Senior Advocate Shashi Kiran Shetty 
ಸುದ್ದಿಗಳು

ಕರ್ನಾಟಕದ ನೂತನ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರ ವೃತ್ತಿಬದುಕಿನ ಸಂಕ್ಷಿಪ್ತ ನೋಟ

ದಾವೆ ಬಾಕಿ ಉಳಿಯುವಿಕೆ ಕಡಿಮೆ ಮಾಡುವುದು, ಅನಗತ್ಯ ವ್ಯಾಜ್ಯಗಳನ್ನ ತಪ್ಪಿಸುವುದು ಕಿರಿಯ ವಕೀಲಕರಿಗೆ ಬೆಂಬಲ ನೀಡುವಂತಹ ಕನಸುಗಳನ್ನು ಸಾಕಾರಗೊಳಿಸುವ ಹಂಬಲದೊಂದಿಗೆ ಅವರು ಅಡ್ವೊಕೇಟ್ ಜನರಲ್ ಹುದ್ದೆ ಅಲಂಕರಿಸುತ್ತಿದ್ದಾರೆ.

Bar & Bench

ಕರ್ನಾಟಕದ ನೂತನ ಅಡ್ವೊಕೇಟ್‌ ಜನರಲ್‌ ಆಗಿ ನೇಮಕಗೊಂಡಿರುವ ಹಿರಿಯ ನ್ಯಾಯವಾದಿ ಶಶಿಕಿರಣ್‌ ಶೆಟ್ಟಿ ಅವರು 23 ವರ್ಷಗಳ ಸುದೀರ್ಘ ಕಾಲದಿಂದ ಕಾನೂನು ಸೇವೆಯಲ್ಲಿ ತೊಡಗಿರುವವರು.

ಮುಸ್ಲಿಂ ಮೀಸಲಾತಿ ಪ್ರಕರಣದಿಂದ ಹಿಡಿದು ಶಾಸಕರ ಅನರ್ಹತೆ ಪ್ರಕರಣದವರೆಗೆ ಮಹತ್ವದ ಪ್ರಕರಣಗಳಲ್ಲಿ ವಾದ ಮಂಡಿಸಿದ ಅನುಭವ ಅವರದ್ದು. ಶಶಿಕಿರಣ್‌ ಅವರು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್‌ ಶೆಟ್ಟಿ ಅವರ ಪುತ್ರ. ಬೆಂಗಳೂರಿನಲ್ಲಿರುವ ಭಾರತೀಯ ವಿಶ್ವವಿದ್ಯಾಲಯ ರಾಷ್ಟ್ರೀಯ ಕಾನೂನು ಶಾಲೆಯಿಂದ 1998ರಲ್ಲಿ ಬಿಎ ಎಲ್‌ಎಲ್‌ಬಿ ಪದವಿ ಪಡೆದ ಅವರು,  ಸಾಂವಿಧಾನಿಕ, ಆಡಳಿತಾತ್ಮಕ, ಮಧ್ಯಸ್ಥಿಕೆ, ಆಸ್ತಿ ಹಕ್ಕು, ಕೌಟುಂಬಿಕ, ಸಾಲ ವಸೂಲಾತಿ, ಗಣಿಗಾರಿಕೆ, ಪರಿಸರ, ಬ್ಯಾಂಕಿಂಗ್‌,  ಮುಂತಾದ ಕಾನೂನುಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದಾರೆ.

ಕಾರ್ಪೊರೇಟ್‌ ಕಕ್ಷಿದಾರರು, ಬ್ಯಾಂಕ್‌ಗಳು ಶಿಕ್ಷಣ ಸಂಸ್ಥೆಗಳು, ಕಟ್ಟಡ ಸಹಕಾರ ಸಂಘಗಳು, ಪ್ರಾಪರ್ಟಿ ಡೆವಲಪರ್‌ಗಳು ಪುನರ್‌ನಿರ್ಮಾಣ ಕಂಪೆನಿಗಳು ಇವರಿಂದ ಕಾನೂನು ಸೇವೆ ಪಡೆದಿವೆ.

ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿರುವ,  ಮುಸ್ಲಿಮರ ಮೀಸಲಾತಿ ರದ್ದತಿ ಪ್ರಕರಣದಲ್ಲಿ ಅರ್ಜಿದಾರ ಗುಲಾಂ ರಸೂಲ್‌ ಪರವಾಗಿ ವಾದ ಮಂಡಿಸುತ್ತಿದ್ದಾರೆ ಶಶಿ ಕಿರಣ್‌.

