President Droupadi Murmu 
ಸುದ್ದಿಗಳು

ವಕ್ಫ್ ಮಸೂದೆಗೆ ರಾಷ್ಟ್ರಪತಿ ಅಂಕಿತ

ವಕ್ಫ್ ಎನ್ನುವುದು ಇಸ್ಲಾಮ್ ಧಾರ್ಮಿಕ ಕಾನೂನಿನ ಅಡಿ ಕೇವಲ ದಾನ, ದತ್ತಿಯ ಅಸ್ತಿಗಳಾಗಿವೆ.

Bar & Bench

ವಕ್ಫ್ (ತಿದ್ದುಪಡಿ) ಮಸೂದೆ- 2025 ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಒಪ್ಪಿಗೆ ನೀಡಿದ್ದಾರೆ.

ಲೋಕಸಭೆ ಮತ್ತು ರಾಜ್ಯಸಭೆ ಕ್ರಮವಾಗಿ ಏಪ್ರಿಲ್ 3 ಮತ್ತು 4ರಂದು  ಮಸೂದೆ ಅಂಗೀಕರಿಸಿದ್ದವು.

ವಕ್ಫ್ ಆಸ್ತಿಗಳ ನಿಯಂತ್ರಣವನ್ನು ಪರಿಹರಿಸಲು 1995ರ ವಕ್ಫ್ ಕಾಯಿದೆಗೆ ತಿದ್ದುಪಡಿ ಮಾಡಲು ಪ್ರಸ್ತಾಪಿಸುವ ಮಸೂದೆಯನ್ನು ಮೊದಲು ಆಗಸ್ಟ್ 2024 ರಲ್ಲಿ ಲೋಕಸಭೆಯಲ್ಲಿ ಪರಿಚಯಿಸಲಾಯಿತು. ನಂತರ ಅದನ್ನು ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ಕಳುಹಿಸಲಾಯಿತು. ಇದು ಮಸೂದೆಗೆ ಕೆಲವು ತಿದ್ದುಪಡಿಗಳಿಗೆ ಸಲಹೆಗಳನ್ನು ಸ್ವೀಕರಿಸಿತು.

ವಕ್ಫ್‌ ಎನ್ನುವುದು ಇಸ್ಲಾಮ್ ಧಾರ್ಮಿಕ ಕಾನೂನಿನ ಅಡಿ ಕೇವಲ ದಾನ, ದತ್ತಿಯ ಅಸ್ತಿಗಳಾಗಿವೆ. ಈ ಆಸ್ತಿಗಳನ್ನು ಮಸೀದಿ, ಸ್ಮಶಾನದಂತಹ ಸಾಮುದಾಯಿಕ ನಿರ್ವಹಣೆಗೆ ಹಾಗೂ ಶಿಕ್ಷಣ ಸಂಸ್ಥೆಗಳು ಮತ್ತು ವೈದ್ಯಕೀಯ ಚಟುವಟಿಕೆಗಳಿಗೆ, ಬಡವರು ಮತ್ತು ವಿಕಲಚೇತನರ ಕಲ್ಯಾಣಕ್ಕೆ ಬಳಕೆ ಮಾಡಬಹುದಾಗಿರುತ್ತದೆ. ಇದರ ಹೊರತಾಗಿ ಆಸ್ತಿಗಳನ್ನು ಮತ್ತಾವುದೇ ಉದ್ದೇಶಕ್ಕೆ ಬಳಕೆ ಮಾಡುವುದು ಮಾರಾಟ ಮಾಡುವುದನ್ನು ಇಸ್ಲಾಮ್‌ ಧಾರ್ಮಿಕ ಕಾನೂನು ನಿಷೇಧಿಸುತ್ತದೆ. ಭಾರತದಲ್ಲಿ ವಕ್ಫ್ ಆಸ್ತಿಗಳ (ಧಾರ್ಮಿಕ ದತ್ತಿಗಳು) ಆಡಳಿತವನ್ನು ನಿಯಂತ್ರಿಸಲು ವಕ್ಫ್ ಕಾಯಿದೆ-1995ನ್ನು ಜಾರಿಗೆ ತರಲಾಯಿತು.

ಇದು ವಕ್ಫ್ ಮಂಡಳಿ, ರಾಜ್ಯ ವಕ್ಫ್ ಮಂಡಳಿಗಳು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಮುತಾವಲಿಗಳ ಅಧಿಕಾರ ಮತ್ತು ಕಾರ್ಯಗಳನ್ನು ಹೇಳುತ್ತದೆ.  ಸಿವಿಲ್ ನ್ಯಾಯಾಲಯದ ಬದಲಾಗಿ ಕಾಯಿದೆ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ವಕ್ಫ್ ನ್ಯಾಯಮಂಡಳಿಗಳ ಅಧಿಕಾರ ಮತ್ತು ನಿರ್ಬಂಧಗಳನ್ನು ಸಹ ವಿವರಿಸುತ್ತದೆ.

