ಸುದ್ದಿಗಳು

ಶೈಕ್ಷಣಿಕ ಅರ್ಹತೆ ಇದ್ದ ಮಾತ್ರಕ್ಕೆ ಹೆಂಡತಿ ಸ್ವಾವಲಂಬಿ ಎಂದರ್ಥವಲ್ಲ: ಕರ್ನಾಟಕ ಹೈಕೋರ್ಟ್

ಹೆಂಡತಿಗೆ ಜೀವನಾಂಶ ನೀಡುವುದು ಗಂಡನಾದವನಿಗೆ ಕೇವಲ ಖುಷಿಯ ಸಂಗತಿಯಾಗಬಾರದು, ಬದಲಿಗೆ ಸ್ವಾವಲಂಬಿಯಾಗಲು ಅಸಮರ್ಥಳಾದ ಹೆಂಡತಿಯನ್ನು ರಕ್ಷಿಸುವುದು ಗಂಡನ ಕರ್ತವ್ಯವಾಗಬೇಕು ಎಂದು ನ್ಯಾಯಾಲಯ ಹೇಳಿದೆ.

Bar & Bench

ಹೆಂಡತಿ ಶೈಕ್ಷಣಿಕ ಅರ್ಹತೆ ಹೊಂದಿದ್ದ ಮಾತ್ರಕ್ಕೆ ಆಕೆ ಸ್ವಾವಲಂಬಿ ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ತಿಳಿಸಿದೆ. (ಆರ್ ಡಿ ರಾಜೀವ್ ಮತ್ತು ರೂಪಾ ನಡುವಣ ಪ್ರಕರಣ). ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತಿಯೊಬ್ಬರು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದ ನ್ಯಾ. ಡಾ. ಎಚ್‌ ಬಿ ಪ್ರಭಾಕರ್‌ ಶಾಸ್ತ್ರಿ ಅವರಿದ್ದ ಪೀಠ ವಿಚ್ಛೇದಿತ ಪತ್ನಿಗೆ ಪ್ರತಿ ತಿಂಗಳು ರೂ. 3,000 ಜೀವನಾಂಶ ನೀಡುವಂತೆ ಸೂಚಿಸಿದೆ.

“ಕೆಲ ಅರ್ಹತೆಗಳಿವೆ ಎಂಬ ಒಂದೇ ಕಾರಣಕ್ಕೆ ಒಬ್ಬ ಮಹಿಳೆ ಸ್ವಾವಲಂಬಿಯಾಗಬಲ್ಲಳು ಎಂದು ಪರಿಗಣಿಸಲಾಗುವುದಿಲ್ಲ. ವ್ಯಕ್ತಿಯ ಶೈಕ್ಷಣಿಕ ಅರ್ಹತೆ ಎಂಬುದು ಅವರ ಸಹಾಯಕ್ಕೆ, ಉದ್ಯೋಗಕ್ಕೆ ಅರ್ಜಿ ಸಲ್ಲಿಸಲಿಕ್ಕೆ ಅಥವಾ ಜೀವನೋಪಾಯ ಮಾಡಲಿಕ್ಕೆ ಇಲ್ಲವೇ ಪ್ರವೃತ್ತಿ ಕೈಗೊಳ್ಳಲು ಸಹಾಯಕವಾಗಬಹುದು. ಅಂತಹ ಶೈಕ್ಷಣಿಕ ಅರ್ಹತೆ ಹೊಂದಿದ್ದ ಮಾತ್ರಕ್ಕೆ ಹೆಂಡತಿ ಸ್ವಾವಲಂಬಿಯಾಗಬಲ್ಲಳು ಎಂಬ ತೀರ್ಮಾನಕ್ಕೆ ಸಿಆರ್‌ಪಿಸಿ ಸೆಕ್ಷನ್‌ ಸೆಕ್ಷನ್ 125 ರ ಅಡಿಯಲ್ಲಿ ಬರಲು ಸಾಧ್ಯವಿಲ್ಲ,” ಎಂದು ನ್ಯಾಯಾಲಯ ಹೇಳಿದೆ.

ಅಲ್ಲದೆ, "ಒಂದು ನಿರ್ದಿಷ್ಟ ಸಮಯದಲ್ಲಿ ಕೆಲಸ ಮಾಡಿದ ಒಬ್ಬ ಮಹಿಳೆಗೆ ಕೆಲಸಕ್ಕೆ ರಾಜೀನಾಮೆ ನೀಡಲು ಹಲವು ಕಾರಣಗಳಿರಬಹುದು. ತನ್ನನ್ನು ಪತಿ ಸಲಹಲಿ ಎಂದು ಆಕೆ ನಿರೀಕ್ಷಿಸುತ್ತಾಳೆ. ತನ್ನ ಗಂಡ ಜೀವನಾಂಶ ನೀಡಲಿ ಎಂಬ ಕಾರಣಕ್ಕೆ ಪ್ರವೃತ್ತಿ ತೊರೆಯುವುದು ಅಥವಾ ವೃತ್ತಿಗೆ ರಾಜೀನಾಮೆ ನೀಡುವುದಕ್ಕೆ ಮುಂದಾಗಿದ್ದರೆ ಅಂತಹ ಸಂದರ್ಭದಲ್ಲಿ ಮಾತ್ರ ಬೇರೆ ಅವಲೋಕನಕ್ಕೆ ಕಾರಣವಾಗಹುದು,” ಎಂದು ನ್ಯಾಯಾಲಯ ಹೇಳಿದೆ.

ಘಟನೆಯ ಹಿನ್ನೆಲೆ

2003ರಲ್ಲಿ ಜೋಡಿಯೊಂದು ಹಿಂದೂ ವಿಧಿವಿಧಾನಗಳ ಪ್ರಕಾರ ಮದುವೆಯಾಗಿತ್ತು. ಹೆಂಡತಿ ಗರ್ಭ ಧರಿಸಲು ವಿಫಲರಾಗಿದ್ದಾರೆ ಎಂಬ ಕಾರಣಕ್ಕೆ ದಂಪತಿ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿತ್ತು. ಆ ನಂತರ ಅವರಿಬ್ಬರೂ ಪರಸ್ಪರ ಬೇರೆಯಾಗಿದ್ದು ಮಹಿಳೆ ಮೈಸೂರಿನ ತನ್ನ ಸೋದರನ ಮನೆಯಲ್ಲಿ ವಾಸವಿದ್ದರು. ರೂ. 5,000 ಜೀವನಾಂಶ ನೀಡುವಂತೆ 1973 ರ ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 125ರ ಅಡಿಯಲ್ಲಿ ಪತ್ನಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಇದಕ್ಕೆ ಪ್ರತಿಯಾಗಿ ಪತಿ, 1955 ರ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13 (1) (ಐ-ಎ) ಅಡಿಯಲ್ಲಿ ವಿವಾಹವನ್ನು ಅಮಾನ್ಯಗೊಳಿಸುವಂತೆ ಕೋರಿ ಅದೇ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಜನವರಿ 3, 2013 ರಂದು ಕೌಟುಂಬಿಕ ನ್ಯಾಯಾಲಯ ವಿಚ್ಛೇದನಕ್ಕೆ ಅನುಮತಿಸಿ ಅರ್ಜಿ ಸಲ್ಲಿಸಿದ ದಿನಾಕಂದಿಂದ ತಿಂಗಳಿಗೆ ರೂ. 3,000 ನೀಡುವಂತೆ ಸೂಚಿಸಿತ್ತು. ಆದರೆ ಈ ಆದೇಶವನ್ನು ಪ್ರಶ್ನಿಸಿ ಪತಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಮುಂದಿಟ್ಟ ವಾದ...

ಪತಿ ಪರವಾಗಿ ವಾದ ಮಂಡಿಸಿದ್ದ ವಕೀಲರು ಹೆಂಡತಿ ಎರಡು ಪದವಿಗಳನ್ನು ಪಡೆದಿದ್ದು ತನ್ನ ಗಂಡನಿಂದ ಜೀವನಕ್ಕೆ ತೊಂದರೆ ನೀಡದ ರೀತಿಯಲ್ಲಿ ಸ್ವಾವಲಂಬಿಯಾಗಬಲ್ಲಳು ಎಂದು ವಾದಿಸಿದ್ದರು. ಅಲ್ಲದೆ, ಗರ್ಭ ಧರಿಸುವ ವೈದ್ಯಕೀಯ ಸಾಮರ್ಥ್ಯ ಇಲ್ಲ ಎನ್ನುವುದನ್ನು ಹೆಂಡತಿಯು ಗಂಡನಿಂದು ಮುಚ್ಚಿಡುವ ಮೂಲಕ ಅವರ ಜೀವನವನ್ನು ಹಾಳು ಮಾಡಿದ್ದಾರೆ. ಇಂತಹ ಸನ್ನಿವೇಶದಲ್ಲಿ ಆಕೆಗೆ ಮಾಸಿಕ ನಿರ್ವಹಣೆ ಪಾವತಿಸಲು ತಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ವಾದಿಸಲಾಗಿತ್ತು.

