Airport Runway
Airport Runway 
ಸುದ್ದಿಗಳು

[ಮಂಗಳೂರು ವಿಮಾನ ನಿಲ್ದಾಣದ ಖಾಸಗೀಕರಣ] ಕೇಂದ್ರ, ವಿಮಾನ ನಿಲ್ದಾಣ ಪ್ರಾಧಿಕಾರ, ಅದಾನಿ ಸಮೂಹಕ್ಕೆ ಹೈಕೋರ್ಟ್‌ ನೋಟಿಸ್‌

Bar & Bench

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಖಾಸಗೀಕರಣ ಮತ್ತು ಮಂಗಳೂರು ಸೇರಿದಂತೆ ದೇಶದ ಮೂರು ವಿಮಾನ ನಿಲ್ದಾಣಗಳನ್ನು ಅದಾನಿ ಎಂಟರ್‌ಪ್ರೈಸಸ್‌ಗೆ ಗುತ್ತಿಗೆ ನೀಡುವುದಕ್ಕೆ ಸಂಬಂಧಿಸಿದಂತೆ 2019ರಲ್ಲಿ ಸಂಪುಟ ಸಭೆಯಲ್ಲಿ ಕೈಗೊಂಡಿರುವ ಬಿಡ್‌ ನಿರ್ಣಯವನ್ನು ವಜಾಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಗೆ (ಪಿಐಎಲ್‌) ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ್ದು, ಪ್ರತಿಕ್ರಿಯಿಸುವಂತೆ ಸೂಚಿಸಿದೆ.

ವಿಮಾನ ನಿಲ್ದಾಣಗಳ ಪ್ರಾಧಿಕಾರದ ಸಿಬ್ಬಂದಿ ಒಕ್ಕೂಟ ಸಲ್ಲಿಸಿರುವ ಮನವಿಯನ್ನು ಆಧರಿಸಿ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ಎಸ್‌ ಎಸ್‌ ಮಗದುಮ್‌ ಅವರಿದ್ದ ವಿಭಾಗೀಯ ಪೀಠವು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಮತ್ತು ಅದಾನಿ ಎಂಟರ್‌ಪ್ರೈಸಸ್‌ ಲಿಮಿಟೆಡ್‌ಗೂ ನೋಟಿಸ್‌ ಜಾರಿ ಮಾಡಿದೆ.

ಅಹ್ಮದಾಬಾದ್‌, ಜೈಪುರ, ಲಖನೌ, ಗುವಾಹಟಿ, ತಿರುವನಂತಪುರಂ ಮತ್ತು ಮಂಗಳೂರು ಸೇರಿದಂತೆ ಆರು ವಿಮಾನ ನಿಲ್ದಾಣಗಳನ್ನು ಸರ್ಕಾರಿ-ಖಾಸಗಿ ಒಪ್ಪಂದ ಅನ್ವಯ ಗುತ್ತಿಗೆ ನೀಡುವ ಸಂಬಂಧ 2018ರ ನವೆಂಬರ್‌ 8ರಂದು ಕೇಂದ್ರ ಸಚಿವ ಸಂಪುಟವು ತಾತ್ವಿಕ ಅನುಮೋದನೆ ನೀಡಿತ್ತು.

ವಿಮಾನ ನಿಲ್ದಾಣಗಳ ಖಾಸಗೀಕರಣ ವಿಚಾರದ ಸಂಬಂಧ ನಿರ್ಧಾರ ಕೈಗೊಳ್ಳಲು ಸಂಪುಟ ಸಮಿತಿಯು ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇತೃತ್ವದಲ್ಲಿ ಕಾರ್ಯದರ್ಶಿಗಳನ್ನೊಳಗೊಂಡ ಉನ್ನತಾಧಿಕಾರಿ ಸಮಿತಿ ರಚಿಸಿದ್ದು, ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮೌಲ್ಯಮಾಪನ ಸಮಿತಿಯ (ಪಿಪಿಪಿಎಸಿ) ವ್ಯಾಪ್ತಿಯನ್ನು ಈ ವಿಚಾರ ಮೀರುತ್ತದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಮೇಲೆ ಹೇಳಲಾದ ನಿರ್ಧಾರದಲ್ಲಿ 'ಗುತ್ತಿಗೆ ನೀಡುವಿಕೆ' ಎಂಬ ವಿಚಾರವನ್ನು ವ್ಯಕ್ತಪಡಿಸಲಾಗಿದೆಯಾದರೂ ಸರ್ಕಾರಿ - ಖಾಸಗಿ ಸಹಭಾಗಿತ್ವದ ಬಗ್ಗೆ ಚಿಂತಿಸುವ ಉದ್ದೇಶವನ್ನು ಇದು ಹೊಂದಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಸಂಪುಟದ ಟಿಪ್ಪಣಿಯ ಹಿನ್ನೆಲೆಯಲ್ಲಿ ಎಎಐಯು ಪಿಪಿಪಿಎಸಿಗೆ ಕರಡು ವಿನಾಯತಿ ಒಪ್ಪಂದ ಹಾಗೂ ಆರ್ಥಿಕ ಬಿಡ್‌ ಪ್ರಸ್ತಾವನೆಗಳನ್ನು ಯಾವುದೇ ಕಾರ್ಯಸಾಧ್ಯತಾ ಅಧ್ಯಯನ ಮತ್ತು ಕಾನೂನಾತ್ಮಕತೆಯನ್ನು ಪರಿಗಣಿಸದೆ 2018ರ ಡಿಸೆಂಬರ್‌ನಲ್ಲಿ ನೀಡಿತು.