ವಕ್ಫ್‌ ತಿದ್ದುಪಡಿ ಮಸೂದೆಯ ಪ್ರಮುಖ ಅಂಶಗಳು

  • ವಕ್ಫ್ ಮಂಡಳಿಗಳು ಮತ್ತು ಆಸ್ತಿಗಳ ನಿರ್ವಹಣೆ ಮತ್ತು ದಕ್ಷತೆಯನ್ನು ಸುಧಾರಿಸುವ ವಿಶಾಲ ಉದ್ದೇಶದಿಂದ ಕಾಯಿದೆಯನ್ನು ಏಕೀಕೃತ ವಕ್ಫ್ ನಿರ್ವಹಣೆ, ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ ಕಾಯಿದೆ, 1995 ಎಂದು ಮಸೂದೆ ಮರುನಾಮಕರಣ ಮಾಡುತ್ತದೆ.

  • ಘೋಷಣೆ, ದೀರ್ಘಾವಧಿಯ ಬಳಕೆ ಅಥವಾ ದತ್ತಿ ಮೂಲಕ ವಕ್ಫ್ ರಚನೆಗೆ ಕಾಯಿದೆ ಅವಕಾಶ ನೀಡಿದ್ದರೂ, ಕನಿಷ್ಠ ಐದು ವರ್ಷಗಳ ಕಾಲ ಇಸ್ಲಾಂ ಧರ್ಮವನ್ನು ಆಚರಿಸುವ ವ್ಯಕ್ತಿ ಮಾತ್ರವೇ ವಕ್ಫ್ ಘೋಷಿಸಬಹುದು ಎಂದು ಮಸೂದೆ ಹೇಳುತ್ತದೆ.

  • ವಕ್ಫ್‌ ಎಂದು ಘೋಷಿಸುವ ಆಸ್ತಿ ಆ ವ್ಯಕ್ತಿಯದ್ದಾಗಿರಬೇಕು ಎಂದು ಅದು ಸ್ಪಷ್ಟಪಡಿಸುತ್ತದೆ. ಧಾರ್ಮಿಕ ಉದ್ದೇಶಗಳಿಗಾಗಿ ದೀರ್ಘಕಾಲದ ಬಳಕೆಯ ಆಧಾರದಲ್ಲಿ ಯಾವುದೇ ಆಸ್ತಿಗಳನ್ನು ವಕ್ಫ್ ಎಂದು ಪರಿಗಣಿಸುವುದನ್ನು ಇದು ತೆಗೆದುಹಾಕುತ್ತದೆ. ಮಹಿಳಾ ಉತ್ತರಾಧಿಕಾರಿಗಳು ಸೇರಿದಂತೆ ದಾನಿಗಳ ಉತ್ತರಾಧಿಕಾರಿಗೆ ವಕ್ಫ್-ಅಲಾಲ್-ಔಲಾದ್ ಆನುವಂಶಿಕ ಹಕ್ಕುಗಳನ್ನು ನಿರಾಕರಿಸಬಾರದು ಎಂದು ಅದು ವಿವರಿಸುತ್ತದೆ.

  • ಆಸ್ತಿಯು ವಕ್ಫ್ ಆಗಿದೆಯೇ ಎಂದು ಪರಿಶೀಲಿಸಲು ಮತ್ತು ನಿರ್ಧರಿಸಲು ಕಾಯಿದೆಯು ವಕ್ಫ್ ಮಂಡಳಿಗೆ ನೀಡಿರುವ ಅಧಿಕಾರವನ್ನು ಮಸೂದೆ ತೆಗೆದುಹಾಕುತ್ತದೆ.

  • ಎಲ್ಲಾ ಮಂಡಳಿ ಸದಸ್ಯರು ಮುಸ್ಲಿಮರಾಗಿರಬೇಕು ಎಂದು ಈ ಹಿಂದಿನ ಕಾಯಿದೆ ಹೇಳಿದ್ದರೆ, ಪ್ರಸ್ತುತ ಮೂಸದೆಯು ಇಬ್ಬರು ಸದಸ್ಯರು ಮುಸ್ಲಿಮೇತರರಾಗಿರಬೇಕು ಎಂದು ಹೇಳುತ್ತದೆ. ಸಂಸತ್ತಿನ ಸದಸ್ಯರು, ಮಾಜಿ ನ್ಯಾಯಾಧೀಶರು ಮತ್ತು ಕಾಯಿದೆಯ ಪ್ರಕಾರ ಮಂಡಳಿಗೆ ನೇಮಕಗೊಂಡ ಗಣ್ಯ ವ್ಯಕ್ತಿಗಳು ಮುಸ್ಲಿಮರಾಗಿರಬೇಕಾಗಿಲ್ಲ. ಮುಸ್ಲಿಂ ಸಂಘಟನೆಗಳ ಪ್ರತಿನಿಧಿಗಳು, ಇಸ್ಲಾಮಿಕ್ ಕಾನೂನಿನಲ್ಲಿ ವಿದ್ವಾಂಸರು ಮತ್ತು ವಕ್ಫ್ ಮಂಡಳಿಗಳ ಅಧ್ಯಕ್ಷರು ಮುಸ್ಲಿಮರಾಗಿರಬೇಕು. ಮುಸ್ಲಿಂ ಸದಸ್ಯರಲ್ಲಿ ಇಬ್ಬರು ಮಹಿಳೆಯರಿರಬೇಕು ಎಂಬ ಕಾಯಿದೆಯ ಅಂಶ ಮಸೂದೆಯಲ್ಲೂ ಮುಂದುವರೆದಿದೆ.

