Court complex, Madikeri.
Court complex, Madikeri.  
ಸುದ್ದಿಗಳು

ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣ: ಏಕೈಕ ಪ್ರತ್ಯಕ್ಷದರ್ಶಿಯ ಹೇಳಿಕೆ ನಂಬಲರ್ಹವಲ್ಲ ಎಂದ ಕೊಡಗು ನ್ಯಾಯಾಲಯ

Ramesh DK

ಪ್ರವೀಣ್‌ ಪೂಜಾರಿ ಹತ್ಯೆ ಪ್ರಕರಣದ ಏಕೈಕ ಪ್ರತ್ಯಕ್ಷದರ್ಶಿಯ ಸಾಕ್ಷಿಯ ಹೇಳಿಕೆ ನಂಬಲರ್ಹವಲ್ಲ ಎಂದು ತನ್ನ ಆದೇಶದಲ್ಲಿ ತಿಳಿಸಿರುವ ಕೊಡಗು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯ ಆರೋಪ ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

2016ರ ಆ. 14ರಂದು ಕೊಲೆಯಾಗಿದ್ದ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತ ಪ್ರವೀಣ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಕಳೆದ ಮಂಗಳವಾರ ಒಂಬತ್ತು ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ತುಫೈಲ್ ಎಂ ಎಚ್, ನಯಾಜ್ ಅಹಮದ್, ಮೊಹಮ್ಮದ್, ಮುಸ್ತಫಾ, ಇಲಿಯಾಸ್, ಇರ್ಫಾನ್ ಅಹಮದ್, ಮಜೀಬ್‌ ರೆಹಮಾನ್‌ ಕೆ ಯು ಹಾಗೂ ಹ್ಯಾರಿಸ್ ಟಿ ಎ, ಶರೀಫ್ ಅವರನ್ನು ದೋಷಮುಕ್ತಗೊಳಿಸಲಾಗಿತ್ತು. ಆರೋಪಿಗಳ ಪರವಾಗಿ ವಕೀಲ ಟಿ ಎಚ್‌ ಅಬೂಬಕರ್‌ ವಾದ ಮಂಡಿಸಿದ್ದರು. ಇದಕ್ಕೆ ಸಂಬಂಧಿಸಿದ ಆದೇಶದ ಪ್ರತಿ ‘ಬಾರ್‌ ಅಂಡ್‌ ಬೆಂಚ್‌’ಗೆ ಲಭಿಸಿದ್ದು ನ್ಯಾಯಾಲಯ ತನ್ನ ತೀರ್ಪಿಗೆ ನೀಡಿದ ಕಾರಣಗಳು ಈ ರೀತಿ ಇವೆ:

ಪ್ರಾಸಿಕ್ಯೂಷನ್‌ ಪರ ಸಾಕ್ಷಿಯಾದ ಪ್ರತ್ಯಕ್ಷದರ್ಶಿ ಶ್ರೀಮತಿ ಬಿಂದು ಅವರು ಘಟನೆಯನ್ನು 100 ಮೀಟರ್ ದೂರದಿಂದ ಕಂಡದ್ದಾಗಿ ಹೇಳಿದ್ದಾರೆ. ಆದರೆ ಈ ಅಂಶವನ್ನು ಪೊಲೀಸ್‌ ತನಿಖೆ ವೇಳೆ ಅವರು ದಾಖಲಿಸಿಲ್ಲ. ಇದು ಆಕೆ ಘಟನೆಯನ್ನು ನೋಡಿದ್ದರೆ ಎಂಬ ಬಗ್ಗೆ ಅನುಮಾನ ಮೂಡಿಸುತ್ತದೆ. ಐದನೇ ಆರೋಪಿ ಘಟನೆ ಸ್ಥಳದಲ್ಲಿ ಆಟೊ ತಡೆದರು ಎಂದು ಪ್ರಾಸಿಕ್ಯೂಷನ್‌ ಪರ ವಕೀಲರು ಹೇಳುತ್ತಾರೆ. ಆದರೆ ಆರೋಪಿ ಅಲ್ಲಿ ಇದ್ದುದರ ಬಗ್ಗೆ ಆಕೆ ಹೇಳಿಕೆ ನೀಡಿಲ್ಲ. ಒಂಬತ್ತು ಮಂದಿ ಆರೋಪಿಗಳು ಪ್ರವೀಣ್‌ ಹತ್ಯೆ ವೇಳೆ ಸ್ಥಳದಲ್ಲಿದ್ದರು ಎಂಬುದು ಪ್ರಾಸಿಕ್ಯೂಷನ್‌ ವಾದವಾಗಿದೆ. ಆದರೆ ಬಿಂದು ಅವರು ಕೇವಲ ನಾಲ್ಕು ಜನ ಇದ್ದುದಾಗಿ ಹೇಳಿದ್ದಾರೆ. ಅಲ್ಲದೆ ಕೊಲೆ ನಡೆದ ವಿಧಾನದ ಬಗ್ಗೆ ಆಕೆ ನ್ಯಾಯಾಲಯದಲ್ಲಿ ನೀಡಿದ ಹೇಳಿಕೆ ಪೊಲೀಸರ ಎದುರು ನೀಡಿದ್ದ ಹೇಳಿಕೆಗೆ ವ್ಯತಿರಿಕ್ತವಾಗಿದೆ ಎಂದು ನ್ಯಾಯಾಧೀಶ ಜಿನರಾಳಕರ್‌ ಬಿ ಎಲ್‌ ಅವರು ನೀಡಿರುವ ಆದೇಶದಲ್ಲಿ ತಿಳಿಸಲಾಗಿದೆ.

ಆದ್ದರಿಂದ ಆಕೆ ನೀಡಿರುವ ಸಾಕ್ಷ್ಯ ನಂಬಲರ್ಹವಲ್ಲ ಮತ್ತು ಅನಾಮಧೇಯ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿರುವುದರಿಂದ ಸಮಂಜಸವಾದ ಎಲ್ಲಾ ಅನುಮಾನಗಳ ಹೊರತಾಗಿಯೂ ಆರೋಪಿಗಳ ವಿರುದ್ಧದ ಅಪರಾಧ ಸಾಬೀತುಪಡಿಸಲು ಆಕೆಯ ಸಾಕ್ಷ್ಯವನ್ನು ಅವಲಂಬಿಸುವುದು ಅಸುರಕ್ಷಿತ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅಲ್ಲದೆ ಪ್ರವೀಣ್‌ ಕಿರಿಯ ಸೋದರಿ ಸುನಿತಾ, ಮೃತನ ಸೋದರ ಸಂಬಂಧಿ ಹಾಗೂ ದೂರುದಾರ ಹೇಮಂತ್‌ ಸುವರ್ಣ ಸೇರಿದಂತೆ ವಿವಿಧ ಸಾಕ್ಷಿಗಳು ನೀಡಿರುವ ಹೇಳಿಕೆಗಳು ಕೂಡ ಆರೋಪ ಸಾಬೀತು ಪಡಿಸಲು ಪೂರಕವಾಗಿಲ್ಲ ಎಂದು ಅದು ಹೇಳಿದೆ.

ಪ್ರವೀಣ್‌ ಪೂಜಾರಿ ಅವರನ್ನು ಕೊಲೆ ಮಾಡುವ ಸಾಮಾನ್ಯ ಉದ್ದೇಶದಿಂದ ಸಂಚು ರೂಪಿಸಲು ಮಾರಕಾಸ್ತ್ರಗಳನ್ನು ಹಿಡಿದು ಆರೋಪಿಗಳು ಗುಂಪುಗೂಡಿದ್ದರು ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ ವಿಫಲವಾಗಿದೆ ಎಂದು ನ್ಯಾಯಾಧೀಶರು ಉಲ್ಲೇಖಿಸಿದ್ದಾರೆ.

ಕೊಲೆಯಾದ ಪ್ರವೀಣ್‌ ಪೂಜಾರಿ ತಂದೆಯವರಿಗೆ ಪರಿಹಾರ ನೀಡುವಂತೆಯೂ ನ್ಯಾಯಾಲಯ ಇದೇ ಸಂದರ್ಭದಲ್ಲಿ ಸೂಚಿಸಿದೆ. “ಪ್ರವೀಣ್‌ ಅವಿವಾಹಿತರಾಗಿದ್ದು ತಂದೆ ಚೆಂಗಪ್ಪ ಅವರೊಂದಿಗೆ ವಾಸವಿದ್ದರು. ಆರೋಪಿಗಳ ಅಪರಾಧ ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ ವಿಫಲವಾಗಿದ್ದರೂ ಕೂಡ ಮಗನನ್ನು ಕಳೆದುಕೊಂಡಿರುವ ಅವರ ತಂದೆ ಪರಿಹಾರ ಪಡೆಯಲು ಅರ್ಹರಾಗಿದ್ದಾರೆ. ಆದ್ದರಿಂದ ಪರಿಹಾರ ದೊರಕಿಸಿಕೊಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಶಿಫಾರಸು ಮಾಡುವುದು ಸೂಕ್ತ” ಎಂದು ಅದು ಹೇಳಿದೆ.

ಆದ್ದರಿಂದ ಐಪಿಸಿ ಸೆಕ್ಷನ್‌ 143, 144, 147, 148, 341, 120B, 302ರ ಅಡಿ ಪ್ರಕರಣ ಎದುರಿಸುತ್ತಿದ್ದ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. ಮೇಲ್ಮನವಿಯ ಅವಧಿ ಪೂರ್ಣಗೊಂಡ ನಂತರ ಜಪ್ತಿ ಮಾಡಿದ ವಾಹನಗಳನ್ನು ಬಿಡುಗಡೆ ಮಾಡಬೇಕು. ಪರಿಹಾರ ಒದಗಿಸುವುದಕ್ಕಾಗಿ ಆದೇಶದ ಪ್ರತಿಯನ್ನು ಮಡಿಕೇರಿಯಲ್ಲಿರುವ ಕೊಡಗು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ತಲುಪಿಸಬೇಕು ಎಂದು ಕೂಡ ಆದೇಶದಲ್ಲಿ ತಿಳಿಸಲಾಗಿದೆ.