UAPA and Madras HC
UAPA and Madras HC 
ಸುದ್ದಿಗಳು

ಆರ್‌ಎಸ್‌ಎಸ್‌ ನಾಯಕರ ಭಾವಚಿತ್ರ ಇರಿಸಿಕೊಳ್ಳುವುದು ಉಗ್ರ ಕೃತ್ಯವಲ್ಲ: ಪಿಎಫ್ಐ ಸದಸ್ಯರಿಗೆ ಮದ್ರಾಸ್ ಹೈಕೋರ್ಟ್ ಜಾಮೀನು

Bar & Bench

ದೇಶದೆಲ್ಲೆಡೆ ಭಯೋತ್ಪಾದನಾ ಕೃತ್ಯಗಳಿಗೆ ಸಂಚು ರೂಪಿಸಿದ್ದಕ್ಕಾಗಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿ  ದಾಖಲಾಗಿದ್ದ ಪ್ರಕರಣದಲ್ಲಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸದಸ್ಯರು ಎಂದು ಆರೋಪಿಸಲಾದ ಎಂಟು ಮಂದಿಗೆ ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಜಾಮೀನು ನೀಡಿದೆ.

ಭಯೋತ್ಪಾದನೆಗಾಗಿ ಹಣ ಸಂಗ್ರಹಿಸುವ ಕಾರ್ಯದಲ್ಲಿ ಮೇಲ್ಮನವಿದಾರರು ತೊಡಗಿಕೊಂಡಿದ್ದಾರೆ ಎಂದು ಎನ್‌ಐಎ ಆರೋಪಿಸಿದ್ದರೂ ಉಗ್ರ ಚಟುವಟಿಕೆಗಳೊಂದಿಗೆ ಮೇಲ್ಮನವಿದಾರರು ನೇರ ಸಂಬಂಧ ಹೊಂದಿದ್ದಾರೆ ಎನ್ನಲು ಯಾವುದೇ ಸಾಕ್ಷ್ಯಗಳಿಲ್ಲ ಎಂದು  ನ್ಯಾಯಮೂರ್ತಿಗಳಾದ ಎಸ್‌ ಎಸ್ ಸುಂದರ್ ಮತ್ತು ಸುಂದರ್ ಮೋಹನ್ ಅವರಿದ್ದ ಪೀಠ ತಿಳಿಸಿದೆ.  

ಆರ್‌ಎಸ್‌ಎಸ್‌ ಮತ್ತು ಕೆಲ ಹಿಂದೂ ಪರ ಸಂಘಟನೆಗಳ ನಾಯಕರ ಭಾವಚಿತ್ರಗಳು ಮೇಲ್ಮನವಿದಾರರ ಬಳಿ ದೊರೆತಿದ್ದು ಇದು ಈ ನಾಯಕರು ʼಹಿಟ್‌ ಲಿಸ್ಟ್‌ʼನಲ್ಲಿದ್ದರು ಎಂಬುದನ್ನು ಸೂಚಿಸುತ್ತದೆ. ಪಿಎಫ್‌ಐನ 'ಮುನ್ನೋಟದ ವರದಿ'ಯನ್ನು ಆಧರಿಸಿ ಪಿಎಫ್‌ಐ ರಾಜಕೀಯ ಅಧಿಕಾರ ಗಳಿಸುವ ಉದ್ದೇಶ ಹೊಂದಿದೆ. ಮತ್ತು 2047 ರ ವೇಳೆಗೆ ಭಾರತದಲ್ಲಿ ಇಸ್ಲಾಮಿಕ್ ಸರ್ಕಾರ ಸ್ಥಾಪಿಸಲು ಕೆಲಸ ಮಾಡುತ್ತಿದೆ ಎಂದು ಎನ್‌ಐಎ ವಾದಿಸಿತ್ತು.

ಆದರೆ ಇದನ್ನು ಒಪ್ಪದ ನ್ಯಾಯಾಲಯ “ಪ್ರಬಲ ಕಲ್ಪನೆಗಳ ಮೂಲಕ ವಸ್ತುವಿಷಯಗಳನ್ನು ಅರ್ಥೈಸಲು ಅನುಮತಿಸಿದಾಗ, ಆರನೇ ಆರೋಪಿ ಸಂಭಾವ್ಯ ಬೆದರಿಕೆ ಉಂಟುಮಾಡಬಲ್ಲ ಎಂದು ಯಾರಾದರೂ ನಂಬಬಹುದಾದರೂ ಯಾವುದೇ ಭಯೋತ್ಪಾದಕ ಕೃತ್ಯದಲ್ಲಿ ಆರನೇ ಆರೋಪಿ ಭಾಗಿಯಾಗಿರುವುದನ್ನು ಅಥವಾ ಭಯೋತ್ಪಾದಕ ಸಂಘಟನೆಗಳೊಂದಿಗಿನ ಆತನ ಸಂಬಂಧವನ್ನು ಯಾವುದೇ ಸಾಕ್ಷ್ಯಗಳಿಂದ ಊಹಿಸಲು ಸಾಧ್ಯವಿಲ್ಲ” ಎಂದಿತು.

