Supreme Court
Supreme Court 
ಸುದ್ದಿಗಳು

ಬಲವಾದ ಸಾಕ್ಷ್ಯಾಧಾರಗಳಿದ್ದಾಗ ಮಾತ್ರ ಹೆಚ್ಚುವರಿ ಆರೋಪಿಗೆ ಸಮನ್ಸ್ ನೀಡಬೇಕು: ಸುಪ್ರೀಂ

Bar & Bench

ಸಿಆರ್‌ಪಿಸಿ ಸೆಕ್ಷನ್‌ 319ರ ಅಡಿಯಲ್ಲಿ ಪ್ರಕರಣದ ಹೆಚ್ಚುವರಿ ಆರೋಪಿಗೆ ಸಮನ್ಸ್‌ ನೀಡುವುದು ವಿವೇಚನಾಶೀಲ ಮತ್ತು ಅಸಾಧಾರಣ ಅಧಿಕಾರವಾಗಿದ್ದು ಅಂತಹ ಆರೋಪಿ ವಿರುದ್ಧ ಬಲವಾದ ಸಾಕ್ಷ್ಯಾಧಾರಗಳಿದ್ದಾಗ ಮಾತ್ರ  ಅದನ್ನು ಮಿತವಾಗಿ ಬಳಸಬೇಕು ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ತೀರ್ಪು ನೀಡಿದೆ [ವಿಕ್ರಮ್ ರಾಠಿ ಮತ್ತು ಉತ್ತರ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಕೇವಲ ಅನುಮಾನದ ಆಧಾರದಲ್ಲಿ ಹೆಚ್ಚುವರಿ ಆರೋಪಿಗಳಿಗೆ ಸಮನ್ಸ್‌ ನೀಡುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ರಾಜೇಶ್ ಬಿಂದಾಲ್ ಅವರಿದ್ದ ಪೀಠ ಹೇಳಿದೆ.

“ಕೇವಲ ಅನುಮಾನ ಆಧರಿಸಿ ಹೆಚ್ಚುವರಿ ಆರೋಪಿಗೆ ಸಮನ್ಸ್‌ ನೀಡುವಂತಿಲ್ಲ. ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಸಾಕ್ಷಿಗಳಿಂದ ಒಬ್ಬ ವ್ಯಕ್ತಿಯ ವಿರುದ್ಧ ಬಲವಾದ ಮತ್ತು ಸಮರ್ಥವಾದ ಪುರಾವೆಗಳು ಲಭ್ಯವಿದ್ದು, ಅದರಿಂದ ಶಿಕ್ಷೆಯಾಗಬಹುದು ಎನಿಸಿದರೆ ಮಾತ್ರ, ಅಂತಹ ಅಧಿಕಾರವನ್ನು ಚಲಾಯಿಸಬಹುದು” ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ.  

ಸಿಆರ್‌ಪಿಸಿ ಸೆಕ್ಷನ್‌ 319ರ ಅಡಿಯಲ್ಲಿ ಪ್ರಾಸಂಗಿಕವಾಗಿ ಮತ್ತು ಅಪ್ರಜ್ಞಾಪೂರ್ವಕವಾಗಿ ಅಧಿಕಾರ ಚಲಾಯಿಸುವಂತಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಆರೋಪಿಯಾಗಿ ವ್ಯಕ್ತಿಯೊಬ್ಬರಿಗೆ ಸಮನ್ಸ್‌ ನೀಡಲು ಸಿಆರ್‌ಪಿಸಿ ಸೆಕ್ಷನ್‌ 319ರ ಅಡಿ ಹೊಸದಾಗಿ ಅರ್ಜಿ ಆಲಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಿದ್ದ ಅಲಾಹಾಬಾದ್‌ ಹೈಕೋರ್ಟ್‌ ಆದೇಶವನ್ನು ನ್ಯಾಯಾಲಯ ರದ್ದುಗೊಳಿಸಿತು.

ಕೊಲೆ ಪ್ರಕರಣವೊಂದರಲ್ಲಿ ಸಾಕ್ಷಿಯೊಬ್ಬರು ಮಾಡಿದ ಕೇವಲ ಅಸ್ಪಷ್ಟ ಮೌಖಿಕ ಆರೋಪದ ಆಧಾರದ ಮೇಲೆ ತನ್ನನ್ನು ಆರೋಪಿ ಎಂದು ದೂರಲಾಗಿದೆ ಎಂದು ಪ್ರಕರಣದ ಮೇಲ್ಮನವಿದಾರರು ನ್ಯಾಯಾಲಯದ ಮೆಟ್ಟಿಲೇರಿದ್ದರು.

ಸಿಆರ್‌ಪಿಸಿ ಸೆಕ್ಷನ್‌ 319ರ ಅಡಿಯಲ್ಲಿ ಅಧಿಕಾರ ಪ್ರಯೋಗವನ್ನು ನಿಯಂತ್ರಿಸುವ ಕಾನೂನು ಈಗಾಗಲೇ ಉತ್ತಮ ರೀತಿಯಲ್ಲಿ ಇತ್ಯರ್ಥಗೊಂಡಿದೆ ಎಂದು ತೀರ್ಪಿನ ವೇಳೆ ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿತು.