Madras High Court, PMLA 
ಸುದ್ದಿಗಳು

ಅಪರಾಧದ ಗಳಿಕೆಯನ್ನು ಹೊಂದಿರುವ ಅಂಶವೊಂದೇ ಸಾಕು ಪಿಎಂಎಲ್ಎ ಅಡಿ ಪ್ರಕರಣ ದಾಖಲಿಸಲು: ಮದ್ರಾಸ್ ಹೈಕೋರ್ಟ್

ಅಪರಾಧದ ಗಳಿಕೆ ಹಾಗೂ ಅಂತಹ ಗಳಿಕೆಯನ್ನು ಕಳಂಕರಹಿತ ಆಸ್ತಿ ಎಂದು ಬಿಂಬಿಸುವಿಕೆ ಅಥವಾ ಸಾಧಿಸುವಿಕೆ ಈ ಎರಡನ್ನು ಪಿಎಂಎಲ್ಎ ಸೆಕ್ಷನ್ 3ರ ಅಡಿ ಅಕ್ರಮ ಹಣ ವರ್ಗಾವಣೆ ಚಟುವಟಿಕೆಗೆ ಸಂಬಂಧಿಸಿದ ಸ್ವತಂತ್ರ ಚಟುವಟಿಕೆಗಳಾಗಿ ಪರಿಗಣಿಸಬಹುದು ಎಂದ ಪೀಠ.

Bar & Bench

ಪಿಎಂಎಲ್‌ಎ ಕಾಯಿದೆಯನ್ನು ಅನ್ವಯಿಸುವುದಕ್ಕೆ ಅಪರಾಧದ ಗಳಿಕೆಯನ್ನು (ಅಪರಾಧಿಗಳು ತಮ್ಮ ಕ್ರಿಮಿನಲ್ ಚಟುವಟಿಕೆಯಿಂದ ಗಳಿಸುವ ಹಣ ಅಥವಾ ಆಸ್ತಿ) ಹೊಂದಿರುವ ಅಂಶವೊಂದೇ ಸಾಕಾಗುತ್ತದೆ ಎಂದು ಮದ್ರಾಸ್‌ ಹೈಕೋರ್ಟ್‌ ಈಚೆಗೆ ತಿಳಿಸಿದೆ [ಎಸ್. ಶ್ರೀನಿವಾಸನ್ ಮತ್ತು ಇ ಡಿ ಸಹಾಯಕ ನಿರ್ದೇಶಕರು, ಚೆನ್ನೈ ನಡುವಣ ಪ್ರಕರಣ].

ಅಕ್ರಮ ಹಣ ವರ್ಗಾವಣೆ ವಿರೋಧಿ ಕಾನೂನು ಅನ್ವಯಿಸಲು ಆರೋಪಿಯು ಅಂತಹ ಅಪರಾಧದ ಗಳಿಕೆಯನ್ನು ಕಳಂಕ ರಹಿತ ಆಸ್ತಿ ಎಂದು ತೋರಿಸಿರಬೇಕು ಎನ್ನುವ ಅಗತ್ಯವೇನೂ ಇಲ್ಲ, ಆತ ಅದರ ಒಡೆತನ ಹೊಂದಿದ್ದರೆ ಸಾಕು ಎಂದು ನ್ಯಾಯಮೂರ್ತಿಗಳಾದ ಎಸ್‌ ಎಂ ಸುಬ್ರಮಣ್ಯಂ ಮತ್ತು ಎ ಡಿ ಮರಿಯಾ ಕ್ಲೀಟ್ ಅವರಿದ್ದ ಪೀಠ ಸ್ಪಷ್ಟಪಡಿಸಿದೆ.

ಅಪರಾಧದ ಗಳಿಕೆಯನ್ನು ಹೊಂದಿರುವ ಅಂಶವೊಂದೇ ಪಿಎಂಎಲ್‌ಎ ಅಡಿ ಸೆಕ್ಷನ್‌ಗಳನ್ನು ಅನ್ವಯಿಸಲು ಸಾಕಾಗುತ್ತದೆ ಎಂದು ಮದ್ರಾಸ್‌ ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ಹೇಳಿದೆ. ಅಪರಾಧದ ಗಳಿಕೆಯನ್ನು ಬಳಸುವುದು ಸಹ ಅಪರಾಧವೇ ಆಗಿದೆ. ಆರ್ಥಿಕ ಅಪರಾಧಗಳನ್ನು ನಿಗ್ರಹಿಸುವ ಸಲುವಾಗಿ ರೂಪಿತವಾಗಿರುವ ಪಿಎಂಎಲ್‌ಎ ಅಡಿಯ ಸೆಕ್ಷನ್‌ 3 ವಿವಿಧ ಸನ್ನಿವೇಶಗಳನ್ನು ಒಳಗೊಳ್ಳುವಷ್ಟು ವಿಶಾಲವಾಗಿದೆ. ಹೈಕೋರ್ಟ್‌ಗಳು ಪಿಎಂಎಲ್‌ಎಯನ್ನು ಅನ್ವಯಿಸದಂತೆ ಅಧಿಕಾರಿಗಳನ್ನು ನಿರ್ಬಂಧಿಸಲು ಪಿಎಂಎಲ್‌ಎಯ ವ್ಯಾಖ್ಯಾನವನ್ನು ಮಿತಿಗೊಳಿಸಲಾಗದು ಎಂದು ನ್ಯಾಯಾಲಯವು ಅಕ್ಟೋಬರ್ 4ರ ತೀರ್ಪಿನಲ್ಲಿ ಹೇಳಿದೆ.

