ಸುದ್ದಿಗಳು

ಶಿಸ್ತು ಕ್ರಮ ಕೈಗೊಳ್ಳುವ ಶಿಕ್ಷಕರ ವಿರುದ್ಧ ಪ್ರಕರಣ ದಾಖಲಿಸುವ ಮುನ್ನ ಪ್ರಾಥಮಿಕ ತನಿಖೆ ಕಡ್ಡಾಯ: ಕೇರಳ ಹೈಕೋರ್ಟ್

ಶಿಕ್ಷಕರು ಶಾಲೆಗಳಿಗೆ ಬೆತ್ತ ಕೊಂಡೊಯ್ಯಲು ಅವಕಾಶ ನೀಡಬೇಕು, ಅದು ವಿದ್ಯಾರ್ಥಿಗಳ ಮೇಲೆ ಪ್ರಯೋಗಿಸಲು ಮಾತ್ರವಲ್ಲ, ಬದಲಿಗೆ ದುರುಪಯೋಗ ತಡೆಯುವ ಮಾನಸಿಕ ಪರಿಣಾಮ ಸೃಷ್ಟಿಸಲು ಎಂದು ನ್ಯಾಯಾಲಯ ಹೇಳಿದೆ.

Bar & Bench

ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳನ್ನು ಶಿಸ್ತಾಗಿ ಇಡಲು ತೆಗೆದುಕೊಳ್ಳುವ ಯಾವುದೇ ಕ್ರಮಕ್ಕಾಗಿ ಶಿಕ್ಷಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಮೊದಲು ಪ್ರಾಥಮಿಕ ವಿಚಾರಣೆ ನಡೆಸಬೇಕು ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ [ಸಿಬಿನ್ ಎಸ್‌ವಿ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಶಿಕ್ಷಕರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲು ಇದು ಅಗತ್ಯ ಎಂದು ನ್ಯಾಯಮೂರ್ತಿ ಪಿ.ವಿ. ಕುಂಞಿಕೃಷ್ಣನ್ ಅಭಿಪ್ರಾಯಪಟ್ಟರು. " ಶಿಕ್ಷಣ ಸಂಸ್ಥೆಯೊಳಗೆ ಅಪರಾಧ ನಡೆದಿದೆ ಎಂದು ಆರೋಪಿಸಿ ಪೋಷಕರು ಅಥವಾ ವಿದ್ಯಾರ್ಥಿಗಳು ಶಿಕ್ಷಕರ ವಿರುದ್ಧ ದೂರು ದಾಖಲಿಸಿದರೆ, ಆ ಪ್ರಕರಣ ಮುಂದುವರಿಸಲು ಪ್ರಾಥಮಿಕ ತನಿಖೆ ನಡೆಸಬೇಕು ಎಂದು ನಾನು ಭಾವಿಸುತ್ತೇನೆ " ಎಂಬುದಾಗಿ ಅವರು ಹೇಳಿದರು.

ಅಂತಹ ಪ್ರಕರಣಗಳಲ್ಲಿ, ಪ್ರಾಥಮಿಕ ವಿಚಾರಣೆ ನಡೆಯುತ್ತಿರುವಾಗ ಆರೋಪಿ ಸ್ಥಾನದಲ್ಲಿರುವ ಶಿಕ್ಷಕರನ್ನು ಬಂಧಿಸಬಾರದು ಎಂದಿರುವ ನ್ಯಾಯಾಲಯ "ಈ ಆದೇಶ ತಲುಪಿದ ಒಂದು ತಿಂಗಳೊಳಗೆ ರಾಜ್ಯ ಪೊಲೀಸ್ ಮುಖ್ಯಸ್ಥರು ಈ ಸಂಬಂಧ ಅಗತ್ಯ ಸುತ್ತೋಲೆ ಇಲ್ಲವೇ ಆದೇಶ ಹೊರಡಿಸಬೇಕು" ಎಂಬುದಾಗಿ ಆದೇಶಿಸಿದೆ.

ವಿದ್ಯಾರ್ಥಿಗಳು ಶಾಲೆಗೆ ಶಸ್ತ್ರಾಸ್ತ್ರಗಳೊಂದಿಗೆ ಬರುವುದು, ಮಾದಕ ದ್ರವ್ಯಗಳನ್ನು ಬಳಸುವುದು, ಶಿಕ್ಷಕರನ್ನು ಬೆದರಿಸುವುದು ಮತ್ತು ಅವರ ಮೇಲೆ ದಾಳಿ ಮಾಡುವುದು ವರದಿಯಾಗುತ್ತಿರುವ ಇಂದಿನ ದಿನಗಳಲ್ಲಿ ಈ ನಿರ್ದೇಶನ ಅಗತ್ಯ ಎಂದು ಅದು ತಿಳಿಸಿದೆ.

