ಒಂದು ತಿಂಗಳೊಳಗೆ ರಾಜ್ಯದ ಬಂಧನ ಶಿಬಿರಗಳಿಗೆ ಸೂಕ್ತ ಸೌಲಭ್ಯ ಒದಗಿಸುವಂತೆ ಅಸ್ಸಾಂ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ [ರಾಜುಬಾಲಾ ದಾಸ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಅಂತಹ ಶಿಬಿರಗಳಿಗೆ ಭೇಟಿ ನೀಡಿ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳೊಂದಿಗೆ ಚರ್ಚಿಸುವಂತೆ ಸರ್ಕಾರಿ ಅಧಿಕಾರಿಗಳಿಗೆ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಅಗಸ್ಟಿನ್ ಜಾರ್ಜ್ ಮಸೀಹ್ ಅವರಿದ್ದ ಪೀಠ ತಿಳಿಸಿದೆ.
“ಬಂಧನ ಶಿಬಿರಗಳ ಸ್ಥಿತಿ ತೃಪ್ತಿಕರವಾಗಿಲ್ಲ. ಕಾನೂನು ಸೇವಾ ಪ್ರಾಧಿಕಾರದ ವರದಿಯ ಪ್ರಕಾರ ಮೂಲಭೂತ ಆರೋಗ್ಯ ಸೌಕರ್ಯಗಳ ಕೊರತೆಯಿದೆ. ಮಹಿಳಾ ವೈದ್ಯರು ಇಲ್ಲ. ಅಂತಹ ಸೌಲಭ್ಯಗಳು ಕಲ್ಪಿಸುವಂತೆ ನೋಡಿಕೊಳ್ಳಿ” ಎಂದು ನ್ಯಾ. ಓಕಾ ಮೌಖಿಕವಾಗಿ ತಿಳಿಸಿದರು.
ಅಧಿಕಾರಿಗಳ ಸಭೆಯಲ್ಲಿ ಅಸ್ಸಾಂ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಗೆ ಭಾಗವಹಿಸಲು ಸೂಚಿಸಿದ ಪೀಠ ಡಿಸೆಂಬರ್ 9ರೊಳಗೆ ವರದಿ ಸಲ್ಲಿಸುವಂತೆ ಸೂಚಿಸಿತು.
ಅನುಮಾನಾಸ್ಪದ ಪೌರತ್ವ ಹೊಂದಿರುವವರು ಮತ್ತು ನ್ಯಾಯಮಂಡಳಿಗಳಿಂದ ವಿದೇಶಿಯರೆಂದು ಪರಿಗಣಿತರಾದವರನ್ನು ಇರಿಸಲು ಬಳಸುವ ಅಸ್ಸಾಂನ ಬಂಧನ ಕೇಂದ್ರಗಳ ಸ್ಥಿತಿಗೆ ಸಂಬಂಧಿಸಿದ ಪ್ರಕರಣದಲ್ಲಿ ಈ ಆದೇಶ ನೀಡಲಾಗಿದೆ.
ದೇಶದ ಅತಿದೊಡ್ಡ ಬಂಧನ ಕೇಂದ್ರವಾದ ₹ 64 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಗೋಲ್ಪಾರಾ ಜಿಲ್ಲೆಯ ಮಾಟಿಯಾ ಬಂಧನ ಕೇಂದ್ರದಲ್ಲಿನ ಸ್ಥಿತಿಗತಿಗೆ ಸಂಬಂಧಿಸಿಂತೆ ಕೆಲ ತಿಂಗಳುಗಳ ಹಿಂದೆ ಅಸಮಾಧಾನ ವ್ಯಕ್ತಪಡಿಸಿದ್ದ ಪೀಠ ಇಂದು ಕೂಡ ಅಲ್ಲಿನ ಕಳಪೆ ನೈರ್ಮಲ್ಯದ ಬಗ್ಗೆ ಅಸ್ಸಾಂ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.
ನಂತರ ಕಳೆದ ಮೇನಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದ ಪೀಠ ಅಸ್ಸಾಂ ಶಿಬಿರಗಳಲ್ಲಿ ಪ್ರಸ್ತುತ ಬಂಧಿತರಾಗಿರುವ 17 ವಿದೇಶಿಯರನ್ನು ಗಡಿಪಾರು ಮಾಡಲು ತಕ್ಷಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಅರ್ಜಿದಾರರ ಪರ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವಿಸ್ ವಾದ ಮಂಡಿಸಿದರು. ಅಸ್ಸಾಂ ಸರ್ಕಾರವನ್ನು ವಕೀಲ ಶುವೋದೀಪ್ ರಾಯ್ ಪ್ರತಿನಿಧಿಸಿದ್ದರು.