯ ನ್ಯಾಯಮೂರ್ತಿ ಅವರು “ಮಕ್ಕಳು ಮತ್ತು ಗರ್ಭಿಣಿಯರ ಹಿತದೃಷ್ಟಿಯಿಂದ ಅವರಿಗೆ ಪೌಷ್ಟಿಕಾಂಶಯುಕ್ತ ಆಹಾರ ಪೂರೈಸುವ ನಿಟ್ಟಿನಲ್ಲಿ ಪರಿಹಾರ ಹುಡುಕುವ ಸಂಬಂಧ ತಾಂತ್ರಿಕ ಸಮಿತಿ ವರದಿಯ ಕುರಿತು ನೀವು ನಿರ್ಧರಿಸಲಾಗದಿದ್ದರೆ ನಾವು ಅದನ್ನು ನಿರ್ಧರಿಸುತ್ತೇವೆ” ಎಂದು ಸರ್ಕಾರಕ್ಕೆ ಚಾಟಿ ಬೀಸಿದರು.
ಭಾರತೀಯ ಗುಣಮಟ್ಟ ಸಂಸ್ಥೆ (ಬಿಐಎಸ್) ಜೊತೆ ಒಪ್ಪಂದ ಮಾಡಿಕೊಳ್ಳುವ ಸಂಬಂಧ ಎಂಎಸ್‌ಪಿಟಿಸಿಗೆ 2021ರ ಮೇ 5ರಂದು ಸರ್ಕಾರ ಆದೇಶ ಮಾಡಿತ್ತು. ಪೂರಕ ಪೌಷ್ಟಿಕಾಂಶ ಯೋಜನೆ (ಎಸ್‌ಎನ್‌ಪಿ) ಅಡಿ ಪರವಾನಗಿ ಹೊಂದಿರುವ ಮಹಿಳಾ ಗುಂಪುಗಳು ಅಂಗನವಾಡಿ ಕೇಂದ್ರಗಳಲ್ಲಿನ ಫಲಾನುಭವಿಗಳಿಗೆ ಆಹಾರದ ಗುಣಮಟ್ಟ ಖಾತರಿಪಡಿಸಬೇಕು ಎಂದು ಹೇಳಲಾಗಿತ್ತು. ಆದರೆ, ಸದರಿ ಆದೇಶವನ್ನು ಯಾವುದೇ ಕಾರಣ ನೀಡದೇ 2021ರ ಮೇ 15ರಂದು ಹಿಂಪಡೆದಿದೆ. ಅಲ್ಲದೇ, ಎಂಎಸ್‌ಪಿಟಿಸಿಗೆ ಬಿಐಎಸ್ ಖಾತರಿ ನೀಡಿರುವ ಗುಂಪುಗಳ ಜೊತೆ ಆಹಾರ ಪೂರೈಕೆಗೆ ಒಪ್ಪಂದ ಮಾಡಿಕೊಳ್ಳಲು ನೀತಿ ಮತ್ತು ಚೌಕಟ್ಟನ್ನು ರೂಪಿಸಿ 2020ರ ಜುಲೈ 2ರಂದು ಸುತ್ತೋಲೆ ಹೊರಡಿಸಲಾಗಿತ್ತು. ಇದನ್ನೂ ಯಾವುದೇ ಕಾರಣ ನೀಡದೇ 2021ರ ಮೇ 20ರಂದು ಸರ್ಕಾರ ಹಿಂಪಡೆದಿತ್ತು. ಇಂದು ಈ ಎರಡೂ ಆದೇಶಗಳಿಗೆ ನ್ಯಾಯಾಲಯ ತಡೆ ವಿಧಿಸಿದೆ.