Priya Kapur and Mandhira Kapur Smith  
ಸುದ್ದಿಗಳು

ನಾದಿನಿ ವಿರುದ್ಧ ದೆಹಲಿ ನ್ಯಾಯಾಲಯದಲ್ಲಿ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ಹೂಡಿದ ಪ್ರಿಯಾ ಕಪೂರ್‌

ನ್ಯಾಯಾಧೀಶ ಸಿದ್ಧಾಂತ್ ಸಿಹಾಗ್ ಅವರು ಜನವರಿ 21ರಂದು ಸಮನ್ಸ್‌ ಪೂರ್ವ ಸಾಕ್ಷ್ಯ ದಾಖಲೆಗಾಗಿ ವಿಚಾರಣೆಗೆ ಹಾಜರಾಗುವಂತೆ ಪ್ರಿಯಾ ಕಪೂರ್ ಅವರಿಗೆ ಸೂಚನೆ ನೀಡಿದ್ದಾರೆ.

Bar & Bench

ತಮ್ಮ ನಾದಿನಿ ಮಂದಿರಾ ಕಪೂರ್‌ ಸ್ಮಿತ್‌ ಅವರ ವಿರುದ್ಧ ಉದ್ಯಮಿ, ದಿವಂಗತ ಸಂಜಯ್‌ ಕಪೂರ್‌ ಅವರ ಪತ್ನಿ ಪ್ರಿಯಾ ಕಪೂರ್‌ ಅವರು ದೆಹಲಿಯ ಪಟಿಯಾಲಾ ಹೌಸ್ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಶನಿವಾರ ಪ್ರಕರಣದ ವಿಚಾರಣೆ ನಡೆಸಿದ ಪಟಿಯಾಲಾ ಹೌಸ್ ನ್ಯಾಯಾಲಯ ಸಂಕೀರ್ಣದ ಅಡಿಷನಲ್‌ ಚೀಫ್‌ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್ (ಎಸಿಜೆಎಂ) ಸಿದ್ಧಾಂತ್ ಸಿಹಾಗ್ ಅವರು  -ಸಮನ್ಸ್‌ ಪೂರ್ವ ಸಾಕ್ಷ್ಯ ದಾಖಲಿಸುವ ಉದ್ದೇಶದಿಂದ ಜನವರಿ 21ರಂದು ನ್ಯಾಯಾಲಯದೆದುರು ಹಾಜರಾಗುವಂತೆ ಪ್ರಿಯಾ ಕಪೂರ್ ಅವರಿಗೆ ಸೂಚಿಸಿದ್ದಾರೆ.

ಸಂಜಯ್‌ ಕಪೂರ್‌ ಅವರ ಸಾವಿರಾರು ಕೋಟಿ ಮೊತ್ತದ ಆಸ್ತಿ ಒಡೆತನಕ್ಕೆ ಸಂಬಂಧಿಸಿದಂತೆ ಅವರ ಮೂರನೇ ಪತ್ನಿ ಪ್ರಿಯಾ ಕಪೂರ್‌ ಅವರು ಮಂದಿರಾ ಕಪೂರ್‌ ಮಾತ್ರವಲ್ಲದೆ ಬಾಲಿವುಡ್‌ ನಟಿ ಹಾಗೂ ಸಂಜಯ್‌ ಅವರ ಎರಡನೇ ಪತ್ನಿ ಕರಿಷ್ಮಾ ಕಪೂರ್‌ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದಾರೆ.

ತಮ್ಮ ವಿರುದ್ಧ ಮಂದಿರಾ ಕಪೂರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು *InControversial* ಎಂಬ ಪಾಡ್‌ಕಾಸ್ಟ್‌ನಲ್ಲಿ ಹೇಳಿಕೆಗಳನ್ನು ನೀಡಿದ ಹಿನ್ನೆಲೆಯಲ್ಲಿ ಪ್ರಿಯಾ ಅವರು  ಕ್ರಿಮಿನಲ್ ಮಾನನಷ್ಟ ದೂರು ದಾಖಲಿಸಿದ್ದಾರೆ. ಕಾರ್ಯಕ್ರಮದ ನಿರೂಪಕಿ ಪೂಜಾ ಚೌಧರಿ ಅವರನ್ನು ಕೂಡ ಕಕ್ಷಿದಾರರನ್ನಾಗಿ ಸೇರಿಸಲಾಗಿದೆ.

