VidhanaSoudha 
ಸುದ್ದಿಗಳು

ವಿಡಿಯೋ ಕಾನ್ಫರೆನ್ಸ್ ಮೂಲಕ ಕೈದಿಗಳ ಹಾಜರಾತಿ ವ್ಯವಸ್ಥೆಗೆ ₹3 ಕೋಟಿ: ಬಜೆಟ್‌ನಲ್ಲಿ ಸಿಎಂ ಘೋಷಣೆ

Bar & Bench

ರಾಜ್ಯ ಕಾರಾಗೃಹಗಳಲ್ಲಿನ ಬಂಧಿಗಳನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸುವ ವ್ಯವಸ್ಥೆಯನ್ನು ಬಲಪಡಿಸಲು 3 ಕೋಟಿ ರೂ. ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಬಜೆಟ್‌ನಲ್ಲಿ ಘೋಷಿಸಿದ್ದಾರೆ.

ಈಗಾಗಲೇ ಸಂಪುಟ ಸಭೆಯಲ್ಲಿ ಚರ್ಚಿಸಿ, ವಿಧಾನಸಭೆಯಲ್ಲಿ ಮಂಡನೆಯಾಗಿರುವ ಎಪಿಎಂಸಿ ಕಾಯಿದೆ ರದ್ದತಿಯ ಬಗ್ಗೆ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಗೆ ಬದಲಾಗಿ ಹೊಸ ಶಿಕ್ಷಣ ನೀತಿ ರೂಪಿಸುವ ವಿಚಾರಗಳೂ ಸಹ ಬಜೆಟ್ ಮಂಡನೆ ವೇಳೆ ಪ್ರಸ್ತಾಪವಾಗಿದೆ. ಜೊತೆಗೆ ವಸತಿ ಸಮಸ್ಯೆಗೆ ತೊಡಕಾಗಿರುವ ಅರಣ್ಯ ಕಾಯಿದೆಯ ವಿಧಿಗಳ ತಿದ್ದುಪಡಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಲಾಗಿದೆ.

ಇದೇ ವೇಳೆ ಕರ್ನಾಟಕ ಭೂ ಕಂದಾಯ ಕಾಯಿದೆಯ ಸೆಕ್ಷನ್ 95ಕ್ಕೆ ತಿದ್ದುಪಡಿ ತಂದು ಜಮೀನನ್ನು ಸ್ವಯಂ ಘೋಷಣೆ ಮೂಲಕ ಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತನೆ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ವಿವರಿಸಲಾಗಿದೆ.

ಪರಿಶಿಷ್ಟ ಜಾತಿ ಮತ್ತು ಪ. ಪಂಗಡದವರಿಗೆ ಮಂಜೂರಾದ ಜಮೀನನ್ನು ಪುನರ್ ಸ್ಥಾಪಿಸುವುದಕ್ಕಾಗಿ ಮನವಿ ಸಲ್ಲಿಸಲು ಕಾಲಮಿತಿಯನ್ನು ಕಾಯಿದೆಯಲ್ಲಿಯೇ ನಿಗದಿಪಡಿಸಲು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಧಿನಿಯಮ (ಪಿಟಿಸಿಎಲ್) 1978ಕ್ಕೆ ಸೂಕ್ತ ತಿದ್ದುಪಡಿ ತರಲಾಗುವುದು ಎಂದು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ.

ಈವೆರೆಗೆ ಉಪ ನಂದಣಾಧಿಕಾರಿಗಳ ಕಚೇರಿಯಲ್ಲಿ ಮಾತ್ರ ವಿವಾಹ ನೋಂದಣಿಗೆ ಅವಕಾಶ ಕಲ್ಪಿಸುತ್ತಿದ್ದು ಈ ಪ್ರಕ್ರಿಯೆಯನ್ನು ಇನ್ನಷ್ಟು ಸುಗಮನಗೊಳಿಸಿ ಜನಸ್ನೇಹಿಯಾಗಿಸಲು ಕಾವೇರಿ 2.0 ತಂತ್ರಾಂಶದಲ್ಲಿ ಆನ್‌ಲೈನ್‌ ಮೂಲಕ ನೋಂದಣಿ ಮಾಡಲು ಮತ್ತು ಗ್ರಾಮ ಪಂಚಾಯಿತಿಗಳಲ್ಲಿನ ಬಾಪೂಜಿ ಸೇವಾ ಕೇಂದ್ರ ಹಾಗೂ ಗ್ರಾಮ-1 ಕೇಂದ್ರಗಳಲ್ಲೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಲಾಗಿದೆ.