ಸುದ್ದಿಗಳು

ತೃತೀಯ ಲಿಂಗಿಗಳಿಗೆ ನೇಮಕಾತಿ ಅವಕಾಶ: ಒಬಿಸಿಯಲ್ಲಿ ಪ್ರವರ್ಗವನ್ನಾಗಿಸಲು ಪ್ರಸ್ತಾಪ ಹೊಂದಿರುವ ರಾಜ್ಯ ಸರ್ಕಾರ

Bar & Bench

ತೃತೀಯ ಲಿಂಗಿಗಳಿಗೆ ನೇಮಕಾತಿಯಲ್ಲಿ ಅವಕಾಶ ಮಾಡಿಕೊಡುವ ಉದ್ದೇಶದಿಂದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಜೊತೆ ಸಮಾಲೋಚನೆ ನಡೆಸಿ ಇತರೆ ಹಿಂದುಳಿದ ವರ್ಗಗಳಡಿ (ಒಬಿಸಿ) ಒಂದು ಪ್ರವರ್ಗವನ್ನಾಗಿ ಸೇರಿಸುವ ಪ್ರಸ್ತಾಪ ಹೊಂದಿರುವುದಾಗಿ ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ ಗೆ ತಿಳಿಸಿದೆ.

ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿಗೆ ಸಂಬಂಧಿಸಿದ ಅಧಿಸೂಚನೆಯಲ್ಲಿ ಮಹಿಳೆಯರು ಮತ್ತು ಪುರುಷರಿಗೆ ವಿಭಾಗ ಕಲ್ಪಿಸಿರುವಂತೆ ತೃತೀಯ ಲಿಂಗಿಗಳಿಗೆ ಅವಕಾಶ ಮಾಡಿಕೊಟ್ಟಿಲ್ಲ ಎಂದು ರಾಜ್ಯ ಸರ್ಕಾರದ ನಿಲುವು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾ. ಅಶೋಕ್ ಕಿಣಗಿ ನೇತೃತ್ವದ ವಿಭಾಗೀಯ ಪೀಠ ನಡೆಸುತ್ತಿದ್ದ ವೇಳೆ ರಾಜ್ಯ ಸರ್ಕಾರವು ನ್ಯಾಯಾಲಯಕ್ಕೆ ಈ ವಿಚಾರ ತಿಳಿಸಿತು (ಸಂಗಮ ವರ್ಸಸ್ ರಾಜ್ಯ ಸರ್ಕಾರ). ವಿಚಾರಣೆಯನ್ನು ಅಕ್ಟೋಬರ್ 16ಕ್ಕೆ ಮುಂದೂಡಲಾಗಿದೆ.

ಆಯೋಗದ ಜೊತೆ ಸಮಾಲೋಚನೆ ನಡೆಸಿದ ನಂತರ ಮೇಲಿನ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನಿರ್ಧರಿಸಲಿದೆ ಎಂದು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಲ್ಲಿಸಿರುವ ಅಫಿಡವಿಟ್‌ ನಲ್ಲಿ ತಿಳಿಸಿದ್ದಾರೆ. ಆಯೋಗವನ್ನು ಪುನರಚಿಸುವ ಅಗತ್ಯವಿದೆ ಎಂದೂ ಅಫಿಡವಿಟ್ ನಲ್ಲಿ ವಿವರಿಸಲಾಗಿದೆ.

ಭಾರತೀಯ ಸಂವಿಧಾನದ ಪರಿಚ್ಛೇದ 342A ಅಡಿ ಈ ವಿಚಾರವನ್ನು ನಿರ್ಧರಿಸಬೇಕಿದೆ ಎಂದಿರುವ ನ್ಯಾಯಾಲಯ “ಸಂವಿಧಾನದ 342A ಪರಿಣಾಮವೇನು, ಕಾನೂನಾತ್ಮಕ ಪರಿಣಾಮಗಳೇನು ಎನ್ನುವುದನ್ನು ಪರಿಶೀಲಿಸಬೇಕಿದೆ” ಎಂದಿತು. ಸುಪ್ರೀಂ ಕೋರ್ಟ್ ಮುಂದಿರುವ ಮರಾಠಾ ಮೀಸಲಾತಿ ವಿಚಾರವೂ ನ್ಯಾಯಾಲಯದಲ್ಲಿ ಪ್ರಸ್ತಾಪಗೊಂಡಿತು.

“ಒಂದೊಮ್ಮೆ ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿದರೂ ಪ್ರವರ್ಗವೊಂದನ್ನು ಹಿಂದುಳಿದ ವರ್ಗ ಎಂದು ಪರಿಗಣಿಸುವಲ್ಲಿ ಅದರ ಪಾತ್ರವೇನು” ಎಂದು ನ್ಯಾಯಾಲಯ ಪ್ರಶ್ನಿಸಿತು.

ಈ ಅಂಶದ ಕುರಿತು ಪೀಠಕ್ಕೆ ವಿವರಿಸುವಂತೆ ಸೂಚಿಸಿ ಅರ್ಜಿದಾರರ ಪರ ವಕೀಲ ತರ್ಜಾನಿ ದೇಸಾಯಿ ಮತ್ತು ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರಿಗೆ ಹೆಚ್ಚಿನ ಕಾಲಾವಕಾಶವನ್ನು ನ್ಯಾಯಾಲಯ ನೀಡಿದೆ. ಮೀಸಲಾತಿ ಶೇ.50 ಅನ್ನು ದಾಟದಂತೆ ನೋಡಿಕೊಳ್ಳಬೇಕಿದೆ ಎನ್ನುವುದನ್ನೂ ಸಹ ರಾಜ್ಯ ಸರ್ಕಾರವು ನ್ಯಾಯಾಲಯಕ್ಕೆ ಇದೇ ವೇಳೆ ತಿಳಿಸಿತು.