ಮಂದಿರಾ ಕಪೂರ್ ಅವರು ಯೂಟ್ಯೂಬ್, ಇನ್‌ಸ್ಟಾಗ್ರಾಂ, ಎಕ್ಸ್ (ಟ್ವಿಟರ್) ಸೇರಿದಂತೆ ಹಲವು ವೇದಿಕೆಗಳಲ್ಲಿ ತಮ್ಮ  ಹೆಸರನ್ನು ಉಲ್ಲೇಖಿಸಿ ವೀಡಿಯೊಗಳು ಮತ್ತು ಪೋಸ್ಟ್‌ಗಳನ್ನು ಪ್ರಸಾರ ಮಾಡಿದ್ದಾರೆ ಎಂದು ಪ್ರಿಯಾ ಕಪೂರ್ ಆರೋಪಿಸಿದ್ದಾರೆ. ಹೇಳಿಕೆಗಳಲ್ಲಿ “ಸಾರ್ವಜನಿಕರು ಮತ್ತು ವ್ಯಾಪಾರ ವಲಯದ ದೃಷ್ಟಿಯಲ್ಲಿ ದ್ವೇಷ, ಅಪಹಾಸ್ಯ ಮತ್ತು ಸಾಮಾಜಿಕ ಬಹಿಷ್ಕಾರಕ್ಕೆ ಕಾರಣವಾಗುವಂತೆ ಸುಳ್ಳು ಆರೋಪಗಳು ಮತ್ತು ಆರೋಪಾತ್ಮಕ ಸೂಚನೆಗಳನ್ನು ಮಾಡಲಾಗಿದೆ; ಇದರಿಂದ ತನ್ನ ಪ್ರತಿಷ್ಠೆಗೆ ಸಂಪೂರ್ಣ ಕುತ್ತು ಬಂದಿದೆ”ಎಂದು ಅರ್ಜಿ ವಿವರಿಸಿದೆ.

ಮತ್ತೊಂದೆಡೆ, ಪಾಡ್‌ಕಾಸ್ಟ್‌ನಲ್ಲಿ ತನ್ನ ಮತ್ತು ಸುಂಜಯ್ ಅವರ ವೈವಾಹಿಕ ಜೀವನ ಕಲಹ, ಕುತ್ಸುಕತೆಯಿಂದ ಕೂಡಿದ್ದು ಮಾನ್ಯತೆಗೆ ಅರ್ಹವಲ್ಲ ಎಂಬ ರೀತಿಯ ಹೇಳಿಕೆಗಳನ್ನು ಮಂದಿರಾ ನೀಡಿದ್ದಾರೆ. ಇಂತಹ ಹೇಳಿಕೆಗಳು ತಮ್ಮ ವೈವಾಹಿಕ ಸಂಬಂಧದ ಪವಿತ್ರತೆಯ ಮೇಲೆ ನೇರ ದಾಳಿ ನಡೆಸುವುದರ ಜೊತೆಗೆ, ಪತ್ನಿಯಾಗಿ ಹಾಗೂ ಈಗ ವಿಧವೆಯಾಗಿರುವ ತಮ್ಮ  ಘನತೆ ಗೌರವಕ್ಕೆ  ಕುತ್ತು ತಂದಿವೆ ಎಂದು ಅವರು ಹೇಳಿದ್ದಾರೆ.

ಇಂತಹ ಆರೋಪಗಳು ದೂರುದಾರೆಯ ಗೌರವ, ಸ್ತ್ರೀತ್ವ ಮತ್ತು ಸಾಮಾಜಿಕ ಸ್ಥಾನಮಾನದ ಮೂಲಭೂತ ಅಡಿಪಾಯವನ್ನೇ ಕದಡುವಂತಿವೆ. ಆದ್ದರಿಂದ ಭಾರತೀಯ ನ್ಯಾಯ ಸಂಹಿತೆ ಯ ಸೆಕ್ಷನ್ 356ರ ಅಡಿಯಲ್ಲಿ ಇವು ಮಾನನಷ್ಟಕರವಾಗಿವೆ,” ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಪ್ರಿಯಾ ಕಪೂರ್ ಪರವಾಗಿ ಹಿರಿಯ ವಕೀಲ ಮಣೀಂದರ್‌ ಸಿಂಗ್ ವಾದ ಮಂಡಿಸಿದರು. ಮಾನನಷ್ಟ ಪ್ರಕರಣವನ್ನು ವಕೀಲ ಸ್ಮೃತಿ ಅಸ್ಮಿತ ಅವರ ಮೂಲಕ ದಾಖಲಿಸಲಾಗಿದೆ.