Prajwal Revanna & Karnataka HC 
ಸುದ್ದಿಗಳು

[ಅತ್ಯಾಚಾರ ಪ್ರಕರಣ] ಪ್ರಜ್ವಲ್‌ಗೆ ಸಂಕಷ್ಟ, ರಾಜ್ಯ ಸರ್ಕಾರಕ್ಕೆ ಸಂತೋಷ: ಹಿರಿಯ ವಕೀಲ ನಾವದಗಿ ವಾದ

ಪ್ರಜ್ವಲ್‌ ವಿರುದ್ಧ ನಾಲ್ಕು ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಎರಡು ಪ್ರಕರಣದಲ್ಲಿ ಈಗಾಗಲೇ ವಿಚಾರಣೆ ಆರಂಭವಾಗಿದೆ. ಆಕ್ಷೇಪಣೆ ಸಲ್ಲಿಸಿದ್ದು, ವಾದ ಮಂಡಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದ ಎಸ್‌ಪಿಪಿ ಜಗದೀಶ್‌.

Bar & Bench

ಮನೆ ಕೆಲಸದಾಕೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಪ್ರಜ್ವಲ್‌ ರೇವಣ್ಣ ಒಂದೂವರೆ ವರ್ಷದಿಂದ ಜೈಲಿನಲ್ಲಿ ಕಠಿಣ ಪರಿಸ್ಥಿತಿಯಲ್ಲಿದ್ದು, ರಾಜ್ಯ ಸರ್ಕಾರ ಸಂತೋಷವಾಗಿದೆ ಎಂದು ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು ಮೌಖಿಕವಾಗಿ ಕರ್ನಾಟಕ ಹೈಕೋರ್ಟ್‌ನಲ್ಲಿ ಸೋಮವಾರ ಆಕ್ಷೇಪಿಸಿದರು.

ಜಾಮೀನು ಕೋರಿ ಪ್ರಜ್ವಲ್‌ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಪ್ರಜ್ವಲ್‌ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ಮೇಲ್ನೋಟಕ್ಕೆ ಪ್ರಕರಣ ಇದೆ ಎಂದು ಮತ್ತು ಪ್ರಜ್ವಲ್‌ ನಾಪತ್ತೆಯಾಗುವ ಸಾಧ್ಯತೆ ಇದೆ ಎಂದು ಈ ಹಿಂದೆ ಜಾಮೀನು ಅರ್ಜಿ ವಜಾಗೊಂಡಿತ್ತು. ಈಗ ಎರಡು ಆಧಾರಗಳ ಮೇಲೆ ಪ್ರಜ್ವಲ್‌ ಜಾಮೀನು ಕೋರುತ್ತಿದ್ದಾರೆ. ಪ್ರಕರಣದಲ್ಲಿ ಪ್ರಜ್ವಲ್‌ ಮತ್ತು ಅವರ ತಂದೆ ಎಚ್‌ ಡಿ ರೇವಣ್ನ ಆರೋಪಿಗಳಾಗಿದ್ದು, ರೇವಣ್ಣ ವಿರುದ್ಧದ ವಿಚಾರಣೆಗೆ ತಡೆ ನೀಡಲಾಗಿದೆ. ಪ್ರಕರಣದಲ್ಲಿ 157 ಸಾಕ್ಷಿಗಳನ್ನು ಉಲ್ಲೇಖಿಸಲಾಗಿದ್ದು, ಪ್ರಕರಣವನ್ನು ವಿಭಜಿಸಲಾಗಿಲ್ಲ. ಇಂದು ಪ್ರಜ್ವಲ್‌ ಕಷ್ಟದಲ್ಲಿದ್ದು, ಸರ್ಕಾರ ಸಂತೋಷವಾಗಿದೆ” ಎಂದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ಪ್ರಜ್ವಲ್‌ ವಿರುದ್ಧ ನಾಲ್ವರು ಅತ್ಯಾಚಾರ ಪ್ರಕರಣ ದಾಖಲಿಸಿದ್ದು, ಎರಡು ಪ್ರಕರಣದಲ್ಲಿ ಈಗಾಗಲೇ ವಿಚಾರಣೆ ಆರಂಭವಾಗಿದೆ. ಅವುಗಳು ಪ್ರಾಥಮಿಕ ಹಂತದಲ್ಲಿವೆ. ಆಕ್ಷೇಪಣೆ ಸಲ್ಲಿಸಿದ್ದು, ವಾದ ಮಂಡಿಸಲು ಕಾಲಾವಕಾಶ ನೀಡಬೇಕು” ಎಂದು ಕೋರಿದರು.

ವಿಚಾರಣೆಯ ಮಧ್ಯದಲ್ಲಿ ಪೀಠವು ವಿಚಾರಣೆ ವಿಳಂಬವಾಗುತ್ತಿದ್ದ ಎಂಬ ಆಧಾರವನ್ನು ಪ್ರಜ್ವಲ್‌ ತೆಗೆದುಕೊಂಡಿದ್ದಾರೆ ಎಂದಿತು. ಅಂತಿಮವಾಗಿ ಸರ್ಕಾರ ಸಲ್ಲಿಸರುವ ಆಕ್ಷೇಪಣೆಯನ್ನು ದಾಖಲಿಸಿಕೊಂಡ ಪೀಠವು ಅರ್ಜಿಯ ಪ್ರಾಥಮಿಕ ವಿಚಾರಣೆಗಾಗಿ ಪ್ರಕರಣವನ್ನು ಶುಕ್ರವಾರಕ್ಕೆ (ಜೂನ್‌ 20) ಮುಂದೂಡಿತು.

ಹಾಸನದ ಜಿಲ್ಲೆಯ ಹೊಳೆನರಸೀಪುರ ಠಾಣೆಯಲ್ಲಿ ಎಚ್‌ ಡಿ ರೇವಣ್ಣ ಮತ್ತು ಪ್ರಜ್ವಲ್‌ ವಿರುದ್ಧ 2024ರಲ್ಲಿ ಮೊದಲಿಗೆ ಎಫ್‌ಐಆರ್‌ ದಾಖಲಾಗಿತ್ತು. ಇದರಲ್ಲಿ ಪ್ರಜ್ವಲ್‌ ವಿರುದ್ಧ ಮಾತ್ರ ಅತ್ಯಾಚಾರ ಆರೋಪ ಮಾಡಲಾಗಿದೆ. ಐಪಿಎಸ್‌ ಸೆಕ್ಷನ್‌ಗಳಾದ 376, 376(2)(K), 354, 354(A), 354(B), 354(D), 506, 509 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 66ರ ಅಡಿ ಪ್ರಜ್ವಲ್‌ ವಿರುದ್ಧ ವಿಚಾರಣಾಧೀನ ನ್ಯಾಯಾಲಯಕ್ಕೆ ವಿಶೇಷ ತನಿಖಾ ತಂಡವು ಆರೋಪ ಪಟ್ಟಿ ಸಲ್ಲಿಸಿದೆ. ಈ ಪ್ರಕರಣದಲ್ಲಿ ಪ್ರಜ್ವಲ್‌ ಜಾಮೀನು ಕೋರಿದ್ದಾರೆ. ಇದನ್ನು ಹೊರತುಪಡಿಸಿ ಇನ್ನೂ ಮೂರು ಅತ್ಯಾಚಾರ ಆರೋಪದ ಪ್ರಕರಣಗಳು ಅವರ ವಿರುದ್ಧ ಬಾಕಿ ಉಳಿದಿವೆ.