A1
A1
ಸುದ್ದಿಗಳು

ಪೊಲೀಸ್ ಸಿಬ್ಬಂದಿಯನ್ನು ಕೀಳು ಕೆಲಸಗಳಿಗೆ ಹಚ್ಚುವುದು ಸಂವಿಧಾನದ ಮೇಲೆ ಮಾಡುವ ಕಪಾಳ ಮೋಕ್ಷ: ಮದ್ರಾಸ್ ಹೈಕೋರ್ಟ್

Bar & Bench

ಹಿರಿಯ ಶ್ರೇಣಿಯ ಅಧಿಕಾರಿಗಳ ಮನೆಗಳಲ್ಲಿ ಸಮವಸ್ತ್ರಧಾರಿ ಪೊಲೀಸ್‌ ಸಿಬ್ಬಂದಿಯನ್ನು ಕೀಳು ಕೆಲಸಗಳಿಗೆ ತೊಡಗಿಸಿಕೊಳ್ಳುವ ಅಭ್ಯಾಸ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ಮಾಡಿದ ಕಪಾಳ ಮೋಕ್ಷ ಎಂದು ಮದ್ರಾಸ್‌ ಹೈಕೋರ್ಟ್‌ ತೀರ್ಪು ನೀಡಿದೆ. [ಯು ಮಾಣಿಕ್ಯವೇಲ್‌ ಮತ್ತು ತಮಿಳುನಾಡು ಸರ್ಕಾರದ ನಡುವಣ ಪ್ರಕರಣ].

ಇದೊಂದು ‘ವಸಾಹತುಶಾಹಿ ಗುಲಾಮಗಿರಿ ವ್ಯವಸ್ಥೆʼಯಾಗಿದ್ದು, ಕೂಡಲೇ ತೊಲಗಿಸಬೇಕು ಎಂದ ನ್ಯಾ. ಎಸ್‌ ಎಂ ಸುಬ್ರಮಣ್ಯಂ ಅವರಿದ್ದ ಏಕಸದಸ್ಯ ಪೀಠ ತಿಳಿಸಿತು.

“ಭಾರತದ ಜನತೆಯಾದ ನಾವು ಸ್ವಾತಂತ್ರ್ಯದ 75ನೇ ವರ್ಷಾಚರಣೆಯಲ್ಲಿ ತೊಡಗಿದ್ದೇವೆ. ತಮಿಳುನಾಡು ರಾಜ್ಯದ ಉನತ ಪೊಲೀಸ್‌ ಅಧಿಕಾರಿಗಳ ಮನೆಗಳಲ್ಲಿ ಅಧೀನ ಸಿಬ್ಬಂದಿಯಲ್ಲಿ ಕೀಳು ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ವಸಾಹತುಶಾಹಿ ಗುಲಾಮಗಿರಿ ವ್ಯವಸ್ಥೆ ಇನ್ನೂ ಚಾಲ್ತಿಯಲ್ಲಿದೆ ಎಂದು ಉಲ್ಲೇಖಿಸುವುದು ನೋವಿನ ಸಂಗತಿಯಾಗಿದೆ. ಇದು ನಮ್ಮ ಮಹಾನ್ ರಾಷ್ಟ್ರದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ಮಾಡಿದ ಕಪಾಳಮೋಕ್ಷವಾಗಿದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ದೇಶ ಶಕ್ತಿಶಾಲಿ ಪ್ರಜಾಪ್ರಭುತ್ವದತ್ತ ಹೆಜ್ಜೆ ಇರಿಸುತ್ತಿದ್ದರೂ ತಮಿಳುನಾಡಿನ ಹಿರಿಯ ಪೊಲೀಸ್‌ ಅಧಿಕಾರಿಗಳು ವಸಾಹತುಶಾಹಿ ಗುಲಾಮಗಿರಿ ವ್ಯವಸ್ಥೆಯನ್ನು ಪಾಲಿಸುತ್ತಿದ್ದಾರೆ ಎಂದು ಏಕ ಸದಸ್ಯ ಪೀಠ ತಿಳಿಸಿತು.

“ಇದು ಗಂಭೀರವಾಗಿ ಪರಿಗಣಿಸಬೇಕಾದ ವಿಚಾರ. ತೆರಿಗೆ ಪಾವತಿದಾರರ ಹಣ ಖರ್ಚು ಮಾಡಿ ತರಬೇತಿ ಕೊಡಿಸಿದ ಸಮವಸ್ತ್ರಧಾರಿ ಪೊಲೀಸ್ ಸಿಬ್ಬಂದಿ ಹಿರಿಯ ಅಧಿಕಾರಿಗಳ ಮನೆಗಳಲ್ಲಿ ಕೀಳು ಕೆಲಸಗಳನ್ನು ಮಾಡುತ್ತಿದ್ದಾರೆ. ಸಾರ್ವಜನಿಕರಿಗೆ ಹಿರಿಯ ಅಧಿಕಾರಿಗಳ ಮನಸ್ಥಿತಿಯನ್ನು ಪ್ರಶ್ನಿಸುವ ಹಕ್ಕಿದೆ” ಎಂದು ನ್ಯಾಯಾಲಯ ಹೇಳಿತು.