ನಾಲ್ಕೇ ದಿನಗಳಲ್ಲಿ ಅಪಾರವಾದ ದಾಖಲೆಗಳ ಮೌಲ್ಯ ಮಾಪನ ಮಾಡಿ 2018ರ ಡಿಸೆಂಬರ್‌ 11ರಂದು ಪಿಪಿಪಿಎಸಿಯು ತಾತ್ವಿಕ ಅನುಮೋದನೆ ನೀಡಿದೆ. ಪ್ರಸ್ತಾವನೆಯನ್ನು ಸರಿಯಾದ ರೀತಿಯಲ್ಲಿ ವಿಶ್ಲೇಷಿಸಲಾಗಿಲ್ಲ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ಅರ್ಜಿದಾರರು ತಕರಾರು ಎತ್ತಿದ್ದಾರೆ. ತಾಂತ್ರಿಕ ಮತ್ತು ಆರ್ಥಿಕ ಬಿಡ್‌ ಅನ್ನು ಎಎಐ ಎತ್ತಿದ್ದು, ಅದಾನಿ ಎಂಟರ್‌ಪ್ರೈಸಸ್‌ ಎಲ್ಲಾ ಆರು ವಿಮಾನ ನಿಲ್ದಾಣಗಳಿಗೆ ಅತಿಹೆಚ್ಚಿನ ಬಿಡ್ಡರ್‌ ಆಗಿ ಹೊರಹೊಮ್ಮಿತ್ತು. ಕೇಂದ್ರ ಸರ್ಕಾರವು ಸಂಪುಟ ಸಭೆಯಲ್ಲಿ ಮಂಗಳೂರು ವಿಮಾನ ನಿಲ್ದಾಣ ಸೇರಿದಂತೆ ಮೂರು ವಿಮಾನ ನಿಲ್ದಾಣಗಳ ಅದಾನಿ ಸಮೂಹದ ಬಿಡ್‌ಗೆ ಒಪ್ಪಿಗೆ ನೀಡಿತ್ತು.

ಕಾರ್ಯಸಾಧ್ಯತಾ ಅಧ್ಯಯನ ಮತ್ತು ಪ್ರಸ್ತಾವನೆಯ ಕಾನೂನಾತ್ಮಕತೆಯನ್ನು ಪರಿಗಣಿಸದೇ ಎಎಐ ಮತ್ತು ಅದಾನಿ ಎಂಟರ್‌ಪ್ರೈಸಸ್‌ ನಡುವೆ ಫೆಬ್ರುವರಿ 2020ರಂದು ರಿಯಾಯಿತಿ ಒಪ್ಪಂದವಾಗಿದೆ (ಸರ್ಕಾರಿ ಸ್ವಾಮ್ಯದ ಯೋಜನೆಯಲ್ಲಿ ಖಾಸಗಿಯವರು ವಾಣಿಜ್ಯ ಚಟುವಟಿಕೆ ನಡೆಸಲು ಕೈಗೊಳ್ಳುವ ಒಪ್ಪಂದ) ಎಂಬುದು ಅರ್ಜಿದಾರರ ವಾದವಾಗಿದೆ.

