ಸುಪ್ರೀಂ ಕೋರ್ಟ್ ನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ  
ಸುದ್ದಿಗಳು

ಸಂವಿಧಾನ ದಿನ: ಸುಪ್ರೀಂ ಕೋರ್ಟ್‌ನಲ್ಲಿ ಅಂಬೇಡ್ಕರ್ ಪ್ರತಿಮೆ ಅನಾವರಣಗೊಳಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಅಂಬೇಡ್ಕರ್‌ವಾದಿ ಆಂದೋಲನದೊಂದಿಗೆ ಗುರುತಿಸಿಕೊಂಡ ವಕೀಲರ ಗುಂಪು ಮಾಡಿದ ನಿರಂತರ ವಿನಂತಿಯ ಪರಿಣಾಮವಾಗಿ ಪ್ರತಿಮೆ ಸ್ಥಾಪಿಸುವ ನಿರ್ಧಾರ ಕೈಗೊಳ್ಳಲಾಗಿತ್ತು.

Bar & Bench

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂವಿಧಾನ ದಿನವಾದ ಭಾನುವಾರ ದೆಹಲಿಯ ಸುಪ್ರೀಂ ಕೋರ್ಟ್‌ನಲ್ಲಿ ಡಾ.ಬಿ ಆರ್‌ ಅಂಬೇಡ್ಕರ್ ಪ್ರತಿಮೆ ಅನಾವರಣಗೊಳಿಸಿದರು.

ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಮತ್ತಿತರ ಗಣ್ಯರ ಸಮ್ಮುಖದಲ್ಲಿ ಸಂವಿಧಾನ ದಿನಾಚರಣೆ ವೇಳೆ ಪ್ರತಿಮೆ ಅನಾವರಣಗೊಳಿಸಲಾಯಿತು.

ಅಂಬೇಡ್ಕರ್‌ವಾದಿ ಆಂದೋಲನದೊಂದಿಗೆ ಗುರುತಿಸಿಕೊಂಡ ವಕೀಲರ ಗುಂಪು ಮಾಡಿದ ನಿರಂತರ ವಿನಂತಿಯ ಪರಿಣಾಮವಾಗಿ ಪ್ರತಿಮೆ ಸ್ಥಾಪಿಸುವ ನಿರ್ಧಾರ ಕೈಗೊಳ್ಳಲಾಗಿತ್ತು.

ಸರ್ವೋಚ್ಚ ನ್ಯಾಯಾಲಯದ ಹುಲ್ಲುಹಾಸಿನ ಅಂಗಳದಲ್ಲಿ ಪ್ರತಿಮೆ ಸ್ಥಾಪನೆ ಸಂಬಂಧ ಈ ವಕೀಲ ಸಮೂಹ ಕಳೆದ ವರ್ಷ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್‌ ಅವರಿಗೆ ಪತ್ರ ಬರೆದಿತ್ತು. ಸುಪ್ರೀಂಕೋರ್ಟ್‌ ವಾದನಿರತ ವಕೀಲರ ಸಂಘ (ಎಸ್‌ಸಿಎಸಿಎ) ಕೂಡ ಪ್ರತಿಮೆ ಸ್ಥಾಪನೆಗೆ ವಿನಂತಿಸಿತ್ತು.

ತಮಿಳುನಾಡಿನ ನ್ಯಾಯಾಲಯಗಳು ಮತ್ತು ನ್ಯಾಯಾಲಯದ ಆವರಣದಲ್ಲಿ ಮಹಾತ್ಮ ಗಾಂಧಿ ಮತ್ತು ಸಂತ ತಿರುವಳ್ಳುವರ್ ಹೊರತುಪಡಿಸಿ ಯಾವುದೇ ನಾಯಕರ ಛಾಯಾಚಿತ್ರ, ಪ್ರತಿಮೆ ಅಥವಾ ಭಾವಚಿತ್ರ ಅಳವಡಿಸುವಂತಿಲ್ಲ ಎಂದು ತಾನು ಈ ಹಿಂದೆ ನೀಡಿದ್ದ ತೀರ್ಪನ್ನು ಮದ್ರಾಸ್‌ ಹೈಕೋರ್ಟ್‌ ಪೂರ್ಣ ನ್ಯಾಯಾಲಯ ಏಪ್ರಿಲ್ 11ರಂದು ಪುನರುಚ್ಚರಿಸಿತ್ತು.

ಈ ಹಿನ್ನೆಲೆಯಲ್ಲಿ ರಾಜ್ಯದ ನ್ಯಾಯಾಲಯಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಅಳವಡಿಸುವಂತೆ ವಿವಿಧ ವಕೀಲರ ಸಂಘಗಳು ಮಾಡಿದ್ದ ಮನವಿಯನ್ನು ಅದು ತಿರಸ್ಕರಿಸಿತ್ತು.


ಆದರೆ, ಅಂಬೇಡ್ಕರ್ ಅವರ ಪ್ರತಿಮೆ ಮತ್ತು ಭಾವಚಿತ್ರಗಳಿಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳಲಾಗುವುದು ಎಂದು ಜುಲೈ 25ರಂದು ರಾಜ್ಯ ಸರ್ಕಾರ ತಿಳಿಸಿತ್ತು.