ವೈದ್ಯರ ನಿರ್ಲಕ್ಷ್ಯಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆ ರದ್ದುಗೊಳಿಸಲು ಗುರುವಾರ ನಿರಾಕರಿಸಿರುವ ಅಲಾಹಾಬಾದ್ ಹೈಕೋರ್ಟ್ ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ಎಟಿಎಂ ಯಂತ್ರಗಳಂತೆ ಬಳಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ [ಡಾ. ಅಶೋಕ್ ಕುಮಾರ್ ರಾಯ್ ಮತ್ತು ಉತ್ತರ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ]
ಅರವಳಿಕೆ ತಜ್ಞರು ಬರುವುದು ತಡವಾದರೂ ಗರ್ಭಿಣಿಯ ಶಸ್ತ್ರಚಿಕಿತ್ಸೆಗೆ ನರ್ಸಿಂಗ್ ಹೋಂನ ಮಾಲೀಕರಾದ ಡಾ. ಅಶೋಕ್ ಕುಮಾರ್ ರಾಯ್ ಮುಂದಾದ ಪರಿಣಾಮ ಭ್ರೂಣ ಸಾವನ್ನಪ್ಪಿತ್ತು ಎಂದು ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಅವರು ತಿಳಿಸಿದರು. ಘಟನೆ 2007ರಲ್ಲಿ ನಡೆದಿತ್ತು.
ಆಸ್ಪತ್ರೆಗಳು ಮೊದಲು ರೋಗಿಗಳನ್ನು ಆಕರ್ಷಿಸಿ ನಂತರ ಸಂಬಂಧಪಟ್ಟ ವೈದ್ಯರನ್ನು ಕರೆಸಿಕೊಳ್ಳುತ್ತಿರುವುದು ಚಿಕಿತ್ಸೆಯಲ್ಲಿ ವಿಳಂಬಕ್ಕೆ ಕಾರಣವಾಗುತ್ತಿದೆ ಎಂದು ಪೀಠ ತಿಳಿಸಿತು.
"ಇತ್ತೀಚಿನ ದಿನಗಳಲ್ಲಿ ಖಾಸಗಿ ನರ್ಸಿಂಗ್ ಹೋಂಗಳು/ಆಸ್ಪತ್ರೆಗಳು ವೈದ್ಯರಿಲ್ಲದಿದ್ದರೂ ಅಥವಾ ಮೂಲಸೌಕರ್ಯಗಳಿಲ್ಲದಿದ್ದರೂ ರೋಗಿಗಳನ್ನು ಚಿಕಿತ್ಸೆ ನೀಡುವುದಾಗಿ ಆಕರ್ಷಿಸುವುದು ಸಾಮಾನ್ಯ ಅಭ್ಯಾಸವಾಗಿದೆ. ಖಾಸಗಿ ಆಸ್ಪತ್ರೆಗೆ ರೋಗಿಯನ್ನು ದಾಖಲಿಸಿದ ನಂತರ ಆಸ್ಪತ್ರೆಗಳ ಮಾಲೀಕರು ಚಿಕಿತ್ಸೆಗಾಗಿ ವೈದ್ಯರನ್ನು ಕರೆಯಲು ಪ್ರಾರಂಭಿಸುತ್ತಾರೆ. ಖಾಸಗಿ ಆಸ್ಪತ್ರೆಗಳು ಇಲ್ಲವೇ ನರ್ಸಿಂಗ್ ಹೋಂಗಳು ರೋಗಿಗಳನ್ನು ಹಣ ಸುಲಿಗೆ ಮಾಡುವ ಎಟಿಎಂ ಯಂತ್ರಗಳಂತಷ್ಟೇ ಪರಿಗಣಿಸಲು ಪ್ರಾರಂಭಿಸಿವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ" ಎಂದು ನ್ಯಾಯಾಲಯ ಹೇಳಿದೆ.
ಯಾವುದೇ ವೈದ್ಯಕೀಯ ವೃತ್ತಿಪರರು ತಮ್ಮ ವೃತ್ತಿಯನ್ನು ಸರಿಯಾದ ಶ್ರದ್ಧೆ ಮತ್ತು ಎಚ್ಚರಿಕೆಯಿಂದ ನಿರ್ವಹಿಸಿದರೆ ಅವರನ್ನು ರಕ್ಷಿಸಬಹುದು ಆದರೆ ಸರಿಯಾದ ಸೌಲಭ್ಯ, ವೈದ್ಯರು ಮತ್ತು ಮೂಲಸೌಕರ್ಯಗಳಿಲ್ಲದೆ ನರ್ಸಿಂಗ್ ಹೋಂಗಳನ್ನು ತೆರೆದು ರೋಗಿಗಳಿಂದ ಹಣ ಕೀಳಲು ಆಮಿಷ ಒಡ್ಡುವವರಿಗೆ ಖಂಡಿತವಾಗಿಯೂ ರಕ್ಷಣೆ ಇರದು ಎಂದು ಅದು ಹೇಳಿದೆ.
