ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಬಳಿಕ ನಡೆದ ಹಿಂಸಾಚಾರದ ವೇಳೆ ಟಿಎಂಸಿ ಕಾರ್ಯಕರ್ತರು ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ 60 ವರ್ಷದ ಮಹಿಳೆ ಮತ್ತು 17 ವರ್ಷದ ಅಪ್ರಾಪ್ತ ಬಾಲಕಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ಸ್ಥಳೀಯ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯು ಗೆದ್ದಿದ್ದು ಟಿಎಂಸಿ ಕಾರ್ಯಕರ್ತರು ಮೇ 4 ರಂದು ತಮ್ಮ ಮನೆಗೆ ನುಗ್ಗಿ ಆರು ವರ್ಷದ ಮೊಮ್ಮಗನ ಎದುರು ಅತ್ಯಾಚಾರ ನಡೆಸಿದರು. ಮನೆ ತೊರೆಯುವ ಮೊದಲು ನಗದು ಮತ್ತು ಬೆಲೆ ಬಾಳುವ ವಸ್ತುಗಳನ್ನು ದೋಚಲಾಯಿತು. ಘಟನೆಗೆ ಸಂಬಂಧಿಸಿದಂತೆ ತಮ್ಮ ಅಳಿಯ ಪೊಲೀಸರಿಗೆ ದೂರು ದಾಖಲಿಸಲು ಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ತದನಂತರ ತಮ್ಮ ಸೊಸೆ ಒತ್ತಡ ಹೇರಿದ ಬಳಿಕವಷ್ಟೇ ದೂರು ದಾಖಲಾಗಿದೆ ಎಂದು ಖೆಜೂರಿ ಪ್ರದೇಶಕ್ಕೆ ಸೇರಿದ 60 ವರ್ಷದ ವೃದ್ಧೆ ಹೇಳಿದ್ದಾರೆ. ಅವರನ್ನು ಬಳಿಕ ಕೋಲ್ಕತ್ತಾದ ಅಪೊಲೊ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ವೃದ್ಧೆಯ ಪರವಾಗಿ ವಕೀಲೆ ಅರುಣಿಮಾ ದ್ವಿವೇದಿ ಅರ್ಜಿ ಸಲ್ಲಿಸಿದ್ದಾರೆ.
17 ವರ್ಷದ ಯುವತಿಯೂ ಇದೇ ರೀತಿಯ ಭಯಾನಕ ಘಟನೆಯನ್ನು ವಿವರಿಸಿದ್ದಾರೆ. ಬಿಜೆಪಿ ಬೆಂಬಲಿಸಿದ ಕಾರಣಕ್ಕೆ ಪಾಠ ಕಲಿಸುವುದಾಗಿ ತಿಳಿಸಿ ನಾಲ್ವರು ಟಿಎಂಸಿ ಕಾರ್ಯಕರ್ತರು ಒಂದು ಗಂಟೆಗೂ ಹೆಚ್ಚು ಕಾಲ ಅತ್ಯಾಚಾರ ಎಸಗಿದರು. ಮೇ 9 ರಂದು ತನ್ನ ಸ್ನೇಹಿತರೊಂದಿಗೆ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದ್ದು ಅತ್ಯಾಚಾರದ ಬಳಿಕ ತಾನು ಸಾವನ್ನಪ್ಪಲಿ ಎಂದು ಕಾಡಿಗೆ ದೂಡಲಾಗಿತ್ತು. ಮರುದಿನ ಟಿಎಂಸಿ ನಾಯಕ ಎಸ್ ಕೆ ಬಹದ್ದೂರ್ ತನ್ನ ಮನೆಗೆ ಬಂದು ದೂರು ನೀಡದಂತೆ ಧಮಕಿ ಹಾಕಿದರು. ಅಲ್ಲದೆ ತಮ್ಮ ಮನೆಗೆ ಬೆಂಕಿ ಹಚ್ಚುವುದಾಗಿ ಬೆದರಿಸಿದರು ಎಂದು ಹೇಳಿಕೊಂಡಿದ್ದಾರೆ.
ಸ್ಥಳೀಯ ಪೊಲೀಸರು ಮತ್ತು ಆಡಳಿತದಿಂದ ಸಹಕಾರ ದೊರೆಯುವುದು ಅಸಾಧ್ಯವಾದ್ದರಿಂದ ವಿಚಾರಣೆಯನ್ನು ಪಶ್ಚಿಮ ಬಂಗಾಳದ ಹೊರಗೆ ನಡೆಸಬೇಕು ಎಂದು ವಕೀಲ ರವಿ ಶರ್ಮಾ ಅವರ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ ಆಕೆ ಕೋರಿದ್ದಾರೆ.
ಚುನಾವಣೋತ್ತರ ಹಿಂಸಾಚಾರ ಭುಗಿಲೆದ್ದಾಗ ಹತ್ಯೆಗೀಡಾಗಿದ್ದ ಬಿಜೆಪಿ ಕಾರ್ಯಕರ್ತ ಅಭಿಜಿತ್ ಸರ್ಕಾರ್ ಸಹೋದರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇದ್ದು ಅದರೊಟ್ಟಿಗೆ ಈ ಎರಡೂ ಅರ್ಜಿಗಳನ್ನು ಸಲ್ಲಿಸಲಾಗಿದೆ. ಹಿಂಸಾಚಾರಕ್ಕೆ ಸಂಬಂಧಿಸಿದ ವಿವಿಧ ಪ್ರಕರಣಗಳು ಕಲ್ಕತ್ತಾ ಹೈಕೋರ್ಟ್‌ನ ಪಂಚ ಸದಸ್ಯ ಪೀಠದ ಎದುರು ಬಾಕಿ ಇವೆ. ಹಿಂಸಾಚಾರದಿಂದ ಮನೆ ತೊರೆದು ಹೋದವರು ಸುರಕ್ಷಿತವಾಗಿ ವಾಪಸಾಗಲು ಸಾಧ್ಯವಾಗುವಂತೆ ಹೈಕೋರ್ಟ್ ನಿರ್ದೇಶನಗಳನ್ನು ನೀಡಿದೆ.