“ಮೇಲ್ಮನವಿದಾರರ ಚಟುವಟಿಕೆಗಳನ್ನು ಕಾಮಾಲೆ ಕಣ್ಣುಗಳಿಂದ ನೋಡಿದಾಗ ಅವರ ಪ್ರತಿಯೊಂದು ಕೆಲಸವೂ ಕಾನೂನುಬಾಹಿರವಾಗಿ ತೋರಬಹುದು. ಇದನ್ನು ಸತ್ಯ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ದೃಶ್ಯ ದಾಖಲೆಗೆ ಪೂರಕವಾಗಿ ಯಾವುದೇ ಸಾಕ್ಷ್ಯ ಇಲ್ಲದಿರುವಾಗ ಪ್ರತಿ ಗಂಭೀರ ಆರೋಪವೂ ಊಹೆಯನ್ನಾಧರಿಸಿದ ಸಂಭವನೀಯತೆಯಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ ಯಾವುದೇ ನೇರ ಸಾಕ್ಷ್ಯ ಅಥವಾ ಆಧಾರ ಇಲ್ಲದೆ ಅಭಿಪ್ರಾಯ ರೂಪುಗೊಂಡಿದೆ” ಎಂದು ನ್ಯಾಯಾಲಯ ಹೇಳಿದೆ.

ಮೇಲ್ಮನವಿದಾರರು ಚಾಕು ಮತ್ತು ಕತ್ತಿಗಳನ್ನು ಬಳಸಿ ಶಸ್ತ್ರಾಸ್ತ್ರ ತರಬೇತಿಯನ್ನು ಆಯೋಜಿಸಿದ್ದರು ಎಂಬ ಕೆಲವು ಸಾಕ್ಷಿಗಳ ಹೇಳಿಕೆ ಹೊರತುಪಡಿಸಿ, ಅವರು ಯಾವುದೇ ಭಯೋತ್ಪಾದಕ ಕೃತ್ಯದಲ್ಲಿ ಅಥವಾ ಉಗ್ರಗಾಮಿ ತಂಡದ ಸದಸ್ಯರಾಗಿ ಭಾಗಿಯಾಗಿದ್ದಾರೆಂದು ತೋರಿಸಲು ಬೇರೆ ಯಾವುದೇ ಸಾಕ್ಷ್ಯ ಇಲ್ಲ ಎಂದು ನ್ಯಾಯಾಲಯ ವಿವರಿಸಿದೆ.

“ಪಿಎಫ್‌ಐಯನ್ನು ಇದುವರೆಗೆ ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಲಾಗಿದೆಯೇ ವಿನಾ ಭಯೋತ್ಪಾದಕ ಸಂಘಟನೆ ಎಂದಲ್ಲ ಈ ಸನ್ನಿವೇಶದಲ್ಲಿ ಯಾವುದೇ ಪೂರ್ವಸಿದ್ಧತಾ ಕಾರ್ಯವನ್ನು (ಆಯುಧ ಹಿಡಿದು ತರಬೇತಿ) ರಕ್ಷಣೆಗಾಗಿ ನಡೆದ ಚಟುವಟಿಕೆ ಎಂದು ಅರ್ಥೈಸಿಕೊಳ್ಳಬೇಕೆ ವಿನಾ ಭಯೋತ್ಪಾದನೆಯ ಪೂರ್ವಸಿದ್ಧತಾ ಕೃತ್ಯ ಎಂದಲ್ಲ” ಎಂದು ನ್ಯಾಯಾಲಯ ನುಡಿದಿದೆ.

ಕೇರಳ, ತಮಿಳುನಾಡು, ಉತ್ತರ ಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಪಿಎಫ್‌ಐನ ಹಲವು ಸದಸ್ಯರು ಭಯೋತ್ಪಾದಕ ಕೃತ್ಯ ನಡೆಸಲು ಸಂಚು ರೂಪಿಸುತ್ತಿದ್ದಾರೆ ಎಂಬ ಮಾಹಿತಿ ಕೇಂದ್ರ ಸರ್ಕಾರಕ್ಕೆ ಸಿಕ್ಕಿದೆ ಎಂದು ಆರೋಪಿಸಿ ಎನ್‌ಐಎ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮೇಲ್ಮನವಿದಾರರನ್ನು ಬಂಧಿಸಿತ್ತು. ಎನ್‌ಐಎ ವಿಶೇಷ ನ್ಯಾಯಾಲಯ ಕಳೆದ ಜನವರಿಯಲ್ಲಿ ಮೇಲ್ಮನವಿದಾರರಿಗೆ ಜಾಮೀನು ನಿರಾಕರಿಸಿದ್ದರಿಂದ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು.