Supreme Court of India 
ಸುದ್ದಿಗಳು

ಖಜುರಾಹೊದಲ್ಲಿ ಶಿರಚ್ಛೇದಿತ ವಿಷ್ಣುವಿನ ವಿಗ್ರಹ ಸರಿಪಡಿಸಲು ಕೋರಿಕೆ: ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ

ಪ್ರಕರಣ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ವ್ಯಾಪ್ತಿಗೆ ಬರುತ್ತದೆ ಎಂದ ನ್ಯಾಯಾಲಯ.

Bar & Bench

ಮಧ್ಯಪ್ರದೇಶದ ಖಜುರಾಹೊ ಸ್ಮಾರಕ ಸಮುಚ್ಛಯದಲ್ಲಿರುವ ಜವಾರಿ ದೇವಸ್ಥಾನದಲ್ಲಿ 7 ಅಡಿ ಎತ್ತರದ ವಿಷ್ಣುವಿನ ಶಿರಚ್ಛೇದಿತ ವಿಗ್ರಹವನ್ನು ಸರಿಪಡಿಸಿ ಮರುಸ್ಥಾಪಿಸಲು ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ [ರಾಕೇಶ್ ದಲಾಲ್ ವಿರುದ್ಧ ಭಾರತ ಒಕ್ಕೂಟ].

ಪ್ರಕರಣ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್ಐ) ವ್ಯಾಪ್ತಿಗೆ ಬರುತ್ತದೆಯೇ ಹೊರತು ನ್ಯಾಯಾಲಯದ ವ್ಯಾಪ್ತಿಗೆ ಅಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸೀಹ್ ಅವರಿದ್ದ ಪೀಠ ಹೇಳಿದೆ.

ಹೋಗಿ ದೇವರಲ್ಲೇ ಏನಾದರೂ ಬೇಡಿಕೊಳ್ಳಿ. ನೀವು ವಿಷ್ಣುವಿನ ಕಟ್ಟಾ ಭಕ್ತ ಎಂದು ಹೇಳುತ್ತೀರಿ. ಆದ್ದರಿಂದ ಈಗಲೇ ಹೋಗಿ ಪ್ರಾರ್ಥಿಸಿ. ಇದು ಪುರಾತತ್ತ್ವ ಇಲಾಖೆಗೆ ಸೇರಿದ ಸ್ಥಳವಾಗಿದ್ದು, ಎಎಸ್‌ಐ ಅನುಮತಿ ನೀಡಬೇಕಾಗಿದೆ. ಕ್ಷಮಿಸಿ, " ಎಂದು ಸಿಜೆಐ ಗವಾಯಿ ಅರ್ಜಿದಾರರಿಗೆ ತಿಳಿಸಿದರು.

ಮೊಘಲ್ ಆಕ್ರಮಣದ ಸಮಯದಲ್ಲಿ ವಿಗ್ರಹವು ವಿರೂಪಗೊಂಡಿದ್ದು, ಅದನ್ನು ಪುನಃಸ್ಥಾಪಿಸಲು ಸರ್ಕಾರಕ್ಕೆ ಪದೇ ಪದೇ ಮನವಿ ಮಾಡಿದರೂ ಅದು ಅದೇ ಸ್ಥಿತಿಯಲ್ಲಿದೆ ಎಂದು ರಾಕೇಶ್ ದಲಾಲ್ ಎಂಬುವವರು ದೂರಿದ್ದರು.

ಇದು ಮೂಲತಃ ಚಂದ್ರವಂಶದ ದೊರೆಗಳು ನಿರ್ಮಿಸಿದ್ದ ಖಜುರಾಹೊ ದೇವಾಲಯಗಳ ಇತಿಹಾಸವನ್ನು ವಿವರಿಸುತ್ತದೆ. ವಸಾಹತುಶಾಹಿ ಆಡಳಿತದ ನಿರ್ಲಕ್ಷ್ಯ ಮತ್ತು ಸ್ವಾತಂತ್ರ್ಯಾನಂತರ ಭಾರತದ ಆಡಳಿತದ ನಿಷ್ಕ್ರಿಯತೆಯಿಂದಾಗಿ ಸ್ವಾತಂತ್ರ್ಯ ದೊರೆತ 77 ವರ್ಷಗಳ ನಂತರವೂ ವಿಗ್ರಹ  ದುರಸ್ತಿಗೊಂಡಿಲ್ಲ ಎಂದು ಆರೋಪಿಸಲಾಗಿತ್ತು.

ವಿಗ್ರಹವನ್ನು ಪುನಃಸ್ಥಾಪಿಸದಿರುವುದು ಭಕ್ತರ ಪೂಜೆಯ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ. ದೇವಾಲಯಕ್ಕೆ ಸಂಬಂಧಿಸಿದಂತೆ ನಡೆದ ಪ್ರತಿಭಟನೆಗಳು, ಜ್ಞಾಪಕ ಪತ್ರಗಳು ಮತ್ತು ಅಭಿಯಾನಗಳಿಗೆ ಯಾವುದೇ ಉತ್ತರ ದೊರೆತಿಲ್ಲ ಎಂದು ಅರ್ಜಿ ವಿವರಿಸಿದೆ.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ಸಂಜಯ್ ಎಂ ನುಲಿ ವಾದ ಮಂಡಿಸಿದರು.