[ವಿಚ್ಛೇದನ] ಪತಿಗೆ ಆಭರಣದ ಹೊಣೆ ಒಪ್ಪಿಸಿದ್ದು ಸಾಬೀತಾದರೆ ಮಾತ್ರ ಮರಳಿ ಪಡೆಯುವ ಹಕ್ಕು ಪತ್ನಿಗಿದೆ: ಕೇರಳ ಹೈಕೋರ್ಟ್

ಪತ್ನಿ ಚಿನ್ನಾಭರಣ ಮರಳಿ ಪಡೆಯಲು ಬೇಡಿಕೆ ಇಡುವಾಗ ಗಂಡನಿಗೆ ಚಿನ್ನ ಕೊಡಲಾಗಿತ್ತು ಎಂಬುದನ್ನು ಸಾಬೀತುಪಡಿಸಬೇಕು ಎಂದು ಬಿನೋದ್ ಮತ್ತು ಸೋಫಿ ಪ್ರಕರಣದಲ್ಲಿ ಉಲ್ಲೇಖಿಸಲಾಗಿರುವ ತೀರ್ಪನ್ನು ನ್ಯಾಯಾಲಯ ಪುನರುಚ್ಚರಿಸಿತು.
Kerala High court, Divorce
Kerala High court, Divorce
Published on

ಪತಿಯ ಹೊಣೆಗಾರಿಕೆಗೆ ಆಭರಣಗಳನ್ನು ಒಪ್ಪಿಸಿರುವುದು ಸಾಬೀತಾದರೆ ಮಾತ್ರ ವಿಚ್ಛೇದನದ ಬಳಿಕ ಪತಿಯಿಂದ ಪತ್ನಿ ಆಭರಣ ಮರಳಿಪಡೆಯಬಹುದು ಎಂದು ಕೇರಳ ಹೈಕೋರ್ಟ್‌ ಇತ್ತೀಚೆಗೆ ಹೇಳಿದೆ.

ಪತ್ನಿಯ ಹೆಸರಿನಲ್ಲೇ ಇರುವ ಲಾಕರ್‌ನಲ್ಲಿ ಪತಿ ಆಭರಣ ಇಟ್ಟಿದ್ದರೆ ಆಗ  ಅವರು ಆಭರಣಗಳು ಪತಿಯ ಸುಪರ್ದಿನಲ್ಲಿವೆ ಎಂದು ಹೇಳಲಾಗದು ಎಂದು ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್ ಮತ್ತು ಪಿ ಜಿ ಅಜಿತ್‌ಕುಮಾರ್ ಅವರಿದ್ದ ವಿಭಾಗೀಯ ಪೀಠ ತಿಳಿಸಿತು.

ತನ್ನ ವಿವಾಹದ  ಸಮಯದಲ್ಲಿ ಪರಿತ್ಯಕ್ತ ಪತಿಗೆ ನೀಡಿದ್ದ ಹಣ ಮತ್ತು ಚಿನ್ನಾಭರಣ ಮರಳಿಸುವಂತೆ ಕೋರಿದ್ದ ಮಹಿಳೆಯೊಬ್ಬರ ಬೇಡಿಕೆಯನ್ನು ಕೌಟುಂಬಿಕ ನ್ಯಾಯಾಲಯವೊಂದು ನಿರಾಕರಿಸಿತ್ತು. ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಆಕೆ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸುವ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಪತಿಗೆ ಚಿನ್ನಾಭರಣ ಒಪ್ಪಿಸಿರುವುದನ್ನು ಸಾಬೀತುಪಡಿಸಿದರೆ ಮಾತ್ರ ಪತ್ನಿ ಆಭರಣವನ್ನು  ಹಿಂತಿರುಗಿಸುವಂತೆ ಕೇಳಬಹುದು ಎಂದು ನ್ಯಾಯಾಲಯ ಹೇಳಿತು.

ಪತ್ನಿ ಚಿನ್ನಾಭರಣ ಮರಳಿ ಪಡೆಯಲು ಬೇಡಿಕೆ ಇಡುವಾಗ  ಗಂಡನಿಗೆ ಚಿನ್ನ ಕೊಡಲಾಗಿತ್ತು ಎಂಬುದನ್ನು ಸಾಬೀತುಪಡಿಸಬೇಕು ಎಂದು ಬಿನೋದ್‌ ಮತ್ತು ಸೋಫಿ ಪ್ರಕರಣದಲ್ಲಿ ಉಲ್ಲೇಖಿಸಲಾಗಿರುವ ತೀರ್ಪನ್ನು ನ್ಯಾಯಾಲಯ ಪುನರುಚ್ಚರಿಸಿತು.

ಅಬೂಬಕ್ಕರ್ ಲಬ್ಬಾ ಮತ್ತಿತರರು ಹಾಗೂ  ಶಮೀನಾ ಕೆ.ಬಿ ಇನ್ನಿತರರ ನಡುವಣ ಪ್ರಕರಣದ ತೀರ್ಪಿನ ಮೂಲಕ ಅಳವಡಿಸಲಾದ ತಾರ್ಕಿಕತೆಯನ್ನು ಉಲ್ಲೇಖಿಸಿದ ಪೀಠ " ಮದುವೆಯ ಸಮಯದಲ್ಲಿ ವಧು ಚಿನ್ನಾಭರಣ ಧರಿಸಿದ್ದಳು ಎಂಬ ಸಾಕ್ಷ್ಯ ಇದ್ದ ಮಾತ್ರಕ್ಕೆ, ಮದುವೆಯ ಸಮಯದಲ್ಲಿ ಧರಿಸಿದ್ದ ಆಭರಣಗಳನ್ನು ವರನ ತಂದೆ ಮತ್ತು ತಾಯಿಗೆ ಒಪ್ಪಿಸಲಾಯಿತು ಎನ್ನಲಾಗದು” ಎಂದಿತು.

ಅಲ್ಲದೆ ಗಂಡನಿಗೆ ಚಿನ್ನಾಭರಣ ಒಪ್ಪಿಸಿರುವುದನ್ನು ಸಾಬೀತುಪಡಿಸಲು ಸಾಕ್ಷ್ಯಾಧಾರಗಳ ಕೊರತೆಯಿದೆ ಎಂಬ ಕೌಟುಂಬಿಕ ನ್ಯಾಯಾಲಯದ  ತೀರ್ಪಿನಲ್ಲಿ ಮಧ್ಯಪ್ರವೇಶಿಸಲಾಗದು ಎಂದ ಪೀಠ ಮೇಲ್ಮನವಿಯನ್ನು ವಜಾಗೊಳಿಸಿತು.

Kannada Bar & Bench
kannada.barandbench.com