Vachanananda Swamiji 
ಸುದ್ದಿಗಳು

[ಹೆಸರು ಮಾತ್ರ ವಚನಾನಂದ] ನಿರೀಕ್ಷಣಾ ಜಾಮೀನು ರದ್ದುಪಡಿಸಿದ ಹೈಕೋರ್ಟ್‌; ರೆಗ್ಯುಲರ್‌ ಜಾಮೀನು ಕೋರಲು ನಿರ್ದೇಶನ

“ರೆಗ್ಯುಲರ್‌ ಜಾಮೀನು ಪಡೆಯುವವರೆಗೆ ಯಾವುದೇ ವಚನ ಹೇಳಬೇಡಿ. ಹೆಸರು ಮಾತ್ರ ವಚನಾನಂದ, ಸುಮ್ಮನಿರಿ. ಸಾಕ್ಷಿಗಳಿಗೇಕೆ ಬೆದರಿಕೆ ಹಾಕಿದ್ದೀರಿ? ಈ ನಿರೀಕ್ಷಣಾ ಜಾಮೀನು ಆದೇಶವನ್ನು ಹೊರಡಿಸುವಂತೆಯೇ ಇಲ್ಲ” ಎಂದ ನ್ಯಾಯಾಲಯ.

Bar & Bench

ಪೋಕ್ಸೊ ಪ್ರಕರಣದಲ್ಲಿ ಆರೋಪಿಯಾಗಿರುವ ದಾವಣಗೆರೆಯ ಹರಿಹರದ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿಗೆ ವಿಚಾರಣಾಧೀನ ನ್ಯಾಯಾಲಯವು ಎಫ್‌ಐಆರ್‌ ದಾಖಲಾಗುವುದಕ್ಕೂ ಮುನ್ನ ಮಂಜೂರು ಮಾಡಿದ್ದ ನಿರೀಕ್ಷಣಾ ಜಾಮೀನನ್ನು ಕರ್ನಾಟಕ ಹೈಕೋರ್ಟ್‌ ಗುರುವಾರ ರದ್ದುಪಡಿಸಿದೆ. ಆದರೆ, ಮೂರು ವಾರ ನಿರೀಕ್ಷಣಾ ಜಾಮೀನು ಮುಂದುವರಿಸಿದ್ದು, ಅದರೊಳಗೆ ಸಕ್ಷಮ ನ್ಯಾಯಾಲಯದಲ್ಲಿ ಜಾಮೀನು ಪಡೆಯಲು ಆದೇಶಿಸಿದೆ.

ಆರೋಪಿಯಾಗಿರುವ ಸ್ವಾಮೀಜಿಗೆ ಪ್ರಕರಣ ದಾಖಲಾಗುವುದಕ್ಕೂ ಒಂದು ವಾರ ಮುಂಚಿತವಾಗಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವ ದಾವಣಗೆರೆಯ ವಿಚಾರಣಾಧೀನ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು ಎಂದು ಅಪ್ರಾಪ್ತ ಬಾಲಕನ ಸಂಬಂಧಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice M Nagaprasanna

“ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವ ರೀತಿಯು ಈ ಘನ ನ್ಯಾಯಾಲಯಕ್ಕೆ ಆಘಾತ ಉಂಟು ಮಾಡಿದೆ. ಪೋಕ್ಸೊ ಕಾಯಿದೆ ಸೆಕ್ಷನ್‌ಗಳಾದ 4, 6, 8, 10 ಮತ್ತು 12ರ ಅಡಿ ದೂರು ದಾಖಲಾಗುವ ಒಂದು ವಾರಕ್ಕೂ ಮುಂಚೆಯೇ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವುದು ಅದನ್ನು ರದ್ದುಪಡಿಸುವುದಕ್ಕೆ ಕಾರಣವೇ ವಿನಾ ಆರೋಪ ಪಟ್ಟಿ ಸಲ್ಲಿಸಿರುವುದಕ್ಕೆ ಅಲ್ಲ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ವಚನಾನಂದ ಸ್ವಾಮೀಜಿ ರೆಗ್ಯುಲರ್‌ ಜಾಮೀನು ಕೋರಿ ಸಲ್ಲಿಸುವ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ನಿರ್ದೇಶನದ ಅನ್ವಯ ತುರ್ತಾಗಿ ನಿರ್ಧರಿಸಬೇಕು ಎಂದು ಸತ್ರ ನ್ಯಾಯಾಲಯಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ. ನಿರೀಕ್ಷಣಾ ಜಾಮೀನು ಮಂಜೂರು ಮಾಡುವುದಕ್ಕೂ ಮುನ್ನ ಸಂತ್ರಸ್ತರನ್ನು ಆಲಿಸಿಲ್ಲ ಎಂಬುದೂ ಜಾಮೀನು ರದ್ದತಿಗೆ ಮತ್ತೊಂದು ಕಾರಣವಾಗಿದೆ ಎಂದು ಹೈಕೋರ್ಟ್‌ ಹೇಳಿದೆ.

ವಿಚಾರಣೆಯ ಒಂದು ಹಂತದಲ್ಲಿ ಪೀಠವು “ರೆಗ್ಯುಲರ್‌ ಜಾಮೀನು ಪಡೆಯುವವರೆಗೆ ಯಾವುದೇ ವಚನ ಹೇಳಬೇಡಿ. ಹೆಸರು ಮಾತ್ರ ವಚನಾನಂದ, ಸುಮ್ಮನಿರಿ. ಸಾಕ್ಷಿಗಳಿಗೇಕೆ ಬೆದರಿಕೆ ಹಾಕಿದ್ದೀರಿ? ಈ ನಿರೀಕ್ಷಣಾ ಜಾಮೀನು ಆದೇಶವನ್ನು ಹೊರಡಿಸುವಂತೆಯೇ ಇಲ್ಲ” ಎಂದು ಕಟುವಾಗಿ ನುಡಿಯಿತು.

ಕಳೆದ ವಿಚಾರಣೆಯಲ್ಲಿ ಅಪ್ರಾಪ್ತ ಬಾಲಕಿಯರು ಸುರಕ್ಷಿತವಾಗಿಲ್ಲ ಎಂದುಕೊಂಡರೆ, ಅಪ್ರಾಪ್ತ ಬಾಲಕರೂ ಸುರಕ್ಷಿತವಾಗಿಲ್ಲವೇ ಎಂದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.