ಯಾವುದೇ ಉಳಿದ ವ್ಯಾಖ್ಯಾನ (ಆರೋಪಿಯು ಅಪರಾಧದ ಆದಾಯವನ್ನು ಹೊಂದಿರುವುದು ಮಾತ್ರವಲ್ಲದೆ ಅದನ್ನು ಕಳಂಕರಹಿತ ಎಂದು ಬಿಂಬಿಸಿರಬೇಕು ಎಂಬಂತಹ ವ್ಯಾಖ್ಯಾನ ) ಪಿಎಂಎಲ್‌ಎಯ ಸೆಕ್ಷನ್ 3ರ (ಅಕ್ರಮ ಹಣ ವರ್ಗಾವಣೆ ಅಪರಾಧದ ವ್ಯಾಖ್ಯಾನ) ಪರಿಣಾಮವನ್ನು ದುರ್ಬಲಗೊಳಿಸುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಇಂತಹ ವ್ಯಾಖ್ಯಾನಗಳನ್ನು ಒಪ್ಪಿದರೆ 2002ರ ಕಾಯಿದೆಯ ಸೆಕ್ಷನ್ 3ರ ಪರಿಣಾಮಕಾರತ್ವ ದುರ್ಬಲಗೊಳ್ಳುತ್ತದೆ. ಕಾಯಿದೆಯ ಸೆಕ್ಷನ್ 3ರ ಅಡಿಯಲ್ಲಿ ಆತನ ಸಹಚರರು ಅದನ್ನು ಕಳಂಕರಹಿತ ಆಸ್ತಿ ಎಂದು ಸಾಬೀತುಪಡಿಸಲು ಇಲ್ಲವೇ ಘೋಷಿಸಲು ತೊಡಗುತ್ತಾರೆ. ಹೀಗಾಗಿ ಅಪರಾಧದ ಗಳಿಕೆಯ ಸ್ವಾಧೀನ ಹೊಂದಿದ್ದು, ಅನುಭವಿಸುತ್ತಿರುವವರೆಗೂ ಪಿಎಂಎಲ್‌ಎಯನ್ನು ಅನ್ವಯಿಸಬಹುದಾಗಿದೆ ಎಂದು ಅದು ವಿವರಿಸಿದೆ.

ಅಕ್ರಮ ಹಣ ವರ್ಗಾವಣೆ ಎಂದರೆ ಸಾಮಾನ್ಯವಾಗಿ ಅಕ್ರಮ ಹಣದ ನಿಯೋಜನೆ, ಖಾತೆಯಿಂದ ಖಾತೆಗೆ ಹಣ ಬದಲಾಯಿಸಿ ಅದು ಕಾನೂನುಬದ್ಧ ಮಾಲೀಕರದ್ದು ಎಂದು ಬಿಂಬಿಸುವುದು ಹಾಗೂ ದೇಶದ ವಿಧಿಬದ್ಧ ಆರ್ಥಿಕತೆಗೆ ಕಳಂಕಿತ ಆಸ್ತಿಯನ್ನು ನಂತರ ಸರಿಹೊಂದಿಸುವುದಾಗಿದೆ. ಆದರೆ ಇದರಲ್ಲಿ ಯಾವುದೇ ಚಟುವಟಿಕೆ ನಡೆದಿದ್ದರೂ ಆಗ ಪಿಎಂಎಲ್‌ಎಯನ್ನು ಅನ್ವಯಿಸಬಹುದು ಎಂದು ನ್ಯಾಯಾಲಯ ಹೇಳಿದೆ. 

