
ಜನಪ್ರಿಯ ತಮಿಳು ಗೀತೆ 'ಎನ್ ಇನಿಯ ಪೊನ್ ನಿಲವೇ' ಕೃತಿಸ್ವಾಮ್ಯ ಸರೆಗಮ ಇಂಡಿಯಾ ಲಿಮಿಟೆಡ್‌ಗೆ ಸೇರಿದ್ದು ಗೀತೆಯ ಸಂಯೋಜಕ ಇಳಯರಾಜ ಅವರು ಅದನ್ನು ಮೂರನೇ ವ್ಯಕ್ತಿಗಳಿಗೆ ನೀಡುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಗುರುವಾರ ತೀರ್ಪು ನೀಡಿದೆ [ಸರಿಗಮ ವಿರುದ್ಧ ವೆಲ್ಸ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ನಡುವಣ ಪ್ರಕರಣ]
ಇಳಯರಾಜಾ ಅವರ ಪುತ್ರ ಯುವನ್ ಶಂಕರ್ ರಾಜಾ ಅವರು ಹಾಡಿರುವ ಹಾಡಿನ ಮರುಸೃಷ್ಟಿ ಆವೃತ್ತಿ ಬಿಡುಗಡೆ ಮಾಡದಂತೆ ವೆಲ್ಸ್ ಫಿಲ್ಮ್ಸ್ ಇಂಟರ್‌ನ್ಯಾಶನಲ್‌ಗೆ ನ್ಯಾಯಾಲಯ ನಿರ್ಬಂಧ ವಿಧಿಸಿದೆ. ಗಾಯಕ ಯೇಸುದಾಸ್ 1980ರಲ್ಲಿ ಹಾಡಿದ್ದ ಮೂಲ ಹಾಡನ್ನು ಅವರ ಪುತ್ರ ವಿಜಯ್ ಯೇಸುದಾಸ್ ಅವರು ಪ್ರಸ್ತುತಪಡಿಸಿದ್ದರು.
ಚಲನಚಿತ್ರ 'ಮೂಡು ಪಾನಿ' ನಿರ್ಮಾಪಕರೊಂದಿಗೆ ತಾನು ಮಾಡಿಕೊಂಡಿರುವ ಒಪ್ಪಂದದ ಪ್ರಕಾರ 'ಮೂಡು ಪಾನಿ', 'ಏನ್ ಇನಿಯ ಪೊನ್ ನಿಲವೆ' ಹಾಡುಗಳು ಸೇರಿದಂತೆ ತಾನು ಧ್ವನಿಮುದ್ರಿಕೆಗಳು ಮತ್ತು ಸಂಗೀತ ಮತ್ತು ಸಾಹಿತ್ಯ ಕೃತಿಗಳ ಮಾಲೀಕನಾಗಿರುವ ಕುರಿತು ಸರೆಗಮಾ ಇಂಡಿಯಾ ಮೇಲ್ನೋಟದ ಪ್ರಕರಣ ರೂಪಿಸಿದ್ದಾರೆ. ಅದರಂತೆ ಸರೆಗಮಾ ಇಂಡಿಯಾದ ಪರವಾನಗಿಇಲ್ಲದೆ ವೆಲ್ಸ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಹಾಡನ್ನು ಬಳಸುವಂತಿಲ್ಲ ಎಂದು ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಹೇಳಿದ್ದಾರೆ.
ಸೂಕ್ತ ಅನುಮತಿ ಇಲ್ಲದೆ ಮುಂಬರುವ ತಮಿಳು ಚಲನಚಿತ್ರ ʼಅಘಾತಿಯಾʼಗಾಗಿ ನಿರ್ಮಾಣ ಸಂಸ್ಥೆ ವೆಲ್ಸ್ ಫಿಲ್ಮ್ಸ್ ಇಂಟರ್‌ನ್ಯಾಶನಲ್ ಲಿಮಿಟೆಡ್ ಮರುಸೃಷ್ಟಿಸಿದೆ ಎಂದು ಎನ್ ಇನಿಯ ಪೊನ್ ನಿಲವೆ ಸೇರಿದಂತೆ ಮೂಡು ಪಾನಿಯ ಧ್ವನಿಮುದ್ರಿಕೆಗಳು ಮತ್ತು ಸಂಗೀತ ಕೃತಿಗಳ ಹಕ್ಕುಸ್ವಾಮ್ಯವನ್ನು ಹೊಂದಿರುವ ಸರಿಗಮ ಇಂಡಿಯಾ ಲಿಮಿಟೆಡ್ ನ್ಯಾಯಾಲಯದ ಮೆಟ್ಟಿಲೇರಿತ್ತು. ನೋಟಿಸ್ ನೀಡಿದರೂ ಪ್ರತಿವಾದಿಗಳು ಹಾಡನ್ನು ಪ್ರಸಾರ ಮಾಡಿದ್ದಾರೆ ಎಂಬುದು ಸರೆಗಮಾ ಇಂಡಿಯಾದ ದೂರಾಗಿತ್ತು.