“ವಿಮಾನ ನಿಲ್ದಾಣ ಪ್ರಾಧಿಕಾರ ಕಾಯಿದೆಯ ಸೆಕ್ಷನ್‌ 12 ಮತ್ತು 12-ಎ ಅಡಿ ನೀಡಲಾಗಿರುವ ಅಧಿಕಾರದ ಅನ್ವಯ ಒಪ್ಪಂದ ಮಾಡಿಕೊಳ್ಳಲು ಪ್ರತಿವಾದಿಗಳಿಗೆ ಯಾವುದೇ ಅಧಿಕಾರವಿಲ್ಲ” ಎಂದು ಅರ್ಜಿದಾರರು ಹೇಳಿದ್ದಾರೆ.

ಬಿಡ್ಡಿಂಗ್‌ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ 11 ಬಿಡ್ಡರ್‌ಗಳ ಪೈಕಿ ಎಲ್ಲಾ ಆರು ವಿಮಾನ ನಿಲ್ದಾಣಗಳಿಗೆ ಅದಾನಿ ಎಂಟರ್‌ಪ್ರೈಸಸ್‌ ಅತಿ ಹೆಚ್ಚು ಬಿಡ್‌ ಮಾಡಿರುವುದರ ಬಗ್ಗೆಯೂ ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದಾರೆ. “ಪ್ರತಿವಾದಿಗಳ ಆಕ್ಷೇಪಾರ್ಹ ಕ್ರಮವು ಕಾನೂನುಬಾಹಿರ ಮತ್ತು ಅನಿಯಂತ್ರಿತವಾಗಿದೆ. ಆರು ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಸರ್ಕಾರವು ಅಪಾರ ಪ್ರಮಾಣದ ಸಾರ್ವಜನಿಕರ ಹಣವನ್ನು ವಿನಿಯೋಗಿಸಿದೆ. ಯಾವುದೇ ಅಧಿಕಾರವನ್ನು ಇಟ್ಟುಕೊಳ್ಳದೇ ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸಿದರೆ ಮತ್ತು ಸರ್ಕಾರ ಭಾಗವಹಿಸುವುದನ್ನು ಖಾತರಿಪಡಿಸಿಕೊಳ್ಳದಿದ್ದರೆ ಇದು ಈಗಾಗಲೇ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಸಾರ್ವಜನಿಕ ಬೊಕ್ಕಸಕ್ಕೆ ಅಪಾರ ನಷ್ಟ ಉಂಟು ಮಾಡಲಿದೆ. ಇದರ ಜೊತೆಗೆ ಸರ್ಕಾರಿ ಭೂಮಿ ಮತ್ತು ಕಟ್ಟಡಗಳು ಕೆಲವೇ ಕೆಲವು ಕೋಟಿ ರೂಪಾಯಿಗಳಿಗೆ ಖಾಸಗಿ ವ್ಯಕ್ತಿಗಳ ಪಾಲಾಗಲಿದ್ದು, ಇದು ದೇಶದ ಹಿತಾಸಕ್ತಿಗೆ ವಿರುದ್ಧವಾಗಿರಲಿದೆ” ಎಂದು ಮನವಿಯಲ್ಲಿ ವಿವರಿಸಲಾಗಿದೆ.

2018ರ ಸಂಪುಟ ಸಭೆ ನಿರ್ಣಯಕ್ಕೆ ಪೂರಕವಾಗಿ ಇಡೀ ಬಿಡ್ಡಿಂಗ್‌ ದಾಖಲೆಗಳನ್ನು ಇಡಬೇಕು. ಪ್ರತಿವಾದಿಗಳ ಕಾರ್ಯವು ಆಕ್ಷೇಪಾರ್ಹವಾಗಿದ್ದು ಪ್ರಸ್ತಾವಿತ ಮನವಿಗೆ ಸಂಬಂಧಿಸಿದಂತೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ಒಪ್ಪಂದವು ಕಾನೂನುಬಾಹಿರ ಮತ್ತು ಕಾನೂನಿನ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಇಡೀ ಬಿಡ್ಡಿಂಗ್‌ ಪ್ರಕ್ರಿಯೆಯನ್ನು ಘೋಷಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಅಲ್ಲದೆ, ಅದಾನಿ ಸಮೂಹದ ಬಿಡ್‌ಗೆ ಒಪ್ಪಿಗೆ ನೀಡಿದ್ದ ಕೇಂದ್ರದ ತೀರ್ಮಾನವನ್ನು ವಜಾಗೊಳಿಸುವಂತೆಯೂ ಮನವಿದಾರರು ಕೋರಿದ್ದಾರೆ. ವಿಚಾರಣೆಯನ್ನು ಮಾರ್ಚ್‌ 3ಕ್ಕೆ ಮುಂದೂಡಲಾಗಿದೆ.