K B Naik and Karnataka HC 
ಸುದ್ದಿಗಳು

ವೃತ್ತಿ ದುರ್ನಡತೆ: ಕೆಎಸ್‌ಬಿಸಿ ಮಾಜಿ ಅಧ್ಯಕ್ಷ ನಾಯಕ್‌ ಅಮಾನತುಗೊಳಿಸಿದ್ದ ಬಿಸಿಐ ಆದೇಶ ವಜಾ ಮಾಡಿದ ಹೈಕೋರ್ಟ್‌

ಒಪ್ಪಿತ ವಾಸ್ತಿವಿಕ ವಿಚಾರದ ಪ್ರಕಾರ ಅರ್ಜಿದಾರರನ್ನು ಆಲಿಸಲಾಗಿಲ್ಲ. ಆಕ್ಷೇಪಾರ್ಹ ಆದೇಶವು ವಕೀಲರ ಕಾಯಿದೆ ಸೆಕ್ಷನ್‌ 48ಎ, ಉಪ ಸೆಕ್ಷನ್‌ (2)ಕ್ಕೆ ವಿರುದ್ಧವಾಗಿದ್ದು, ಇದು ಸ್ವಾಭಾವಿಕ ನ್ಯಾಯ ತತ್ವದ ಉಲ್ಲಂಘನೆಯಾಗಿದೆ ಎಂದಿರುವ ನ್ಯಾಯಾಲಯ.

Siddesh M S

ಕರ್ನಾಟಕ ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೆ ಬಿ ನಾಯಕ್‌ ಅವರು ಪರಿಶೀಲನಾ ಅರ್ಜಿ ಇತ್ಯರ್ಥವಾಗುವವರೆಗೆ ಯಾವುದೇ ನ್ಯಾಯಾಲಯದಲ್ಲಿ ಪ್ರಾಕ್ಟೀಸ್‌ ಮಾಡದಂತೆ ಅಮಾನತುಗೊಳಿಸಿ ಭಾರತೀಯ ವಕೀಲರ ಪರಿಷತ್‌ (ಬಿಸಿಐ) ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ವಜಾ ಮಾಡಿದೆ.

ಕೆ ಬಿ ನಾಯಕ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ.

“ಮರುಪರಿಶೀಲನಾ ಅರ್ಜಿ ವಿಚಾರಣೆ ನಡೆಸಿ, ಬಿಸಿಐ 2022ರ ಸೆಪ್ಟೆಂಬರ್‌ 26ರಂದು ಮಾಡಿದ್ದ ಆದೇಶವನ್ನು ವಜಾ ಮಾಡಲಾಗಿದೆ. ಬಿಸಿಐ ಅರ್ಜಿದಾರ ವಕೀಲರನ್ನು ಆಲಿಸಬೇಕು. ಕಾನೂನಿನ ಅನ್ವಯ ತಮ್ಮನ್ನು ಸಮರ್ಥಿಸಿಕೊಳ್ಳಲು ಅವರಿಗೆ ಸೂಕ್ತ ಅವಕಾಶ ಕಲ್ಪಿಸಬೇಕು. ಬಳಿಕ ಸೂಕ್ತ ಆದೇಶ ಮಾಡಬೇಕು. ಅರ್ಜಿದಾರರು ಡಿಸೆಂಬರ್‌ 19ರಂದು ಬಿಸಿಐ ಮುಂದೆ ಹಾಜರಾಗಬೇಕು. ತನ್ನ ನಿಯಮಾವಳಿಗಳನ್ನು ನಿಯಂತ್ರಿಸಲು ಬಿಸಿಐ ಮುಕ್ತವಾಗಿದ್ದು, ಉಭಯ ಪಕ್ಷಕಾರರ ವಾದವನ್ನು ಮುಕ್ತವಾಗಿ ಇರಿಸಲಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