"ಸೆಕ್ಷನ್‌ 3 (ಪಿಎಂಎಲ್‌ಎ) ವ್ಯಾಪಕ ವ್ಯಾಪ್ತಿ ಹೊಂದಿದೆ. ಇದು ಅಪರಾಧದ ಗಳಿಕೆಯ ಕುರಿತಾದ ನೇರ ಅಥವಾ ಪರೋಕ್ಷ ಚಟುವಟಿಕೆಗಳೆಲ್ಲವನ್ನೂ ಒಳಗೊಳ್ಳುತ್ತದೆಯೇ ವಿನಾ ಕಳಂಕಿತ ಆಸ್ತಿಯನ್ನು ಮುಖ್ಯ ಆರ್ಥಿಕ ವಾಹಿನಿಗೆ ಸೇರಿಸುವ ಅಂತಿಮ ಕ್ರಿಯೆಗೆ ಮಾತ್ರವೇ ಸೀಮಿತವಲ್ಲ" ಎಂದು ನ್ಯಾಯಾಲಯ ಖಚಿತವಾಗಿ ನುಡಿದಿದೆ.

ಕಳಂಕಿತ ಆಸ್ತಿಯನ್ನು ಮುಖ್ಯ ಆರ್ಥಿಕವಾಹಿನಿಗೆ ಸೇರಿಸುವ ಅಂತಿಮ ಕ್ರಿಯೆಗೆ ಮಾತ್ರವೇ ಅಕ್ರಮ ಹಣ ವರ್ಗಾವಣೆಯ ಅಪರಾಧ ಸೀಮಿತವಾಗದು.
ಮದ್ರಾಸ್ ಹೈಕೋರ್ಟ್

ಪಿಎಂಎಲ್‌ಎ ಅಡಿಯಲ್ಲಿ, ತಾನು ನಿರಪರಾಧಿ ಎಂದು ಸಾಬೀತುಪಡಿಸುವ ಹೊಣೆ ಆರೋಪಿಯ ಮೇಲೆ ಇರುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಪಿಎಂಎಲ್‌ಎ ಪ್ರಕರಣವೊಂದರಲ್ಲಿ ಆಲ್ ಇಂಡಿಯಾ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟದ ಕಲ್ಯಾಣ  ಧರ್ಮ ಮತ್ತು ದತ್ತಿ (AIOBEU) ಟ್ರಸ್ಟ್‌ನ ಟ್ರಸ್ಟಿ ಎಸ್‌ ಶ್ರೀನಿವಾಸನ್‌ ಅವರು ತಮ್ಮನ್ನು ದೋಷಮುಕ್ತಗೊಳಿಸುವ ಕೋರಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ಈ ಹಿಂದೆ ತಿರಸ್ಕರಿಸಿತ್ತು. ಇದನ್ನು ಎತ್ತಿಹಿಡಿಯುವ ವೇಳೆ ಹೈಕೋರ್ಟ್‌ ಮೇಲಿನ

ಟ್ರಸ್ಟ್ ಹೆಸರಿನಲ್ಲಿ ಸಂಗ್ರಹಿಸಿದ ಹಣವನ್ನು ಅವ್ಯವಹಾರ ಮಾಡಲಾಗಿದೆ ಎಂಬ ಆರೋಪವನ್ನು ಒಳಗೊಂಡಿರುವ ಪ್ರಕರಣದಲ್ಲಿ ಅರ್ಜಿದಾರ ಶ್ರೀನಿವಾಸನ್‌ ಎರಡನೇ ಆರೋಪಿಯಾಗಿದ್ದರು. ತಮ್ಮನ್ನು ಪ್ರಕರಣದಿಂದ ದೋಷಮುಕ್ತಗೊಳಿಸುವಂತೆ ಕೋರಿ ಶ್ರೀನಿವಾಸನ್‌ ಅರ್ಜಿ ಸಲ್ಲಿಸಿದ್ದರು.

ಮೊದಲ ಆರೋಪಿ ಸಂಗ್ರಹಿಸಿದ ಹಣಕ್ಕೂ ತಮ್ಮ ಕಕ್ಷಿದಾರರಿಗೂ ಯಾವುದೇ ಸಂಬಂಧವಿಲ್ಲ. ಅವರು ಟ್ರಸ್ಟ್‌ ಆಡಳಿತದಲ್ಲಿ ಭಾಗಿಯಾಗಿರಲಿಲ್ಲ ಆದ್ದರಿಂದ ಶ್ರೀನಿವಾಸನ್‌ ಅವರನ್ನು ಆರೋಪಿಯನ್ನಾಗಿಸುವುದು ಪಿಎಂಎಲ್‌ಎ ಸೆಕ್ಷನ್‌ಗಳ ವ್ಯಾಪ್ತಿ ಮೀರಿದ್ದಾಗಿದೆ ಎಂದು ಶ್ರೀನಿವಾಸನ್‌ ಪರ ವಕೀಲರು ವಾದಿಸಿದ್ದರು.

ಆದರೆ ಶ್ರೀನಿವಾಸನ್‌ ಅವರ ಬಿಡುಗಡೆಗೆ ಯಾವುದೇ ಕಾರಣ ಇಲ್ಲ ಎಂದ ನ್ಯಾಯಾಲಯ ಅವರ ಅರ್ಜಿ ವಜಾಗೊಳಿಸಿತು.