ಪ್ರಸ್ತುತ ಪ್ರಕರಣದಲ್ಲಿ ಕುಟುಂಬ ಸದಸ್ಯರು ಸೂಕ್ತ ಸಮಯಕ್ಕೆ ಶಸ್ತ್ರಚಿಕಿತ್ಸೆಗೆ ಒಪ್ಪಲಿಲ್ಲ ಎಂಬ ವಾದವನ್ನು ನ್ಯಾಯಾಲಯ ಇದೇ ವೇಳೆ ತಿರಸ್ಕರಿಸಿತು.
ಇದು ಸಂಪೂರ್ಣ ಅನರ್ಥಕಾರಿ ಪ್ರಕರಣವಾಗಿದ್ದು ವೈದ್ಯರು ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಕುಟುಂಬ ಸದಸ್ಯರಿಂದ ಶಸ್ತ್ರಚಿಕಿತ್ಸೆಗೆ ಅನುಮತಿ ಪಡೆದ ಬಳಿಕವೂ ಶಸ್ತ್ರಚಿಕಿತ್ಸೆಗೆ ಅಗತ್ಯ ವೈದ್ಯರಿಲ್ಲದ ಕಾರಣ ಸೂಕ್ತ ರೀತಿಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಲ್ಲ ಎಂದಿತು.
ರೋಗಿ ಸಾವನ್ನಪ್ಪಿದ ಸಂದರ್ಭದಲ್ಲಿ ಅವರ ಕುಟುಂಬಸ್ಥರು ಮಾನವ ಲೋಪವನ್ನು ದೂಷಿಸಲಾರಂಭಿಸುತ್ತಾರೆ ಎಂಬುದು ನಿಜವಾದರೂ ವೈದ್ಯಕೀಯ ವೃತ್ತಿಪರರು ನಿರ್ದಿಷ್ಟ ಸಂದರ್ಭಗಳಲ್ಲಿ ಉಳಿದ ವೈದ್ಯರಂತೆ ತಮ್ಮ ಕರ್ತವ್ಯವನ್ನು ಕೌಶಲ್ಯದಿಂದ ನಿರ್ವಹಿಸಿದಾಗ ಮಾತ್ರ ಅವರಿಗೆ ರಕ್ಷಣೆ ನೀಡಬಹುದು ಎಂದಿತು.
ವೈದ್ಯರು ಸೂಕ್ತ ಸಮಯಕ್ಕೆ ಸೇವೆ ಒದಗಿಸುವ ಕಾಳಜಿ ತೋರಿದರೆ ಅಥವಾ ನಿರ್ಲಕ್ಷ್ಯ ವಹಿಸಿದರೆ ಎಂಬ ವಿಚಾರದಲ್ಲಿ ಎರಡನೆಯ ಅಂಶವೇ ಹೆಚ್ಚು ತೂಗುತ್ತದೆ ಎಂದು ನ್ಯಾಯಾಲಯ ಹೇಳಿತು.
ಪ್ರಕರಣದಲ್ಲಿ ವೈದ್ಯಕೀಯ ಮಂಡಳಿಯ ಅಭಿಪ್ರಾಯ ಅವಲಂಬಿಸಲು ನ್ಯಾಯಾಲಯ ನಿರಾಕರಿಸಿತು, ಎಲ್ಲಾ ದಾಖಲೆಗಳನ್ನು ತನ್ನ ಮುಂದೆ ಹಾಜರುಪಡಿಸಲಾಗಿಲ್ಲ ಎಂದು ಅದು ಹೇಳಿತು. ಈ ಪ್ರಕರಣದಲ್ಲಿ ಮಂಡಳಿ ವೈದ್ಯರ ಪರ ಅಭಿಪ್ರಾಯ ನೀಡಿತ್ತು.
ಈ ಮಧ್ಯೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಹಕ ನ್ಯಾಯಾಲಯಕ್ಕೆ ರೋಗಿಯ ಕುಟುಂಬ ಸದಸ್ಯರು ಸಲ್ಲಿಸಿದ್ದ ಅರ್ಜಿಯ ವಿಲೇವಾರಿಯಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವುದಕ್ಕೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.
"ಆಶ್ಚರ್ಯದ ಸಂಗತಿ ಎಂದರೆ, ಸಂತ್ರಸ್ತರ ಕುಟುಂಬ ಸಲ್ಲಿಸಿದ್ದ ಗ್ರಾಹಕ ದೂರನ್ನು ಇನ್ನೂ ಪರಿಗಣಿಸಲಾಗಿಲ್ಲ. ಕಳೆದ 16 ವರ್ಷಗಳಿಂದ ಗ್ರಾಹಕ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಪ್ರಸ್ತುತ ಅರ್ಜಿಯಲ್ಲಿ ಈ ಪ್ರಕ್ರಿಯೆಯನ್ನು ಪ್ರಶ್ನಿಸಿಲ್ಲವಾದ್ದರಿಂದ ಅದರ ಬಗ್ಗೆ ಯಾವುದೇ ಹೇಳಿಕೆ ನೀಡುವುದಿಲ್ಲ” ಎಂದು ಏಕಸದಸ್ಯ ಪೀಠ ನುಡಿಯಿತು.
[ತೀರ್ಪಿನ ಪ್ರತಿ]