“ಒಪ್ಪಿತ ವಾಸ್ತಿವಿಕ ವಿಚಾರದ ಪ್ರಕಾರ ಅರ್ಜಿದಾರರನ್ನು ಆಲಿಸಲಾಗಿಲ್ಲ. ಆಕ್ಷೇಪಾರ್ಹ ಆದೇಶವು ವಕೀಲರ ಕಾಯಿದೆ ಸೆಕ್ಷನ್‌ 48ಎ, ಉಪ ಸೆಕ್ಷನ್‌ (2)ಕ್ಕೆ ವಿರುದ್ಧವಾಗಿದ್ದು, ಇದು ಸ್ವಾಭಾವಿಕ ನ್ಯಾಯ ತತ್ವದ ಉಲ್ಲಂಘನೆಯಾಗಿದೆ. ಹೀಗಾಗಿ, ಸೆಪ್ಟೆಂಬರ್‌ 26ರ ಆದೇಶವನ್ನು ವಜಾ ಮಾಡಿ, ಪ್ರಕರಣವನ್ನು ಬಿಸಿಐಗೆ ಮರಳಿಸುವುದು ಸೂಕ್ತ” ಎಂದು ಪೀಠವು ಆದೇಶದಲ್ಲಿ ದಾಖಲಿಸಿದೆ.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ಪಿ ಪಿ ಹೆಗ್ಡೆ, ವಕೀಲ ಸಾಗರ್‌ ಜಿ. ನಹರ್‌ ಹಾಗೂ ಬಿಸಿಐ ಪರವಾಗಿ ವಕೀಲ ಶ್ರೀಧರ್‌ ಪ್ರಭು, ಕೆಎಸ್‌ಬಿಸಿ ಪರ ವಕೀಲ ಗೌತಮ್‌ ಎ ಆರ್‌, ಬಸವರಾಜ್‌ ಜರಳಿ ಅವರನ್ನು ವಕೀಲ ಕೇತನ್‌ ಕುಮಾರ್‌ ಪ್ರತಿನಿಧಿಸಿದ್ದರು.

ಪ್ರಕರಣದ ಹಿನ್ನೆಲೆ: ಕೆಎಸ್‌ಬಿಸಿಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೆ ಬಿ ನಾಯಕ್ ಅವರು ನಕಲಿ ಜಿಪಿಎ (ಜನರಲ್‌ ಪವರ್‌ ಆಫ್‌ ಅಟಾರ್ನಿ - ಸಾಮಾನ್ಯ ಮುಖ್ತ್ಯಾರನಾಮೆ) ಸೃಷ್ಟಿಸಿ ಬೆಳಗಾವಿಯ ಸವದತ್ತಿ ತಾಲ್ಲೂಕಿನ ಕಾಗದಾಳ್‌ ಗ್ರಾಮದ ಬಸವರೆಡ್ಡಿ ವೆಂಕರೆಡ್ಡಿ ಚುಳಕಿ ಅವರಿಗೆ ಸೇರಿದ ಜಮೀನಿನ ಕ್ರಯ ಮಾಡಿದ್ದಾರೆ. ಆ ಮೂಲಕ ವೃತ್ತಿ ದುರ್ನಡತೆ ತೋರಿದ್ದು, ಅವರ ವಿರುದ್ಧ ಸ್ವಯಂಪ್ರೇರಿತ ಕ್ರಮಕೈಗೊಳ್ಳಬೇಕು ಎಂದು ಕೋರಿ ಚುಳಕಿ ಅವರ ವಕೀಲರಾದ ಬಸವರಾಜ್‌ ಮುರಗೇಶ್‌ ಜರಳಿ ಅವರು ಕೆಎಸ್‌ಬಿಸಿಗೆ ದೂರು ನೀಡಿದ್ದರು.

ಬೆಳಗಾವಿಯ ವಕೀಲ ಬಸವರಾಜ ಜರಳಿ ಅವರು ಕೆ ಬಿ ನಾಯಕ್‌ ವಿರುದ್ಧ ವೃತ್ತಿ ದುರ್ನಡತೆ ಕುರಿತು ನೀಡಿದ್ದ ದೂರನ್ನು ಕೆಎಸ್‌ಬಿಸಿ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ಬಿಸಿಐನ ಮೂವರು ಸದಸ್ಯರ ನೇತೃತ್ವದ ಶಿಸ್ತುಪಾಲನಾ ಸಮಿತಿಯು ನಾಯಕ್‌ ಅವರನ್ನು ಅರ್ಜಿ ಇತ್ಯರ್ಥವಾಗುವವರೆಗೆ ಪ್ರಾಕ್ಟೀಸ್‌ ಮಾಡದಂತೆ ನಿರ್ಬಂಧಿಸಿ, ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ನಾಯಕ್‌ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈಗ ಆ ಆದೇಶವನ್ನು ವಜಾ ಮಾಡಿರುವ ಹೈಕೋರ್ಟ್‌ ಪ್ರಕರಣವನ್ನು ಬಿಸಿಐಗೆ ಮರಳಿಸಿದೆ.