ನ್ಯಾಯಾಲಯ ಅಮಿಕಸ್‌ ಕ್ಯೂರಿಯಾಗಿ ನೇಮಿಸಿದ್ದ ವಕೀಲೆ ಕೆ ಎಂ ಅರ್ಚನಾ ಅವರು “ಶೈಕ್ಷಣಿಕ ಅರ್ಹತೆ ಇದ್ದ ಮಾತ್ರಕ್ಕೆ ಹೆಂಡತಿ ಸ್ವಾವಲಂಬಿ ಎಂದರ್ಥವಲ್ಲ. ಹೆಂಡತಿಗೆ ಗಳಿಸುವ ಸಾಮರ್ಥ್ಯವಿದ್ದರೂ, ವೈದ್ಯಕೀಯ ಅಂಶ ಸೇರಿದಂತೆ ವಿವಿಧ ಕಾರಣಗಳಿಗಾಗಿ ಅವಳು ಅದನ್ನು ಪಡೆಯಲಾಗಿಲ್ಲ” ಎಂದು ಎಂದು ವಾದ ಮಂಡಿಸಿದರು.

ನ್ಯಾಯಾಲಯ ಹೇಳಿದ್ದು…

  • ಅಮಿಕಸ್‌ ಕ್ಯೂರಿ ಅವರ ವಾದಕ್ಕೆ ಸಮ್ಮತಿ ಸೂಚಿಸಿದ ನ್ಯಾಯಾಲಯ “ಹೆಂಡತಿ ಅಥವಾ ಮಕ್ಕಳ ಸಾಮರ್ಥ್ಯ ಆಧರಿಸದೇ ಅವರ ಅಸಮರ್ಥತೆ ಆಧರಿಸಿ ಜೀವನಾಂಶ ನೀಡಬೇಕು ಎಂದು ಸಿಆರ್‌ಪಿಸಿ ಯ ಸೆಕ್ಷನ್ 125 (1) (ಎ) ಮತ್ತು (ಬಿ) ಹೇಳುತ್ತದೆ” ಎಂಬುದಾಗಿ ಸ್ಪಷ್ಟಪಡಿಸಿತು.

  • ಶೈಕ್ಷಣಿಕ ಅರ್ಹತೆ ಹೊಂದಿದ್ದರೂ ನಿರುದ್ಯೋಗ ಮತ್ತಿತರ ಕಾರಣಗಳಿಂದಾಗಿ ವ್ಯಕ್ತಿಗೆ ಜೀವನೋಪಾಯಗಳಿಸಲು ಸಾಧ್ಯವಾಗದೇ ಇರಬಹುದು. ಹೀಗಾಗಿ ಪ್ರತಿ ಪ್ರಕರಣದ ಸಂಗತಿ ಮತ್ತು ಸಂದರ್ಭಗಳನ್ನು ವಿಶ್ಲೇಷಿಸಬೇಕಾಗುತ್ತದೆ.

  • ಪತ್ನಿ ಎಂ.ಎ., ಎಂ.ಎಡ್, ಪದವೀಧರರಾಗಿದ್ದರೂ ಆಕೆಗೆ ಯಾವುದೇ ಕೆಲಸ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ಸ್ವಾವಲಂಬಿಯಾಗಲು ಸಾಧ್ಯವಾಗಿಲ್ಲ. ಈ ಅಂಶವನ್ನು ಅರ್ಜಿದಾರರು ಗಂಭೀರವಾಗಿ ಪರಿಗಣಿಸಿಲ್ಲ.

  • ಮಕ್ಕಳನ್ನು ಹೆರುವ ವೈದ್ಯಕೀಯ ಅಸಮರ್ಥತೆಯನ್ನು ಉಲ್ಲೇಖಿಸಲಾಗಿದೆ ಎಂಬುದು ಕೂಡ ನ್ಯಾಯಾಲಯ ಅರ್ಜಿ ತಿರಸ್ಕರಿಸಲು ಒಂದು ಕಾರಣ.

  • ಹೆಂಡತಿಗೆ ಜೀವನಾಂಶ ನೀಡುವುದು ಗಂಡನಾದವನಿಗೆ ಕೇವಲ ಖುಷಿಯ ವಿಚಾರವಾಗಬಾರದು. ಬದಲಿಗೆ ಸ್ವಾವಲಂಬಿಯಾಗಲು ಅಸಮರ್ಥಳಾದ ಹೆಂಡತಿಯನ್ನು ಕಾಪಾಡಿಕೊಳ್ಳುವುದು ಗಂಡನ ಕರ್ತವ್ಯವಾಗಬೇಕು.