ಪ್ರವಾದಿ ಮುಹಮ್ಮದ್ ವಿರುದ್ಧ ಬಿಜೆಪಿ ವಕ್ತಾರರು ನೀಡಿದ ಹೇಳಿಕೆಗಳಿಂದಾಗಿ ಪಶ್ಚಿಮ ಬಂಗಾಳದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ನಿಯಂತ್ರಿಸಲು ಪೊಲೀಸರಿಗೆ ಸಾಧ್ಯವಾಗದಿದ್ದರೆ ರಾಜ್ಯ ಸರ್ಕಾರ ಕೇಂದ್ರ ಪಡೆಗಳನ್ನು ಕರೆಸಬೇಕು ಎಂದು ಕಲ್ಕತ್ತಾ ಹೈಕೋರ್ಟ್ ಸೋಮವಾರ ಹೇಳಿದೆ.
ದುಷ್ಕರ್ಮಿಗಳನ್ನು ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗುವಂತೆ ಹಿಂಸಾಚಾರದ ಘಟನೆಗಳ ವಿಡಿಯೋ ತುಣುಕನ್ನು ಸಂಗ್ರಹಿಸಲು ರಾಜ್ಯ ಅಧಿಕಾರಿಗಳಿಗೆ ಮುಖ್ಯ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ರಾಜರ್ಷಿ ಭಾರದ್ವಾಜ್ ಅವರಿದ್ದ ಪೀಠ ಸೂಚಿಸಿದೆ.
"ರಾಜ್ಯ ಪೊಲೀಸರಿಗೆ ಯಾವುದೇ ಸ್ಥಳದಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಾಗದಿದ್ದಲ್ಲಿ, ಕೇಂದ್ರ ಪಡೆಗಳನ್ನು ಕರೆಸಲು ರಾಜ್ಯ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ರಾಜ್ಯದ ಸಂಬಂಧಪಟ್ಟ ಅಧಿಕಾರಿಗಳು ದುಷ್ಕರ್ಮಿಗಳನ್ನು ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗುವಂತೆ ಹಿಂಸಾಚಾರದ ಘಟನೆಗಳ ವಿಡಿಯೋ ತುಣುಕನ್ನು ಸಂಗ್ರಹಿಸಬೇಕು’ ಎಂದು ನ್ಯಾಯಾಲಯ ಹೇಳಿದೆ.
ಅಹಿತಕರ ಘಟನೆಗಳಲ್ಲಿ ಆಸ್ತಿ ನಷ್ಟ ಅನುಭವಿಸಿದವರಿಗೆ ಪರಿಹಾರ ನೀಡುವ ವಿಚಾರದಲ್ಲಿ ಅಡ್ವೊಕೇಟ್ ಜನರಲ್ ಅವರು ರಾಜ್ಯ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಹಿಂಸಾಚಾರಕ್ಕೆ ಸಂಬಂಧಿಸಿದಂತೆ ವಿವಿಧ ಪರಿಹಾರಗಳನ್ನುಕೋರಿ ವಿಭಿನ್ನ ವ್ಯಕ್ತಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ʼಹಿಂಸಾಚಾರದ ವೇಳೆ ಪೊಲೀಸರು ಮೂಕಪ್ರೇಕ್ಷಕರಾಗಿದ್ದರು. ಹೌರಾ ಅಂಕುರ್‌ಹಾಟಿ ರಾಷ್ಟ್ರೀಯ ಹೆದ್ದಾರಿ ತಡೆದ ಪ್ರತಿಯೊಬ್ಬರನ್ನೂ ಬಂಧಿಸಬೇಕುʼ ಎಂದು ಕೆಲವು ಅರ್ಜಿಗಳು ಮನವಿ ಸಲ್ಲಿಸಿದ್ದರೆ ಮತ್ತೊಂದು ಅರ್ಜಿ ಶಾಂತಿಯುತ ಪ್ರತಿಭಟನೆಗೆ ಅವಕಾಶ ಮಾಡಿಕೊಡಬೇಕು ಎಂದು ಭಿನ್ನವಿಸಿತ್ತು.
ರಾಜ್ಯದ ಪ್ರಸ್ತುತ ಪರಿಸ್ಥಿತಿ ಮತ್ತು ಅಧಿಕಾರಿಗಳು ಕೈಗೊಂಡ ಕ್ರಮ ವಿವರಿಸುವ ಅಫಿಡವಿಟ್ ಸಲ್ಲಿಸಲು ಕಾಲಾವಕಾಶ ಅಗತ್ಯವಿರುವುದರಿಂದ ವಿಚಾರಣೆ ಮುಂದೂಡ ಬೇಕೆಂದು ಅಡ್ವೊಕೇಟ್ ಜನರಲ್ ಕೋರಿದರು. ಇದಕ್ಕೆ ಒಪ್ಪಿದ ನ್ಯಾಯಾಲಯ ಯಾವುದೇ ಅಹಿತಕರ ಘಟನೆ ನಡೆಯದಂತೆ ಮತ್ತು ಶಾಂತಿ ಕಾಪಾಡಲು ಸಾಧ್ಯವಾಗುವ ರೀತಿಯ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶಿಸಿತು.