ವಕೀಲರು ಸಲ್ಲಿಸುವ ಸೇವೆಗಳು ವೃತ್ತಿಪರ ಚಟುವಟಿಕೆಗಳಾಗಿರುವುದರಿಂದ "ವಾಣಿಜ್ಯ ಸಂಸ್ಥೆ" ವರ್ಗದಡಿ ಅವರಿಗೆ ತೆರಿಗೆ ವಿಧಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ [ದಕ್ಷಿಣ ದೆಹಲಿ ಮಹಾನಗರ ಪಾಲಿಕೆ ಮತ್ತು ಬಿ ಎನ್ ಮಾಗೊನ್ ನಡುವಣ ಪ್ರಕರಣ].
ಜನವರಿ 2015ರಲ್ಲಿ ಏಕಸದಸ್ಯ ಪೀಠ ನೀಡಿದ್ದ ತೀರ್ಪಿನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ನಜ್ಮಿ ವಜೀರಿ ಮತ್ತು ಸುಧೀರ್ ಕುಮಾರ್ ಜೈನ್ ಅವರಿದ್ದ ಪೀಠ ಈ ಆದೇಶ ನೀಡಿದೆ.
ವಕೀಲರ ಸೇವೆಗಳನ್ನು "ವಾಣಿಜ್ಯ ಚಟುವಟಿಕೆ" ಎಂದು ಪರಿಗಣಿಸುವಂತಿಲ್ಲ ಮತ್ತು ಅದರಡಿ ತೆರಿಗೆ ವಿಧಿಸುವಂತಿ;ಲ್ಲ ಎಂದು ತೆರಿಗೆ ಕಾಯಿದೆಯನ್ನು ಓದಿದ ನಂತರ, ನ್ಯಾಯಪೀಠ ಒತ್ತಿ ಹೇಳಿತು.
"ತೆರಿಗೆ ಕಾಯಿದೆಯ ಕಟ್ಟುನಿಟ್ಟಾದ ವ್ಯಾಖ್ಯಾನದ ನಿಯಮವನ್ನು ಅನ್ವಯಿಸಬೇಕಾಗಿದೆ. ಯಾವುದೇ ವ್ಯುತ್ಪನ್ನದ ಅರ್ಥವನ್ನು ಓದುವ ಅಥವಾ ಶಾಸನದ ಯಾವುದೇ ಉದ್ದೇಶವನ್ನು ಓದುವ ಅವಕಾಶ ಇಲ್ಲ. 'ವೃತ್ತಿಪರ ಚಟುವಟಿಕೆ'ಯನ್ನು 'ವಾಣಿಜ್ಯ ಚಟುವಟಿಕೆ' ಎಂದು ಕಾನೂನಿನಲ್ಲಿ ಹೇಳಿಲ್ಲವಾದ್ದರಿಂದ ನ್ಯಾಯವಾದಿಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಲಾಗದು" ಎಂದು ಆದೇಶ ವಿವರಿಸಿದೆ.
ಏಕಸದಸ್ಯ ಪೀಠ ನೀಡಿದ್ದ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ಯಾವುದೇ ಕಾರಣಗಳಿಲ್ಲ ಎಂದ ಪೀಠ ʼಅರ್ಹತೆ ರಹಿತʼ ಎಂಬುದಾಗಿ ತಿಳಿಸಿ ಮೇಲ್ಮನವಿಯನ್ನು ವಜಾಗೊಳಿಸಿತು.
ದೆಹಲಿ ಮಹಾನಗರ ಪಾಲಿಕೆ 2013 ರಲ್ಲಿ ತನ್ನ ಗ್ರೇಟರ್ ಕೈಲಾಶ್ 2 ಆವರಣದಲ್ಲಿ "ವಾಣಿಜ್ಯ ಚಟುವಟಿಕೆ" ನಡೆಸುತ್ತಿರುವುದಕ್ಕಾಗಿ ವಕೀಲರೊಬ್ಬರಿಗೆ ಆಸ್ತಿ ತೆರಿಗೆ ಪಾವತಿಸುವಂತೆ ಸೂಚಿಸಿ ಎರಡು ಆದೇಶಗಳನ್ನು ಹೊರಡಿಸಿತು. ಈ ಆದೇಶಗಳನ್ನು ಪ್ರಶ್ನಿಸಿ ಏಕಸದಸ್ಯ ಪೀಠದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಪೀಠ ಪಾಲಿಕೆಯ ಆದೇಶಗಳನ್ನು ರದ್ದುಗೊಳಿಸಿತ್ತು.