
ಮನೆಕೆಲಸದಾಕೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ತನ್ನ ಜಾಮೀನು ಅರ್ಜಿಯನ್ನು ಸ್ವತಂತ್ರವಾಗಿ ಪರಿಗಣಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ಗೆ ಶುಕ್ರವಾರ ಮನವಿ ಮಾಡಿದರು.
ಪ್ರಜ್ವಲ್ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.
ಪ್ರಜ್ವಲ್ ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ಹಾಸನದ ಹೊಳೆನರಸೀಪುರ ಠಾಣೆಯಲ್ಲಿ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಮತ್ತು ಪ್ರಜ್ವಲ್ ವಿರುದ್ಧ ಮೊದಲಿಗೆ ಲೈಂಗಿಕ ದೌರ್ಜನ್ಯ ಆರೋಪ ಮಾಡಲಾಗಿತ್ತು. ಆನಂತರ ಪ್ರಜ್ವಲ್ ವಿರುದ್ಧ ಅತ್ಯಾಚಾರ ಆರೋಪ ಸೇರಿಸಲಾಗಿದೆ. ಈ ನಡುವೆ, ರೇವಣ್ಣ ಅವರು ಎಫ್‌ಐಆರ್ ಮತ್ತು ಆರೋಪ ಪಟ್ಟಿ ರದ್ದತಿ ಕೋರಿರುವ ವಿಚಾರಣಾಧೀನ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿದೆ. ಇಲ್ಲಿ ರೇವಣ್ಣ ಮತ್ತು ಪ್ರಜ್ವಲ್ ವಿರುದ್ಧ ಐಪಿಸಿ ಸೆಕ್ಷನ್ 120ಬಿ ಅನ್ವಯಿಸಲಾಗಿದೆ. ರೇವಣ್ಣ ಅವರಿಗೆ ಸೀಮಿತವಾಗಿ ತಡೆ ನೀಡಿ, ಪ್ರಜ್ವಲ್ ವಿರುದ್ಧ ವಿಚಾರಣೆ ಮುಂದುವರಿಸಲು ಕಾನೂನಿನಲ್ಲಿ ಅನುಮತಿ ಇಲ್ಲ” ಎಂದರು.
ಅಲ್ಲದೇ, “ರೇವಣ್ಣ ಅವರು ಎಫ್‌ಐಆರ್ ಮತ್ತು ಆರೋಪ ಪಟ್ಟಿ ವಜಾ ಕೋರಿರುವ ಅರ್ಜಿ ಪುರಸ್ಕೃತವಾದರೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದು ಅಥವಾ ರೇವಣ್ಣ ಅರ್ಜಿ ತಿರಸ್ಕೃತವಾದರೆ ಅವರು ಸುಪ್ರೀಂ ಕೋರ್ಟ್‌ಗೆ ಹೋಗುವ ಸಾಧ್ಯತೆ ಇರುತ್ತದೆ. ಹೀಗಾಗಿ, ರೇವಣ್ಣ ಅವರದ್ದು ವಿಭಿನ್ನ ಪ್ರಕರಣವಾಗಿದೆ. ಹಾಗಾಗಿ, ಪ್ರಜ್ವಲ್ ಜಾಮೀನು ಅರ್ಜಿಯನ್ನು ಬಾಕಿ ಉಳಿಸುವುದು ಸರಿಯಲ್ಲ. ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಕೆಯಾಗಿದ್ದು, ವಿಚಾರಣೆ ಆರಂಭವಾಗಿದೆ. ಹೀಗಿರುವಾಗ ಪ್ರಜ್ವಲ್‌ರನ್ನು ನ್ಯಾಯಾಂಗ ಬಂಧನದಲ್ಲಿ ಇಡುವುದು ಸೂಕ್ತವಲ್ಲ. ಇದು ಸಂವಿಧಾನದ 21ನೇ ವಿಧಿಯ (ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು) ಉಲ್ಲಂಘನೆಗೆ ಅತ್ಯುತ್ತಮ ಉದಾಹರಣೆಯಾಗಬಲ್ಲ ಪ್ರಕರಣವಾಗಿದೆ” ಎಂದರು.
ಆಗ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ಪ್ರಜ್ವಲ್ ವಿರುದ್ಧ ಇದಲ್ಲದೇ ಇನ್ನೂ ಮೂರು ಅತ್ಯಾಚಾರ ಪ್ರಕರಣಗಳಿವೆ. ಮುಂದಿನ ವಾರ ರೇವಣ್ಣ ಅರ್ಜಿಯೂ ಸೇರಿ ಎರಡೂ ಅರ್ಜಿಗಳನ್ನು ಒಟ್ಟಿಗೆ ನಿರ್ಧರಿಸಬಹುದು” ಎಂದರು.
ಇದಕ್ಕೆ ಆಕ್ಷೇಪಿಸಿದ ನಾವದಗಿ ಅವರು “ಇದೊಂದೇ ಪ್ರಕರಣದಲ್ಲಿ ಪ್ರಜ್ವಲ್ ಅವರನ್ನು ಬಂಧಿಸಿರುವುದು. ರೇವಣ್ಣ ಅವರ ಅರ್ಜಿಯನ್ನು ಇದರೊಟ್ಟಿಗೆ ಸೇರಿಸುವುದಕ್ಕೆ ನಮ್ಮ ಆಕ್ಷೇಪವಿದೆ. ನಮ್ಮ ಅರ್ಜಿಯನ್ನು ಸ್ವತಂತ್ರವಾಗಿ ಪರಿಗಣಿಸಬೇಕು. ನಮ್ಮ ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿದೆ. ವಿಚಾರಣೆ ನಡೆಯುತ್ತಿದೆ. ವಿನಾ ಕಾರಣ ಪ್ರಜ್ವಲ್‌ರನ್ನು ಬಂಧನದಲ್ಲಿಡಲಾಗಿದೆ. ಇದು ಸಂವಿಧಾನದ 21ನೇ ವಿಧಿಯ ಉಲ್ಲಂಘನೆಗೆ ಸ್ಪಷ್ಟ ಉದಾಹರಣೆಯಾಗಿದೆ. ಈ ಆಧಾರದಲ್ಲಿ ವಾದಿಸಲು ಬಯಸುತ್ತೇನೆ” ಎಂದರು.
ವಾದ ಪ್ರತಿವಾದ ಆಲಿಸಿದ ಪೀಠವು ರೇವಣ್ಣ ಎಫ್‌ಐಆರ್ ಮತ್ತು ಆರೋಪ ಪಟ್ಟಿ ಪ್ರಶ್ನಿಸಿರುವ ಅರ್ಜಿ ಮತ್ತು ಪ್ರಜ್ವಲ್ ಜಾಮೀನು ಅರ್ಜಿಯನ್ನು ಒಂದಾದ ನಂತರ ಮತ್ತೊಂದನ್ನು ಪಟ್ಟಿ ಮಾಡುವಂತೆ ರಿಜಿಸ್ಟ್ರಿಗೆ ನಿರ್ದೇಶಿಸಿ, ರಾಜ್ಯ ಸರ್ಕಾರಕ್ಕೆ ಪ್ರಜ್ವಲ್ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಆದೇಶಿಸಿ, ವಿಚಾರಣೆಯನ್ನು ಜೂನ್ 13ಕ್ಕೆ ಮುಂದೂಡಿತು.