ಸಾರ್ವಜನಿಕ ಸೇವಕ ಎಂಬುದನ್ನು ಜನರ ಸೇವೆ ಸಲ್ಲಿಸಲೆಂದು ಮಾತ್ರ ಸಂವಿಧಾನ ಕಡ್ಡಾಯಗೊಳಿಸುತ್ತದೆ ಎಂಬ ಅಂಶವನ್ನು ನ್ಯಾಯಾಲಯ ಹೇಳಿತು.

" ನಮ್ಮ ಮಹಾನ್ ರಾಷ್ಟ್ರದ ಪ್ರತಿಯೊಬ್ಬ ನಾಗರಿಕ "ರಾಣಿ ಅಥವಾ ರಾಜ" ಎಂದು ಭಾರತೀಯ ಸಂವಿಧಾನದ ಸ್ಫೂರ್ತಿ, ತತ್ವ ಮತ್ತು ನೀತಿ ಘೋಷಿಸುತ್ತದೆ. ಮೊಘಲ್ ಚಕ್ರವರ್ತಿಗಳ ಜಗತ್ತಿನಲ್ಲಿ ಯಾವುದೇ ಸಾರ್ವಜನಿಕ ಸೇವಕ ಇದ್ದಾರೆ ಎಂದು ಊಹಿಸಿಕೊಳ್ಳಲು ಅಥವಾ ಹಾಗೆ ಬದುಕಿರಲು ಸಾಧ್ಯವಿಲ್ಲ. ಸಂವಿಧಾನದ ಪ್ರಕಾರ ಅಂತಹ ಎಲ್ಲಾ ಅಧಿಕಾರಿಗಳು ಸಂವಿಧಾನದಲ್ಲಿ ನಿಗದಿಪಡಿಸಿದ ತತ್ವಗಳಿಗೆ ಅನುಗುಣವಾಗಿ ಸಂಸತ್ತು ಮತ್ತು ರಾಜ್ಯ ಶಾಸಕಾಂಗ ಜಾರಿಗೊಳಿಸಿದ ಕಾನೂನು ಮತ್ತು ನಿಯಮಗಳ ಪ್ರಕಾರ ಸಾರ್ವಜನಿಕ ಸೇವಕರು ಸಾರ್ವಜನಿಕ ಸೇವೆಗೆ ಬದ್ಧರಾಗಿದ್ದಾರೆ. ಅಶಿಸ್ತಿನ ಉನ್ನತ ಪೊಲೀಸ್‌ ಅಧಿಕಾರಿಗಳಿಗೆ ಸಮವಸ್ತ್ರಧಾರಿಗಳಲ್ಲಿ ಅದರಲ್ಲೂ ತಮ್ಮ ಅಧೀನ ಅಧಿಕಾರಿಗಳಲ್ಲಿ ಶಿಸ್ತು ಮೂಡಿಸುವ ನೈತಿಕತೆ ಇಲ್ಲ” ಎಂದು ನ್ಯಾಯಾಲಯ ಕಿಡಿಕಾರಿತು.

ರಾಜ್ಯ ಸರ್ಕಾರ 1979ರಲ್ಲಿಯೇ "ಆರ್ಡರ್ಲಿ" ವ್ಯವಸ್ಥೆ ರದ್ದುಗೊಳಿಸಿದ್ದರೂ, ತಮಿಳುನಾಡು ರಾಜ್ಯದಲ್ಲಿ ಈ ಪದ್ಧತಿಯನ್ನು ಮುಂದುವರೆಸಲಾಗಿದೆ ಎಂಬ ಅಂಶವನ್ನು ಉಲ್ಲೇಖಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಹೀಗಾಗಿ ಹಿರಿಯ ಅಧಿಕಾರಿಗಳ ಮನೆಗೆಲಸಕ್ಕೆ ಅಧೀನ ಪೊಲೀಸ್ ಸಿಬ್ಬಂದಿಯನ್ನು ತೊಡಗಿಸಿಕೊಳ್ಳುವ ಪದ್ಧತಿಯನ್ನು ತಕ್ಷಣವೇ ರದ್ದುಗೊಳಿಸುವಂತೆ ತಮಿಳುನಾಡು ಡಿಜಿಪಿಗೆ ಪೀಠ ಆದೇಶಿಸಿತು. ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್‌ 18ಕ್ಕೆ ನಿಗದಿಯಾಗಿದೆ.