  • ನೋಂದಣಿ, ವಕ್ಫ್ ಖಾತೆಗಳ ಪ್ರಕಟಣೆ ಮತ್ತು ವಕ್ಫ್ ಮಂಡಳಿಗಳ ಪ್ರಕ್ರಿಯೆಗಳ ಪ್ರಕಟಣೆಗೆ ಸಂಬಂಧಿಸಿದಂತೆ ನಿಯಮ ರಚಿಸಲು ಕೇಂದ್ರ ಸರ್ಕಾರಕ್ಕೆ ಮಸೂದೆ ಅಧಿಕಾರ ನೀಡುತ್ತದೆ. ಕಾಯಿದೆಯಡಿಯಲ್ಲಿ, ರಾಜ್ಯ ಸರ್ಕಾರಗಳು ಯಾವುದೇ ಹಂತದಲ್ಲಿ ವಕ್ಫ್‌ ಖಾತೆಗಳ ಲೆಕ್ಕ ಪರಿಶೋಧನೆ ನಡೆಸಬಹುದು ಎಂದು ಹೇಳುತ್ತದೆ. ಮಸೂದೆಯು ಕೇಂದ್ರ ಸರ್ಕಾರಕ್ಕೆ ಸಿಎಜಿ ಅಥವಾ ಗೊತ್ತುಪಡಿಸಿದ ಅಧಿಕಾರಿಯಿಂದ ಲೆಕ್ಕಪರಿಶೋಧನೆ ಮಾಡಲು ಅಧಿಕಾರ ನೀಡುತ್ತದೆ.

  • ಶಿಯಾ ವಕ್ಫ್ ರಾಜ್ಯದಲ್ಲಿನ ಎಲ್ಲಾ ವಕ್ಫ್ ಆಸ್ತಿಗಳು ಅಥವಾ ವಕ್ಫ್ ಆದಾಯದ 15% ಕ್ಕಿಂತ ಹೆಚ್ಚು ಇದ್ದರೆ ಸುನ್ನಿ ಮತ್ತು ಶಿಯಾ ಪಂಗಡಗಳಿಗೆ ಪ್ರತ್ಯೇಕ ವಕ್ಫ್ ಮಂಡಳಿಗಳನ್ನು ಸ್ಥಾಪಿಸಲು  ಕಾಯಿದೆ ಅವಕಾಶ ನೀಡಿತ್ತು. ಇದೀಗ ತಿದ್ದುಪಡಿ ಮಸೂದೆ ಅಘಾಖಾನಿ ಮತ್ತು ಬೊಹ್ರಾ ಪಂಗಡಗಳಿಗೆ ಕೂಡ ಪ್ರತ್ಯೇಕ ವಕ್ಫ್ ಮಂಡಳಿ ರಚಿಸಿಕೊಳ್ಳಲು ಅನುಮತಿ ನೀಡಿದೆ.

  • ಕಾಯಿದೆ ಪ್ರಕಾರ ವಕ್ಫ್‌ ನ್ಯಾಯಮಂಡಳಿಯ ನಿರ್ಧಾರಗಳೇ ಅಂತಿಮವಾಗಿತ್ತು. ನ್ಯಾಯಾಲಯದಲ್ಲಿ ಅದರ ನಿರ್ಧಾರ ಪ್ರಶ್ನಿಸುವಂತಿರಲಿಲ್ಲ. ಮಂಡನೆಯಾಗಿರುವ ಮಸೂದೆಯ ಪ್ರಕಾರ ವಕ್ಫ್ ನ್ಯಾಯಮಂಡಳಿಗಳ ಆದೇಶಗಳನ್ನು 90 ದಿನಗಳಲ್ಲಿ ಹೈಕೋರ್ಟ್‌ಗಳಲ್ಲಿ ಪ್ರಶ್ನಿಸಬಹುದಾಗಿದೆ.