ಶಿಕ್ಷಕರಿಗೆ ನೀಡಬೇಕಾದ ಸಾಂಪ್ರದಾಯಿಕ ಗೌರವ ಮರಳಿ ಜಾರಿಗೆ ಬರಬೇಕು ಮತ್ತು ವಿದ್ಯಾರ್ಥಿ ಸಮುದಾಯದ ಹಿತದೃಷ್ಟಿಯಿಂದ ಶಿಸ್ತನ್ನು ಜಾರಿಗೊಳಿಸುವಲ್ಲಿ ಶಿಕ್ಷಕರಿಗೆ ಸ್ವಲ್ಪ ಅವಕಾಶ ನೀಡಬೇಕು ಎಂದು ನ್ಯಾಯಾಲಯ ಒತ್ತಿ ಹೇಳಿದೆ.

ಶಿಕ್ಷಕರು ಶಾಲೆಗಳಲ್ಲಿ ತಮ್ಮೊಂದಿಗೆ ಬೆತ್ತಗಳನ್ನು ಕೊಂಡೊಯ್ಯಲು ಸಹ ಅವಕಾಶ ನೀಡಬೇಕು. ಇದು ವಿದ್ಯಾರ್ಥಿಗಳ ಮೇಲೆ ಬಳಸಲು ಮಾತ್ರವಲ್ಲ, ಅವರು ಅನುಚಿತವಾಗಿ ವರ್ತಿಸದಂತೆ ಮಾಡುವ ಮಾನಸಿಕ ಪರಿಣಾಮವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಕ್ರಿಮಿನಲ್ ಪ್ರಕರಣ ದಾಖಲಾಗುತ್ತದೆ ಎಂಬ ಬೆದರಿಕೆ ಇದ್ದಾಗ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಮಾಡಲು ಆಗುವುದಿಲ್ಲ.
ಕೇರಳ ಹೈಕೋರ್ಟ್

ಶಿಕ್ಷಕರ ವಿರುದ್ಧ ಕ್ರಿಮಿನಲ್ ದೂರುಗಳು ದಾಖಲಾಗುವ ಪ್ರವೃತ್ತಿ ಹೆಚ್ಚುತ್ತಿದ್ದು ವಿಚಾರಣೆಯ ಭಯದಿಂದಾಗಿ ಅನೇಕ ಶಿಕ್ಷಕರು ಶಿಸ್ತು ಕ್ರಮ ಕೈಗೊಳ್ಳಲು ಹಿಂಜರಿಯುತ್ತಾರೆ ಎಂದು ಅವರು ಹೇಳಿದರು.

ಕೆಲವು ಶಿಕ್ಷಕರು ಅತಿರೇಕದ ಶಿಸ್ತುಕ್ರಮ ಕೈಗೊಳ್ಳಬಹುದು ಎಂಬುದನ್ನು  ನ್ಯಾಯಮೂರ್ತಿಗಳು ಒಪ್ಪಿದರೂ ಅಂತಹ ಪ್ರಕರಣಕ್ಕಾಗಿ ಇಡೀ ಶಿಕ್ಷಕ ಸಮುದಾಯವನ್ನೇ ದೂಷಿಸಬಾರದು ಎಂದರು.

ಕೆಲವು ಪೋಷಕರು ಶಿಕ್ಷಕರು ತಮ್ಮ ಮಗುವನ್ನು ಮುಷ್ಟಿಯಲ್ಲಿ ಹಿಡಿದಿದ್ದಾರೆ, ದಿಟ್ಟಿಸಿ ನೋಡಿದ್ದಾರೆ ಅಥವಾ ಹೊಡೆದಿದ್ದಾರೆ ಎಂಬಂತಹ ಸಣ್ಣಪುಟ್ಟ ಘಟನೆಗಳಿಗೂ ದೂರು ದಾಖಲಿಸುತ್ತಾರೆ. ಅಂತಹ ಕಳವಳ ನಿಭಾಯಿಸಲು, ಶಿಕ್ಷಕರ ವಿರುದ್ಧ ಕ್ರಿಮಿನಲ್ ದೂರುಗಳು ದಾಖಲಾಗುವಾಗ ಪ್ರಾಥಮಿಕ ತನಿಖೆ ಅತ್ಯಗತ್ಯ ಎಂದು ಪೀಠ ಹೇಳಿದೆ.

ಶಿಕ್ಷಕರು ಸಮಾಜದ ಅವ್ಯಕ್ತ ನಾಯಕರು ಎಂದ ನ್ಯಾಯಾಲಯ ಆರನೇ ತರಗತಿಯ ವಿದ್ಯಾರ್ಥಿಯ ಮೇಲೆ ಕೋಲಿನಿಂದ ಹಲ್ಲೆ ನಡೆಸಿದ ಆರೋಪ ಹೊತ್ತ ಶಿಕ್ಷಕನಿಗೆ ತನಿಖೆಗೆ ಸಹಕರಿಸಬೇಕು ಎಂಬ ಷರತ್ತು ವಿಧಿಸಿ ಜಾಮೀನು ನೀಡಿತು.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Sibin_SV_v_State_of_Kerala.pdf
Preview