ಆದರೆ ಇಳಯರಾಜಾ ಅವರಿಂದ ಹಾಡನ್ನು ಬಳಸಲು ಮರುಸೃಷ್ಟಿಸಲು ಅನುಮತಿ ಪಡೆದಿರುವುದಾಗಿ ವೆಲ್ಸ್ ಫಿಲ್ಮ್ಸ್ ಇಂಟರ್‌ನ್ಯಾಶನಲ್ ಲಿಮಿಟೆಡ್ ವಾದಿಸಿತ್ತು. ಮತ್ತೊಂದೆಡೆ ಹಾಡಿನ ಹಕ್ಕುಸ್ವಾಮ್ಯ ತನ್ನದೆಂದು ಇಳಯರಾಜಾ ಪ್ರತಿಪಾದಿಸಿದ್ದರು.
ಎಸ್‌ಐಎಲ್ ಮತ್ತು ಮೂಡು ಪಾನಿ ನಿರ್ಮಾಪಕರ ನಡುವೆ ಫೆಬ್ರವರಿ 25, 1980ರಲ್ಲಿ ನಡೆದಿದ್ದ ಒಪ್ಪಂದವನ್ನು ಗಮನದಲ್ಲಿಟ್ಟುಕೊಂಡು ಹಾಡಿನ ಕೃತಿಸ್ವಾಮ್ಯ ಕುರಿತು ವಿಚಾರನೆ ನಡೆಸಿದ ನ್ಯಾಯಾಲಯ ಸಂಗೀತ ಸಂಯೋಜಕರಾಗಿರುವ ಇಳಯರಾಜ ಅವರು ಸಾಹಿತ್ಯ ಕೃತಿಯ (ಸಾಹಿತ್ಯ) ಲೇಖಕರಲ್ಲದ ಕಾರಣ ಸಾಹಿತ್ಯಕ್ಕೆ ಪರವಾನಗಿ ನೀಡುವ ಅಧಿಕಾರವನ್ನು ಹೊಂದಿಲ್ಲ ಎಂದಿತು. ಹಕ್ಕುಸ್ವಾಮ್ಯ ಕಾಯಿದೆಗೆ 2012ರಲ್ಲಿ ಮಾಡಲಾದ ತಿದ್ದಪಡಿ ಪ್ರಕಾರ ಇಳಯರಾಜಾ ಅವರಿಗೆ ಪೂರ್ವಾನ್ವಯವಾಗುವಂತೆ ಹೆಚ್ಚುವರಿ ಹಕ್ಕುಗಳನ್ನು ನೀಡಬೇಕು ಎಂಬ ವಾದವನ್ನೂ ನ್ಯಾಯಾಲಯ ತಿರಸ್ಕರಿಸಿತು.
ಆದರೆ ಅಘಾಥಿಯಾ ಚಿತ್ರ ಜನವರಿ 31ರಂದು ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ₹ 30 ಲಕ್ಷ ಠೇವಣಿ ಇರಿಸಿ ಹಾಡನ್ನು ಬಲಸು ನ್ಯಾಯಾಲಯ ವೆಲ್ಸ್‌ಗೆ ಅನುಮತಿ ನೀಡಿದೆ. ಈ ನಿರ್ಧಾರ ಮಧ್ಯಂತರವಾಗಿದ್ದು ಪ್ರಕರಣದ ಅಂತಿಮ ತೀರ್ಪಿಗೆ ಒಳಪಡುವುದಿಲ್ಲ ಎಂದು ಕೂಡ ಸ್ಪಷ್ಟಪಡಿಸಿತು. ಆದರೆ ಹಣ ಠೇವಣಿ ಇಡಲು ವೆಲ್ಸ್ ಮುಂದಾಗಲಿಲ್ಲ. ಬದಲಿಗೆ ಹಾಡು ಇಲ್ಲದೆ ಚಿತ್ರ ಬಿಡುಗಡೆಗೆ ನಿರ್ಧರಿಸಿತು.
[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]