Prajwal Revanna & Karnataka HC 
ಸುದ್ದಿಗಳು

ಆಜೀವ ಜೈಲು ಶಿಕ್ಷೆ ಬದಿಗೆ ಸರಿಸಲು ಪ್ರಜ್ವಲ್‌ ಮನವಿ: ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಕಾಲಾವಕಾಶ ನೀಡಿದ ಹೈಕೋರ್ಟ್‌

ನ್ಯಾಯಾಲಯವು ಆ.2ರಂದು ಪ್ರಜ್ವಲ್‌ಗೆ ಜೀವನ ಪರ್ಯಂತ ಜೈಲು ಶಿಕ್ಷೆ ಜೊತೆಗೆ ₹11.60 ಲಕ್ಷ ದಂಡ ವಿಧಿಸಿತ್ತು. ಇದರಲ್ಲಿ ಸಂತ್ರಸ್ತೆಗೆ ₹11.25 ಲಕ್ಷವನ್ನು ಪರಿಹಾರದ ರೂಪದಲ್ಲಿ ನೀಡಿ, ಬಾಕಿ ಹಣವನ್ನು ಸರ್ಕಾರದ ಖಾತೆಗೆ ಜಮೆ ಮಾಡಲು ಆದೇಶಿಸಿತ್ತು.

Bar & Bench

ಮನೆಕೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಆಜೀವ ಜೈಲು ಶಿಕ್ಷೆ ವಿಧಿಸಿರುವ ಶಿಕ್ಷೆಯನ್ನು ಬದಿಗೆ ಸರಿಸುವಂತೆ ಕೋರಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಎರಡು ವಾರ ಕಾಲಾವಕಾಶ ನೀಡಿದೆ.

ವಿಶೇಷ ನ್ಯಾಯಾಲಯವು ವಿಧಿಸಿರುವ ಆಜೀವ ಜೈಲು ಶಿಕ್ಷೆ ಪ್ರಶ್ನಿಸಿ ಪ್ರಜ್ವಲ್‌ ರೇವಣ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ ಎಸ್‌ ಮುದುಗಲ್‌ ಮತ್ತು ಟಿ ವೆಂಕಟೇಶ್‌ ನಾಯ್ಕ್‌ ಅವರ ವಿಭಾಗೀಯ ಪೀಠ ನಡೆಸಿತು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್‌ ಅವರು “ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು” ಎಂದು ಕೋರಿದರು.

ಪ್ರಜ್ವಲ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿದ್ಧಾರ್ಥ್‌ ಲೂಥ್ರಾ ಅವರು “ಆಕ್ಷೇಪಣೆ ಸಲ್ಲಿಸಲು ಪ್ರಾಸಿಕ್ಯೂಷನ್‌ ಕಾಲಾವಕಾಶ ತೆಗೆದುಕೊಳ್ಳಬಹುದು. ಆದರೆ, ಭೌತಿಕವಾಗಿ ಪೀಠದ ಮುಂದೆ ಹಾಜರಾಗಿ ವಾದಿಸಲು ಸಮಯ ನೀಡಬೇಕು” ಎಂದು ಕೋರಿದರು.

ಉಭಯ ಪಕ್ಷಕಾರರ ವಾದ ಆಲಿಸಿದ ನ್ಯಾಯಾಲಯವು ಆಕ್ಷೇಪಣೆ ಸಲ್ಲಿಸಲು ಪ್ರಾಸಿಕ್ಯೂಷನ್‌ಗೆ ಅನುಮತಿಸಿ, ವಿಚಾರಣೆಯನ್ನು ನವೆಂಬರ್‌ 13 ಕ್ಕೆ ಮುಂದೂಡಿತು.

ಆಗಸ್ಟ್‌ 2ರಂದು ವಿಚಾರಣಾಧೀನ ನ್ಯಾಯಾಲಯವು ಪ್ರಜ್ವಲ್‌ಗೆ ಜೀವನ ಪರ್ಯಂತ ಜೈಲು ಶಿಕ್ಷೆಯ ಜೊತೆಗೆ ₹11.60 ಲಕ್ಷ ದಂಡವನ್ನು ವಿಧಿಸಿತ್ತು. ಇದರಲ್ಲಿ ಸಂತ್ರಸ್ತೆಗೆ ₹11.25 ಲಕ್ಷವನ್ನು ಪರಿಹಾರದ ರೂಪದಲ್ಲಿ, ಬಾಕಿ ಹಣವನ್ನು ಸರ್ಕಾರದ ಖಾತೆಗೆ ಜಮೆ ಮಾಡಲು ಆದೇಶಿಸಿತ್ತು.

ಐಪಿಸಿ ಸೆಕ್ಷನ್‌ 376(2)(ಎನ್‌) (ಪದೇ ಪದೇ ಅತ್ಯಾಚಾರ) ಅಡಿ ಅಪರಾಧಕ್ಕೆ ಜೀವನ ಪರ್ಯಂತ ಶಿಕ್ಷೆ ಮತ್ತು ₹5 ಲಕ್ಷ ದಂಡ; 376(2)(ಕೆ) (ಪ್ರಭಾವಿ ಸ್ಥಾನದಲ್ಲಿರುವ ವ್ಯಕ್ತಿಯಿಂದ ಅತ್ಯಾಚಾರ) ಅಡಿ ಅಪರಾಧಕ್ಕೆ ಜೀವಾವಧಿ ಶಿಕ್ಷೆ, ₹5 ಲಕ್ಷ ದಂಡ; 354(ಬಿ) (ವಿವಸ್ತ್ರಗೊಳಿಸುವಾಗ ಆಕೆಯ ಮೇಲೆ ಹಲ್ಲೆ) ಅಡಿ ಅಪರಾಧಕ್ಕೆ 7 ವರ್ಷ ಶಿಕ್ಷೆ ₹50,000 ದಂಡ; 354-ಎ (ಮಹಿಳೆಯ ಘನತೆಗೆ ಚ್ಯುತಿ) ಅಡಿ ಅಪರಾಧಕ್ಕೆ 3 ವರ್ಷ ಜೈಲು, ₹25,000 ದಂಡ; 354(ಸಿ) (ವಿವಸ್ತ್ರಗೊಳಿಸಿರುವ ಮಹಿಳೆಯನ್ನು ನೋಡಿ ಆನಂದಿಸುವುದು) ಅಡಿ ಅಪರಾಧಕ್ಕೆ 3 ವರ್ಷ ಜೈಲು, ₹25,000 ದಂಡ; 201 (ಅಪರಾಧ ಕೃತ್ಯದ ಸಾಕ್ಷಿ ನಾಶ) ಅಡಿ ಅಪರಾಧಕ್ಕೆ 3 ವರ್ಷ ಶಿಕ್ಷೆ, ₹25,000 ದಂಡ; ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 66ಇ (ಖಾಸಗಿತನದ ಉಲ್ಲಂಘಿಸಿ ವಿಡಿಯೊ ಮಾಡಿ, ಪ್ರಸಾರ ಮಾಡಿರುವುದು) ಅಡಿ ಅಪರಾಧಕ್ಕೆ 3 ವರ್ಷ ಶಿಕ್ಷೆ, ₹25,000 ದಂಡ; 506 (ಕ್ರಿಮಿನಲ್‌ ಬೆದರಿಕೆ) 2 ವರ್ಷ ಶಿಕ್ಷೆ, ₹10,000 ದಂಡ ವಿಧಿಸಿತ್ತು. ಈ ತೀರ್ಪನ್ನು ಬದಿಗೆ ಸರಿಸುವಂತೆ ಪ್ರಜ್ವಲ್‌ ಕೋರಿದ್ದಾರೆ.