ಕರ್ನಾಟಕದ 16 ಶಾಸಕರನ್ನು ಅನರ್ಹಗೊಳಿಸಿದ ಪ್ರಕರಣದಲ್ಲಿ ಪಕ್ಷೇತರ ಶಾಸಕರೊಬ್ಬರ ಪರವಾಗಿ ವಾದ ಮಂಡಿಸಿದ್ದ ಇವರು 14 ಶಾಸಕರನ್ನು ಅನರ್ಹಗೊಳಿಸಿದ್ದ ಪ್ರಕರಣದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮತ್ತು ಅಂದಿನ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಪ್ರತಿನಿಧಿಸಿದ್ದರು. ಅನೇಕ ಚುನಾವಣಾ ಅರ್ಜಿಗಳಲ್ಲಿ ವಾದಮಂಡನೆ ಅವರ ಹೆಗ್ಗಳಿಕೆ.

ವಿವಿಧ ಮಧ್ಯಸ್ಥಿಕೆ ಹಾಗೂ ವಾಣಿಜ್ಯ ಮಧ್ಯಸ್ಥಿಕೆ ಪ್ರಕರಣಗಳಲ್ಲಿ ಜಯಗಳಿಸಿರುವ ಇವರು ಹಲವು ಗಣಿಗಾರಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ಕಕ್ಷಿದಾರರನ್ನು ಪ್ರತಿನಿಧಿಸಿದ್ದಾರೆ.


ಇತರೆ ರಾಜ್ಯಗಳ ಲಾಟರಿಗಳ ಮೇಲೆ ಕರ್ನಾಟಕ ತೆರಿಗೆ ವಿಧಿಸಿದ್ದನ್ನು ಪ್ರಶ್ನಿಸಿದ್ದ ಪ್ರಕರಣದಲ್ಲಿ ನಾಗಾಲ್ಯಾಂಡ್‌ ಸರ್ಕಾರದ ಪರವಾಗಿ, ಹಾಗೂ ಕರ್ನಾಟಕದೊಳಗೆ ಬೇರೆ ರಾಜ್ಯಗಳ ಲಾಟರಿ ಟಿಕೆಟ್‌ ಮಾರಾಟದ ನಿಷೇಧ ಪ್ರಶ್ನಿಸಿ ಅರುಣಾಚಲ ಪ್ರದೇಶ ಸರ್ಕಾರ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆಯೂ ವಾದ ಮಂಡಿಸಿದ್ದಾರೆ.

ಎನ್‌ ಆರ್‌ ನಾರಾಯಣ ಮೂರ್ತಿ ಮತ್ತು ಕರ್ನಾಟಕ ರಕ್ಷಣಾ ವಕೀಲರ ವೇದಿಕೆ ನಡುವಣ ಪ್ರಕರಣ, ರೂ 2215 ಕೋಟಿ ಮೊತ್ತದ ಟೆಂಡರ್‌ಗೆ ಸಂಬಂಧಿಸಿದಂತೆ ಆಲ್‌ಸ್ಟಾಮ್‌ ಮತ್ತು ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತ ನಡುವಣ ಪ್ರಕರಣ, ಇಸ್ಕಾನ್‌, ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ- ನೀಟ್‌ ಸಂಬಂಧಿಸಿದಂತೆಯೂ ಅವರು ತಮ್ಮ ವಾದ ಕೌಶಲ್ಯ ತೋರಿದ್ದಾರೆ.

ಸರ್ಕಾರ ಹೂಡಿರುವ ದಾವೆಗಳ ಬಾಕಿ ಉಳಿಯುವಿಕೆ ಕಡಿಮೆ ಮಾಡುವುದು, ಅನಗತ್ಯ ವ್ಯಾಜ್ಯಗಳನ್ನು ತಪ್ಪಿಸುವುದು, ಕಾನೂನು ಇಲಾಖೆ ಮತ್ತು ಕಾನೂನು ಅಧಿಕಾರಿಗಳ ಬಲವರ್ಧನೆ, ಮಧ್ಯಸ್ಥಿಕೆ ಮತ್ತು ಲೋಕ್‌ ಅದಾಲತ್‌ ಮೂಲಕ ವ್ಯಾಜ್ಯ ಪರಿಹಾರಕ್ಕೆ ಆದ್ಯತೆ, • ಸರ್ಕಾರಿ ಪ್ರಾಧಿಕಾರಗಳಿಗೆ ಸಂಬಂಧಿಸಿದ ದಾವೆಗಳಲ್ಲಿ ಅವರ ಸೇವೆಗಳನ್ನು ತೆಗೆದುಕೊಳ್ಳುವ ಮೂಲಕ ಕಿರಿಯ ವಕೀಲರಿಗೆ ಬೆಂಬಲದಂತಹ ಕನಸುಗಳನ್ನು ಸಾಕಾರಗೊಳಿಸುವ ಹಂಬಲದೊಂದಿಗೆ ಅವರು ಅಡ್ವೊಕೇಟ್‌ ಜನರಲ್‌ ಹುದ್ದೆ ಅಲಂಕರಿಸುತ್ತಿದ್ದಾರೆ.