ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್‌ಬಿಸಿ) ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೆ ಬಿ ನಾಯಕ್ ಅವರು ಪರಿಶೀಲನಾ ಅರ್ಜಿ ಇತ್ಯರ್ಥವಾಗುವವರೆಗೆ ಯಾವುದೇ ನ್ಯಾಯಾಲಯದಲ್ಲಿ ಪ್ರಾಕ್ಟೀಸ್ ಮಾಡದಂತೆ ಅಮಾನತು ಮಾಡಿ ಭಾರತೀಯ ವಕೀಲರ ಪರಿಷತ್ (ಬಿಸಿಐ) ಈಚೆಗೆ ಮಾಡಿದ್ದ ಆದೇಶಕ್ಕೆ ಶುಕ್ರವಾರ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ.
ಬಿಸಿಐ ಆದೇಶ ಪ್ರಶ್ನಿಸಿ ಕೆ ಬಿ ನಾಯಕ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಮೇಲ್ನೋಟಕ್ಕೆ ಅರ್ಜಿದಾರರನ್ನು ಆಲಿಸಿಲ್ಲ ಎಂದೆನಿಸುತ್ತಿದೆ ಎಂದಿದೆ.
“ವಕೀಲರ ಕಾಯಿದೆ ಸೆಕ್ಷನ್ 48ಎ(2) ಅನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದ್ದು, ಯಾವುದೇ ನ್ಯಾಯಾಲಯದಲ್ಲಿ ಪ್ರಾಕ್ಟೀಸ್ ಮಾಡುವಂತಿಲ್ಲ ಎಂಬ ಆದೇಶವನ್ನು ಮೇಲ್ನೋಟಕ್ಕೆ ಬಿಸಿಐ ಮಾಡಬಾರದಿತ್ತು. ಅರ್ಜಿದಾರರನ್ನು ಆಲಿಸದೇ ಅವರಿಗೆ ಪೂರ್ವಾಗ್ರಹ ಉಂಟು ಮಾಡಬಹುದಾದ ಯಾವುದೇ ಮಧ್ಯಂತರ ಅಥವಾ ಅಂತಿಮ ಆದೇಶವನ್ನು ಮಾಡಬಾರದು. ಆದೇಶವು ವಕೀಲರ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಲಿದ್ದು, ಅವರ ಹೆಸರಿಗೆ ಕಳಂಕ ತರಲಿದೆ. ಮರುಪರಿಶೀಲನಾ ಅರ್ಜಿ ಇತ್ಯರ್ಥವಾಗುವವರೆಗೆ ಯಾವುದೇ ನ್ಯಾಯಾಲಯದಲ್ಲಿ ಪ್ರಾಕ್ಟೀಸ್ ಮಾಡಬಾರದು ಎಂದು ಆದೇಶಿಸಿರುವುದರಿಂದ ಅವರ ಜೀವನೋಪಾಯಕ್ಕೆ ಧಕ್ಕೆ ಉಂಟಾಗಲಿದೆ. ಅರ್ಜಿದಾರರನ್ನು ಆಲಿಸದೇ ಅಂಥ ಕಠಿಣ ಆದೇಶವನ್ನು ಮಾಡಬಾರದಿತ್ತು” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
“ಹೀಗಾಗಿ, 2022ರ ಸೆಪ್ಟೆಂಬರ್ 26ರಂದು ಮರುಪರಿಶೀಲನಾ ಅರ್ಜಿ ವಿಚಾರಣೆ ನಡೆಸಿ ಬಿಸಿಐ ಮಾಡಿರುವ ಆದೇಶಕ್ಕೆ ಹಾಗೂ ಆಕ್ಷೇಪಾರ್ಹವಾದ ಆದೇಶದಲ್ಲಿನ ಪ್ರಕ್ರಿಯೆಗೆ ಮುಂದಿನ ವಿಚಾರಣೆಯವರೆಗೆ ತಡೆ ನೀಡಲಾಗಿದೆ” ಎಂದು ಪೀಠವು ಹೇಳಿದ್ದು, ವಿಚಾರಣೆಯನ್ನು ನವೆಂಬರ್ 4ಕ್ಕೆ ಮುಂದೂಡಿದೆ.
ಅರ್ಜಿದಾರರ ಪರವಾಗಿ ಹಿರಿಯ ವಕೀಲ ಪಿ ಪಿ ಹೆಗ್ಡೆ ವಾದಿಸಿದರು. ದೂರುದಾರರಾದ ಮೂರನೇ ಪ್ರತಿವಾದಿ ಹಾಗೂ ಕೇವಿಯೇಟರ್ ಬಸವರಾಜ್ ಜರಳಿ ಅವರನ್ನು ಹಿರಿಯ ವಕೀಲ ಎ ಎಸ್ ಪೊನ್ನಣ್ಣ ಪ್ರತಿನಿಧಿಸಿದ್ದರು. ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅನ್ನು ವಕೀಲ ನಟರಾಜ್ ಪ್ರತಿನಿಧಿಸಿದ್ದರು.
ಅರ್ಜಿದಾರ ನಾಯಕ್ ಅವರು 28 ವರ್ಷಗಳು ಪ್ರಾಕ್ಟೀಸ್ ಮಾಡಿದ್ದು, ಹಲವು ದಾವೆಗಳಲ್ಲಿ ಅರ್ಜಿದಾರರನ್ನು ಪ್ರತಿನಿಧಿಸುತ್ತಿದ್ದಾರೆ. ಬಿಸಿಐ ಆದೇಶವು ದಾವೆದಾರರ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಬಿಸಿಐ ಆದೇಶವನ್ನು ವಾಟ್ಸಾಪ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಈ ಮೂಲಕ ನಾಯಕ್ ಅವರ ಘನತೆಗೆ ಧಕ್ಕೆ ಉಂಟು ಮಾಡಲಾಗುತ್ತಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಮರುಪರಿಶೀಲನಾ ಅರ್ಜಿಗೆ ಸಂಬಂಧಿಸಿದ ಇಡೀ ಪ್ರಕ್ರಿಯೆಯು ಸ್ವೇಚ್ಛೆ, ಕಾನೂನುಬಾಹಿರ, ವ್ಯಾಪ್ತಿ ಮೀರಿದ್ದಾಗಿದೆ. ಹೀಗಾಗಿ, ಅದನ್ನು ಬದಿಗೆ ಸರಿಸಬೇಕು ಎಂದು ಕೋರಲಾಗಿದೆ.
ಬೆಳಗಾವಿಯ ವಕೀಲ ಬಸವರಾಜ ಜರಳಿ ಅವರು ಕೆ ಬಿ ನಾಯಕ್ ವಿರುದ್ಧ ವೃತ್ತಿ ದುರ್ನಡತೆ ಕುರಿತು ನೀಡಿದ್ದ ದೂರನ್ನು ಕೆಎಸ್‌ಬಿಸಿ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ಬಿಸಿಐನ ಮೂವರು ಸದಸ್ಯರ ನೇತೃತ್ವದ ಶಿಸ್ತುಪಾಲನಾ ಸಮಿತಿಯು ನಾಯಕ್ ಅವರನ್ನು ಅರ್ಜಿ ಇತ್ಯರ್ಥವಾಗುವವರೆಗೆ ಪ್ರಾಕ್ಟೀಸ್ ಮಾಡದಂತೆ ನಿರ್ಬಂಧಿಸಿ, ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.