ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣಗಳಲ್ಲಿ ಶುಶ್ರೂಷಕಿಯರನ್ನು ವಾಡಿಕೆ ರೀತ್ಯಾ ಬಂಧಿಸಬಾರದು: ಕೇರಳ ಹೈಕೋರ್ಟ್
ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣಗಳಲ್ಲಿ ಆರೋಪಿಯಾಗಿರುವ ಶುಶ್ರೂಷಕಿಯರನ್ನು ವಶಕ್ಕೆ ಪಡೆಯುವುದು ಸಂಪೂರ್ಣ ಅಗತ್ಯವಾಗಿರದಿದ್ದರೆ ಅವರನ್ನು ವಾಡಿಕೆ ರೀತ್ಯಾ ಬಂಧಿಸಬಾರದು ಎಂದು ವೈದ್ಯಕೀಯ ವ್ಯವಸ್ಥೆಯಲ್ಲಿ ದಾದಿಯರು ವಹಿಸುವ ಪ್ರಮುಖ ಪಾತ್ರವನ್ನು ಎತ್ತಿ ತೋರಿಸುವ ತೀರ್ಪಿನಲ್ಲಿ, ಕೇರಳ ಹೈಕೋರ್ಟ್ ಇತ್ತೀಚೆಗೆ ಆದೇಶಿಸಿದೆ [ಸೆಲಿನಾಮೊಲ್ ಮ್ಯಾಥ್ಯೂ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ದುರುದ್ದೇಶಪೂರಿತ ಕಾನೂನು ಕ್ರಮದ ಭಯವಿಲ್ಲದೆ ತಮ್ಮ ಕೆಲಸವನ್ನು ಮಾಡಲು ಸಮಾಜ ಮತ್ತು ಸರ್ಕಾರ ಶುಶ್ರೂಷಕಿಯರಿಗೆ ನೈತಿಕ ಬೆಂಬಲ ನೀಡಬೇಕು ಅವರನ್ನು ಭಾರತೀಯ ಶುಶ್ರೂಷಕಾ ಕೋಗಿಲೆಯರು ಎಂದು ಕರೆಯಬೇಕು ಎಂಬುದಾಗಿ ನ್ಯಾಯಮೂರ್ತಿ ಪಿ ವಿ ಕುಂಞಿಕೃಷ್ಣನ್ ಅವರಿದ್ದ ಏಕಸದಸ್ಯ ಪೀಠ ತಿಳಿಸಿದೆ.
ಜಾಕೋಬ್ ಮ್ಯಾಥ್ಯೂ ಮತ್ತು ಪಂಜಾಬ್ ಸರ್ಕಾರ ನಡುವಣ ಪ್ರಕರಣದ ತೀರ್ಪಿನ ಮೂಲಕ ಸುಪ್ರೀಂ ಕೋರ್ಟ್ ವೈದ್ಯರಿಗೆ ನೀಡಿರುವ ರಕ್ಷಣೆಯನ್ನು ಶುಶ್ರೂಷಕಿಯರಿಗೂ ಒದಗಿಸಬೇಕು ಎಂದು ಅದು ಹೇಳಿತು.
ದೂರುದಾರರು ಪ್ರಾಥಮಿಕ ಸಾಕ್ಷಿ ಒದಗಿಸದ ಹೊರತು ವೈದ್ಯಕೀಯ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪದ ಮೇಲೆ ಶುಶ್ರೂಷಕಿಯರ ವಿರುದ್ಧ ಖಾಸಗಿ ದೂರುಗಳನ್ನು ನ್ಯಾಯಾಲಯಗಳು ಪರಿಗಣಿಸಬಾರದು. ಜೊತೆಗೆ ಆರೋಪಿ ಶುಶ್ರೂಷಕಿಯರ ವಿರುದ್ಧ ತನಿಖೆ ನಡೆಸುವ ಮುನ್ನ ತನಿಖಾಧಿಕಾರಿಗಳು ನರ್ಸಿಂಗ್ ಕ್ಷೇತ್ರದಲ್ಲಿ ಪರಿಣತರಾದ ವೈದ್ಯಕೀಯ ತಜ್ಞರಿಂದ ನಿಷ್ಪಕ್ಷಪಾತ, ಸ್ವತಂತ್ರ, ವೈದ್ಯಕೀಯ ಅಭಿಪ್ರಾಯ ಪಡೆಯಬೇಕು ಎಂದು ಹೇಳಿದೆ.
ಜೇಕಬ್ ಮ್ಯಾಥ್ಯೂ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ನಿಗದಿಪಡಿಸಿದ ತತ್ವಗಳಿಗೆ ಅನುಗುಣವಾಗಿ ಮೂರು ತಿಂಗಳೊಳಗೆ ಸುತ್ತೋಲೆ ಹೊರಡಿಸುವಂತೆ ರಾಜ್ಯ ಸರ್ಕಾರಕ್ಕೆ ಅದು ನಿರ್ದೇಶಿಸಿದೆ.
ನಿಷ್ಠಾವಂತ ನರ್ಸ್‌ಗಳ ಶ್ರಮವನ್ನು ಇದುವರೆಗೆ ಆಸ್ಪತ್ರೆಗಳಿಗೆ ದಾಖಲಾದ ಮತ್ತು ಆಸ್ಪತ್ರೆಗಳನ್ನು ಕಣ್ಣಾರೆ ಕಂಡ ಯಾರಾದರೂ ಮೆಚ್ಚುತ್ತಾರೆ ಎಂದ ಏಕಸದಸ್ಯ ಪೀಠ ಅವರು ರೋಗಗಳಿಗೆ ಚಿಕಿತ್ಸೆ ನೀಡುವುದಷ್ಟೇ ಅಲ್ಲದೆ ರೋಗಿಗಳ ಬಗ್ಗೆಯೂ ನೈಜ ಕಾಳಜಿ ವಹಿಸುತ್ತಾರೆ. ಬೇರೆ ಯಾರೂ ಮಾಡದ ಕೆಲಸವನ್ನು ಶುಶ್ರೂಷಕಿಯರು ಮಾಡುತ್ತಾರೆ ಎಂದಿತು.
ಅಂತೆಯೇ ಐಪಿಸಿ ಸೆಕ್ಷನ್ 304 (ಕೊಲೆಗೆ ಸಮವಲ್ಲದ ನರಹತ್ಯೆ) ಅಡಿಯಲ್ಲಿ ವೈದ್ಯಕೀಯ ನಿರ್ಲಕ್ಷ್ಯಕ್ಕೆ ಸಂಬಂಧಿಸಿದಂತೆ ಶುಶ್ರೂಷಕಿಯೊಬ್ಬರ ವಿರುದ್ಧದ ಪ್ರಕರಣ ರದ್ದುಗೊಳಿಸಿದ ಪೀಠ ಅಪರಾಧದಲ್ಲಿ ಭಾಗಿಯಾಗಿರುವ ಉಳಿದ ವ್ಯಕ್ತಿಗಳ ವಿರುದ್ಧ ಪೊಲೀಸರು ತನಿಖೆ ಮುಂದುವರೆಸಬಹುದು ಎಂದಿತು.

