Artificial Intelligence and Indian Judiciary
Artificial Intelligence and Indian Judiciary 
ಸುದ್ದಿಗಳು

ವರ್ಚುವಲ್ ವಿಚಾರಣೆ ವೇಳೆ ಎಐ ಬಳಸಿ ಮತ್ತೊಬ್ಬರಂತೆ ಸೋಗು ಹಾಕುವ ಸಾಧ್ಯತೆ ತಳ್ಳಿಹಾಕಲಾಗದು: ದೆಹಲಿ ಹೈಕೋರ್ಟ್

Bar & Bench

ತಂತ್ರಜ್ಞಾನದಲ್ಲಿನ ಪ್ರಗತಿ ಮತ್ತು ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌- ಎ ಐ) ಆವಿಷ್ಕಾರವಾಗಿರುವ ಹಿನ್ನೆಲೆಯಲ್ಲಿ ವಿವಿಧ ಅಧಿಕಾರಿಗಳ ಮುಂದೆ ವೀಡಿಯೊ ಕಾನ್ಫರೆನ್ಸಿಂಗ್‌ ಮೂಲಕ ಹಾಜರಾದಾಗ ವ್ಯಕ್ತಿಗಳು ಸೋಗು ಹಾಕುವ ಸಾಧ್ಯತೆಯನ್ನು ತಳ್ಳಿಹಾಕಲಾಗದು ಎಂದು ದೆಹಲಿ ಹೈಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿದೆ.

ವಿಶೇಷ ವಿವಾಹ ಕಾಯಿದೆಯಡಿ ತಮ್ಮ ವಿವಾಹ ನೋಂದಣಿ ಮಾಡುವಂತೆ ಕೋರಿ ಜೋಡಿಯೊಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಸುಬ್ರಮಣ್ಯ ಪ್ರಸಾದ್ ಅವರು ಈ ಹೇಳಿಕೆ ನೀಡಿದ್ದಾರೆ. ಜೋಡಿಯಲ್ಲಿ ಒಬ್ಬರು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು.    

ಈ ವರ್ಷದ ಆರಂಭದಲ್ಲಿ ಇಸ್ಲಾಂ ಸಂಪ್ರದಾಯದಂತೆ ದಂಪತಿ ವಿವಾಹವಾಗಿದ್ದರು. ದಾಖಲಾತಿಗಳನ್ನು ಪರಿಶೀಲಿಸಲು ಪತಿ ಸ್ಥಳೀಯ ಉಪವಿಭಾಗಾಧಿಕಾರಿ (ಎಸ್‌ಡಿಎಂ) ಎದುರು ಒಮ್ಮೆ ಹಾಜರಾಗಿದ್ದರೂ ಕೆಲಸದ ನಿಮಿತ್ತ ಕೆನಡಾಕ್ಕೆ ತೆರಳಬೇಕಿದ್ದರಿಂದ ನಂತರ ಅಧಿಕಾರಿಯೆದುರು ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ದಂಪತಿ ನ್ಯಾಯಾಲಯಕ್ಕೆ ತಿಳಿಸಿದರು.

ಮುಂದೆ ಪತ್ನಿ ಖುದ್ದಾಗಿ ಉಪವಿಭಾಗಾಧಿಕಾರಿ ಎದುರು ಹಾಜರಾದರು. ಆದರೆ ಪತಿ ವರ್ಚುವಲ್‌ ವಿಧಾನದಲ್ಲಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಬಯಸಿದ್ದರು. ಆದರೆ ಖುದ್ದು ಹಾಜರಾಗುವುದು ಅಗತ್ಯ ಎಂದು ಅಧಿಕಾರಿಗಳು ತಿಳಿಸಿದ್ದರು.

ವ್ಯಕ್ತಿ ವರ್ಚುವಲ್‌ ವಿಧಾನದಲ್ಲಿ ಹಾಜರಾದರೆ ಅವರ ನೈಜತೆ ಖಾತ್ರಿಪಡಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂದು ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದರು. ವಾದ ಪರಿಗಣಿಸಿದ ನ್ಯಾಯಮೂರ್ತಿ ಪ್ರಸಾದ್ ಅವರು ತಾಂತ್ರಿಕ ಪ್ರಗತಿಗಳು ಮತ್ತು ಎಐ ಬಗೆಗಿನ ಆತಂಕದಿಂದಾಗಿ, ಹುಸಿ ಸೋಗು ಹಾಕುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ತಮ್ಮ ಗುರುತನ್ನು ಪರಿಶೀಲಿಸಬಹುದಾದ ಹತ್ತಿರದ ಭಾರತೀಯ ಹೈಕಮಿಷನ್‌ ಕಛೇರಿಯನ್ನು ಸಂಪರ್ಕಿಸುವಂತೆ ಸೂಚಿಸಿದ ನ್ಯಾಯಾಲಯ ಅಲ್ಲಿಂದಲೇ ಮದುವೆ ನೋಂದಣಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು ಎಂದು ತಿಳಿಸಿ ಅರ್ಜಿಯನ್ನು ಇತ್ಯರ್ಥಗೊಳಿಸಿತು.