West Bengal Post Poll Violence, Supreme Court
West Bengal Post Poll Violence, Supreme Court 
ಸುದ್ದಿಗಳು

ರಾಜಕೀಯ ಸೇಡಿನಿಂದ ಚುನಾವಣೋತ್ತರ ಹಿಂಸಾಚಾರ ದೂರು: ಸುಪ್ರೀಂನಲ್ಲಿ ದುಬಾರಿ ದಂಡದೊಂದಿಗೆ ಅರ್ಜಿ ವಜಾ ಕೋರಿದ ಟಿಎಂಸಿ

Bar & Bench

ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರದಿಂದಾಗಿ ಜನ ಸ್ಥಳಾಂತರಗೊಂಡಿದ್ದಾರೆ ಎಂದು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ಮನವಿಗೆ ರಾಜ್ಯ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿ ಅಫಿಡವಿಟ್‌ ಸಲ್ಲಿಸಿದೆ.

ಕಳೆದ ವಿಧಾನಸಭಾ ಚುನಾವಣೆ ನಂತರ ರಾಜ್ಯದಲ್ಲಿ ನಡೆದ ಪ್ರತಿಯೊಂದು ಹಿಂಸಾಚಾರವನ್ನು ಮತದಾನೋತ್ತರ ಗಲಭೆ ಎಂದು ವರ್ಗೀಕರಿಸುವುದು ಸಮರ್ಥನೀಯವಲ್ಲ ಎಂದು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಫಿಡವಿಟ್‌ನಲ್ಲಿ ವಿವರಿಸಿದೆ.

“ಪಶ್ಚಿಮ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದಂತೆ ವಾಸ್ತವ ಸ್ಥಿತಿಗೆ ಬದಲಾಗಿ ನ್ಯಾಯಾಲಯವನ್ನು ದಾರಿ ತಪ್ಪಿಸುವ ಉದ್ದೇಶದಿಂದ ರಾಜಕೀಯ ಪ್ರೇರಿತ ಮನವಿ ಸಲ್ಲಿಸಲಾಗಿದೆ” ಎಂದು ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.

ಭಾರತೀಯ ಚುನಾವಣಾ ಆಯೋಗದ ಕಣ್ಗಾವಲಿನಲ್ಲಿ ಆಡಳಿತ ಪಕ್ಷವು ಪ್ರಜಾಪ್ರಭುತ್ವ ಮಾರ್ಗದಲ್ಲಿ ಆಯ್ಕೆಯಾಗಿದ್ದು ಆ ಬಳಿಕ "ಪ್ರಜಾಪ್ರಭುತ್ವವನ್ನು ಕೊಲೆ ಮಾಡಲಾಗಿದೆ, ನಿರಂಕುಶ ಪ್ರಭುತ್ವ ಮತ್ತು ಮಾನವೀಯತೆಯ ಬಿಕ್ಕಟ್ಟು ಉದ್ಭವಿಸಿದೆ" ಎಂದು ಆಧಾರರಹಿತವಾಗಿ ಆರೋಪಿಸುವುದು ಹೇಸಿಗೆಯ ಕೃತ್ಯ ಎಂದು ಹೇಳಲಾಗಿದೆ. “ಆಧಾರರಹಿತವಾಗಿ ರಾಜಕೀಯ ಪ್ರೇರಿತವಾಗಿ ಆರೋಪ ಮಾಡಲಾಗುತ್ತಿರುವ ಕಾರಣಕ್ಕೆ ದುಬಾರಿ ದಂಡ ವಿಧಿಸಿ ಅರ್ಜಿ ವಜಾಗೊಳಿಸಬೇಕು” ಎಂದು ಕೋರಲಾಗಿದೆ.

“ಕಲ್ಕತ್ತಾ ಹೈಕೋರ್ಟ್‌ನಲ್ಲಿ ಸಂವಿಧಾನದ 226ನೇ ವಿಧಿ ಅನ್ವಯ ಲಭ್ಯವಿರುವ ಪರ್ಯಾಯ ಪರಿಣಾಮಕಾರಿ ಪರಿಹಾರವನ್ನು ಪರಿಶೀಲಿಸದೆ ಅರ್ಜಿದಾರರು ಈ ನ್ಯಾಯಾಲಯವನ್ನು ಸಂಪರ್ಕಿಸಬಾರದು” ಎಂದು ಮನವಿಯಲ್ಲಿ ವಿವರಿಸಲಾಗಿದೆ.

“ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಚುನಾವಣೋತ್ತರ ಪರಿಸ್ಥಿತಿಯ ಕುರಿತು ನಕಲಿ ಮತ್ತು ವಿರೂಪಗೊಳಿಸಲಾದ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿಯಬಿಡಲಾಗಿದೆ. ರಾಜ್ಯದಲ್ಲಿ ಕೋಮು ಅಶಾಂತಿ ಮತ್ತು ಧ್ರುವೀಕರಣಕ್ಕಾಗಿ ವ್ಯಾಪಕವಾಗಿ ನಕಲಿ ಸುದ್ದಿ/ವಿಡಿಯೊಗಳನ್ನು ಹರಡಲಾಗಿದೆ. ಸಾರ್ವಜನಿಕ ವಲಯದಲ್ಲಿ ಸುಳ್ಳು ಸುದ್ದಿಗಳನ್ನು ನಿಯಂತ್ರಿಸುವ ಉದ್ದೇಶದಿಂದ ಕಾನೂನು ಪಾಲನಾ ಸಂಸ್ಥೆಗಳು ಕಟ್ಟುನಿಟ್ಟಿನ ಕ್ರಮಕೈಗೊಂಡಿವೆ” ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಚುನಾವಣೋತ್ತರ ಹಿಂಸಾಚಾರದ ಹಿನ್ನೆಲೆಯಲ್ಲಿ ಆಂತರಿಕವಾಗಿ ನೆಲೆ ಕಳೆದುಕೊಂಡಿರುವವರಿಗೆ ಪರಿಹಾರ ಕಲ್ಪಿಸುವಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲಾಗಿತ್ತು. ಮೇ 25ರಂದು ನಡೆದಿದ್ದ ವಿಚಾರಣೆಯ ವೇಳೆ ನ್ಯಾಯಮೂರ್ತಿಗಳಾದ ವಿನೀತ್‌ ಶರಣ್‌ ಮತ್ತು ಬಿ ಆರ್‌ ಗವಾಯಿ ಅವರಿದ್ದ ವಿಭಾಗೀಯ ಪೀಠವು ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ್ದು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ರಾಷ್ಟ್ರೀಯ ಮಹಿಳಾ ಆಯೋಗವನ್ನು ಕೂಡ ಪ್ರತಿವಾದಿಗಳನ್ನಾಗಿಸಿತ್ತು.