Delhi High Court 
ಸುದ್ದಿಗಳು

ರೆಸ್ಟರಂಟ್‌ಗಳಲ್ಲಿ ಸಂಗೀತ ನುಡಿಸಲು ಪಿಪಿಎಲ್‌ ಪರವಾನಗಿ ನೀಡುವಂತಿಲ್ಲ: ದೆಹಲಿ ಹೈಕೋರ್ಟ್

ಮಾಮಗೋಟು, ಧಾಬಾ, ಸ್ಲೈ ಗ್ರ್ಯಾನಿ ಮತ್ತು ಇತರರು ಪಿಪಿಎಲ್ ಹಕ್ಕುಸ್ವಾಮ್ಯದ ನಿಯೋಜಿತ ಮಾಲೀಕತ್ವವನ್ನು ಹೊಂದಿರುವ ಹಾಡುಗಳನ್ನು ನುಡಿಸುವುದನ್ನು ನಿರ್ಬಂಧಿಸುವ ಏಕ ಸದಸ್ಯ ಪೀಠದ ತೀರ್ಪನ್ನು ನ್ಯಾಯಾಲಯ ರದ್ದುಗೊಳಿಸಿತು.

Bar & Bench

ಫೋನೋಗ್ರಫಿಕ್‌ ಪರ್ಫಾರ್ಮೆನ್ಸ್ ಲಿಮಿಟೆಡ್‌ (ಪಿಪಿಎಲ್‌) ಸಂಸ್ಥೆಯು ಹಕ್ಕುಸ್ವಾಮ್ಯ ಕಾಯಿದೆ- 1957ರ ಅಡಿಯಲ್ಲಿ ನೋಂದಾಯಿತ ಹಕ್ಕುಸ್ವಾಮ್ಯ ಸಂಸ್ಥೆಯಲ್ಲದೆ ಇರುವುದರಿಂದ ಧ್ವನಿ ರೆಕಾರ್ಡಿಂಗ್‌ಗಳ ಸಾರ್ವಜನಿಕ ಪ್ರದರ್ಶನಕ್ಕಾಗಿ ಅದು  (ಪಿಪಿಎಲ್) ಪರವಾನಗಿ ನೀಡುವಂತಿಲ್ಲ ಎಂದು ದೆಹಲಿ ಹೈಕೋರ್ಟ್‌ನ ವಿಭಾಗೀಯ ಪೀಠ ಮಂಗಳವಾರ ತೀರ್ಪು ನೀಡಿದೆ.

"ದೇಶದಲ್ಲಿ ಇದುವರೆಗೆ ರೂಪುಗೊಂಡ ಎಲ್ಲಾ ಧ್ವನಿ ಮುದ್ರಣದಲ್ಲಿ ಅದು ಶೇ 80 ರಿಂದ 90ರಷ್ಟು ಮಾಲೀಕತ್ವ ಹೊಂದಿದ್ದರೂ, ಅಂತಹ ಮಾಲೀಕತ್ವ ಶಾಸನಬದ್ಧ ಅವಶ್ಯಕತೆಗಳನ್ನು ಮೀರುವಂತಿಲ್ಲ" ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಅಂತೆಯೇ ಹಕ್ಕುಸ್ವಾಮ್ಯದ ನಿಯೋಜಿತ-ಮಾಲೀಕ ಸ್ಥಾನಮಾನದ ಆಧಾರದ ಮೇಲೆ ಪಿಪಿಎಲ್‌ ಸಂಸ್ಥೆಯು ಪರವಾನಗಿದಾರರಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಿದ್ದ ದೆಹಲಿ ಹೈಕೋರ್ಟ್‌ ಏಕ ಸದಸ್ಯ ಪೀಠದ ತೀರ್ಪನ್ನು ನ್ಯಾಯಮೂರ್ತಿಗಳಾದ ಹರಿಶಂಕರ್ ಮತ್ತು ಅಜಯ್ ದಿಗ್ಪಾಲ್ ಅವರಿದ್ದ ಪೀಠ ರದ್ದುಗೊಳಿಸಿತು.

ಮಾಮಾಗೋಟೂ, ಧಾಬಾ, ಸ್ಲೈ ಗ್ರ್ಯಾನಿ ಮತ್ತು ಇತರರು ಪಿಪಿಎಲ್ ಹಕ್ಕುಸ್ವಾಮ್ಯದ ಹಾಡುಗಳನ್ನು ಬಳಸುವುದನ್ನು ಏಕಸದಸ್ಯ ಪೀಠ ಈ ಹಿಂದೆ ನಿರ್ಬಂಧಿಸಿತ್ತು.

ಪಿಪಿಎಲ್ ನೋಂದಾಯಿತ ಹಕ್ಕುಸ್ವಾಮ್ಯ ಸೊಸೈಟಿಯಲ್ಲ ಅಥವಾ ಯಾವುದೇ ನೋಂದಾಯಿತ ಹಕ್ಕುಸ್ವಾಮ್ಯ ಸೊಸೈಟಿಯ ಸದಸ್ಯರಲ್ಲ ಎಂಬುದರಲ್ಲಿ ಯಾವುದೇ ವಿವಾದವಿಲ್ಲ ಎಂದು ಪೀಠ ಹೇಳಿದೆ.

ಹಕ್ಕುಸ್ವಾಮ್ಯ ಸಂಸ್ಥೆಯಾಗಿರುವ ಪಿಪಿಎಲ್‌ 400ಕ್ಕೂ ಹೆಚ್ಚು ಸಂಗೀತ ಧ್ವನಿ ಮುದ್ರಿಕೆಗಳ ಸಾರ್ವಜನಿಕ ಪ್ರದರ್ಶನದ ಹಕ್ಕು ಸ್ವಾಮ್ಯ ಹೊಂದಿದ್ದು 40 ಲಕ್ಷಕ್ಕಿಂತಲೂ ಹೆಚ್ಚು ಅಂತಾರಾಷ್ಟ್ರೀಯ ಮತ್ತು ದೇಶೀಯ ಧ್ವನಿ ರೆಕಾರ್ಡಿಂಗ್‌ಗಳನ್ನು ಹೊಂದಿದೆ.

ಸುಮಾರು 86 ರೆಸ್ಟರಂಟ್‌ಗಳನ್ನು ನಡೆಸುತ್ತಿರುವ ಅಜುರ್‌ ಮತ್ತಿತರರ ಸಂಸ್ಥೆಗಳು ಯಾವುದೇ ಅನುಮತಿಯಿಲ್ಲದೆ ತನ್ನ ಮಾಲೀಕತ್ವದ ಹಾಡುಗಳನ್ನು ಬಳಸುವ ಮೂಲಕ ಹಕ್ಕು ಸ್ವಾಮ್ಯ ಉಲ್ಲಂಘಿಸಿವೆ ಎಂಬುದು ಪಿಪಿಎಲ್‌ ಆರೋಪವಾಗಿತ್ತು.