Senior Counsel Jayna Kothari 
ಸುದ್ದಿಗಳು

ಪ್ರಜ್ವಲ್‌ ಪ್ರಕರಣ: ಹೆಚ್ಚುವರಿ ಎಸ್‌ಪಿಪಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ಹಿರಿಯ ವಕೀಲೆ ಜಯ್ನಾ ಕೊಠಾರಿ

Bar & Bench

ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣ ಹಾಗೂ ಈ ಸಂಬಂಧ ವಿಶೇಷ ತನಿಖಾ ದಳವು (ಎಸ್‌ಐಟಿ) ನಡೆಸುತ್ತಿರುವ ಪ್ರಕರಣಗಳಲ್ಲಿ ರಾಜ್ಯ ಸರ್ಕಾರದ ಪರವಾಗಿ ವಾದಿಸಲು ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರಾಗಿ ನೇಮಕಗೊಂಡಿದ್ದ ಹಿರಿಯ ವಕೀಲೆ ಜಯ್ನಾ ಕೊಠಾರಿ ತಮ್ಮ ಹುದ್ದೆಗೆ ಮಂಗಳವಾರ ರಾಜೀನಾಮೆ ಸಲ್ಲಿಸಿದ್ದಾರೆ.

ಹೊಳೆನರಸೀಪುರ ಟೌನ್‌ ಠಾಣೆಯಲ್ಲಿ ಜೆಡಿಎಸ್‌ ಶಾಸಕ ಎಚ್‌ ಡಿ ರೇವಣ್ಣ ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣದ, ಅದೇ ಠಾಣೆಯಲ್ಲಿ ಪ್ರಜ್ವಲ್‌ ವಿರುದ್ಧದ ಅತ್ಯಾಚಾರ ಪ್ರಕರಣ, ಮೈಸೂರಿನ ಕೆ ಆರ್‌ ನಗರ ಠಾಣೆಯಲ್ಲಿ ರೇವಣ್ಣ ಸೇರಿ ಹಲವರ ವಿರುದ್ಧ ದಾಖಲಾಗಿರುವ ಸಂತ್ರಸ್ತೆ ಅಪಹರಣ ಪ್ರಕರಣ, ಬೆಂಗಳೂರಿನ ಸಿಐಡಿ ಠಾಣೆಯಲ್ಲಿ ಪ್ರಜ್ವಲ್‌ ವಿರುದ್ಧ ದಾಖಲಾಗಿರುವ ಎರಡು ಪ್ರಕರಣಗಳಲ್ಲಿ ಹೈಕೋರ್ಟ್‌ನಲ್ಲಿ ಎಸ್‌ಐಟಿ ಪರವಾಗಿ ವಾದಿಸಲು ಜಯ್ನಾ ಕೊಠಾರಿ ಅವರನ್ನು ಹೆಚ್ಚುವರಿ ಎಸ್‌ಪಿಪಿಯಾಗಿ ರಾಜ್ಯ ಸರ್ಕಾರ ನೇಮಿಸಿತ್ತು.

ಈ ಕುರಿತಂತೆ ಜಯ್ನಾ ಅವರು ಗೃಹ ಇಲಾಖೆಯ ಉಪ ಕಾರ್ಯದರ್ಶಿಗೆ ಮಂಗಳವಾರ ತಮ್ಮ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಈ ಸಂಬಂಧ “ಬಾರ್‌ ಅಂಡ್‌ ಬೆಂಚ್”‌ ಜೊತೆ ಮಾತನಾಡಿದ ಜಯ್ನಾ ಅವರು “ತಮ್ಮ ರಾಜೀನಾಮೆಗೆ ಯಾವುದೇ ನಿರ್ದಿಷ್ಟ ಕಾರಣವಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ.

ಜಯ್ನಾ ಅವರ ಜೊತೆಗೆ ಹಿರಿಯ ವಕೀಲ ಅಶೋಕ್‌ ನಾಯ್ಕ್‌ ಅವರನ್ನೂ ಹೆಚ್ಚುವರಿ ಎಸ್‌ಪಿಪಿಯಾಗಿ ನೇಮಿಸಲಾಗಿದೆ. ಅಪಹರಣ ಪ್ರಕರಣದಲ್ಲಿ ರೇವಣ್ಣ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸುವಾಗ ರೇವಣ್ಣ ಪರ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು ಇಬ್ಬರು ಎಎಸ್‌ಪಿಪಿಗಳನ್ನು (ಜಯ್ನಾ ಮತ್ತು ಅಶೋಕ್‌ ನಾಯ್ಕ್‌) ನೇಮಕ ಮಾಡಲು ಅವಕಾಶವಿಲ್ಲ ಎಂದು ವಾದಿಸಿದ್ದರು.

ಇದಕ್ಕೂ ಮುನ್ನ, ವಕೀಲ ಬಿ ಎನ್‌ ಜಗದೀಶ್‌ ಅವರನ್ನು ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ನೇಮಿಸಲಾಗಿತ್ತು. ಈ ಮಧ್ಯೆ, ಪ್ರಜ್ವಲ್‌ ಹಗರಣಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಹೈಕೋರ್ಟ್‌ನಲ್ಲಿ ನಡೆಸಲು ಹಿರಿಯ ವಕೀಲ ಪ್ರೊ. ರವಿವರ್ಮಾ ಕುಮಾರ್‌ ಅವರನ್ನು ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ರಾಜ್ಯ ಸರ್ಕಾರ ನೇಮಿಸಿದೆ.