ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಜನಾರ್ದನ ರೆಡ್ಡಿ ಹಾಗೂ ಶಶಿಕಲಾ ಜೊಲ್ಲೆ ಅವರ ವಿರುದ್ಧ ಪೂರ್ವಾನುಮತಿ ಕೋರಿ ಸಲ್ಲಿಕೆಯಾಗಿದ್ದ ಪ್ರಸ್ತಾವಗಳನ್ನು ಸಂಬಂಧಿತ ಪ್ರಾಧಿಕಾರಿಗಳಿಗೆ ಮರಳಿಸಲಾಗಿದೆ. ಈ ನಾಲ್ವರ ವಿರುದ್ಧ ಭ್ರಷ್ಟಾಚಾರ ನಿರೋಧಕ ಕಾಯಿದೆ ಅಡಿ ಅಭಿಯೋಜನಾ ಮಂಜೂರಾತಿ ನೀಡಲು ಯಾವುದೇ ಪ್ರಕರಣಗಳು ರಾಜಭವನದಲ್ಲಿ ಬಾಕಿ ಇಲ್ಲ ಎಂದು ರಾಜ್ಯಪಾಲರು ಮಾಹಿತಿ ಹಕ್ಕು ಕಾಯಿದೆ ಅಡಿ ಸಲ್ಲಿಸಲಾಗಿದ್ದ ಅರ್ಜಿಗೆ ಪ್ರತಿಕ್ರಿಯಿಸಿದ್ದಾರೆ.
ಜೆಡಿಎಸ್ ಅಧ್ಯಕ್ಷ ಎಚ್ ಡಿ ಕುಮಾರಸ್ವಾಮಿ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಜನಾರ್ದನ ರೆಡ್ಡಿ ಹಾಗೂ ಶಶಿಕಲಾ ಜೊಲ್ಲೆ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಬಾಕಿ ಇರುವ ಮಾಹಿತಿ ಒದಗಿಸುವಂತೆ ಆಗಸ್ಟ್ 21ರಂದು ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಹಾಂ ಅವರು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ರಾಜ್ಯಪಾಲರ ಅಧೀನ ಕಾರ್ಯದರ್ಶಿ ಮತ್ತು ಆಡಳಿಯ ವಿಭಾಗದ ಸಾರ್ವಜನಿಕ ಮಾಹಿತಿ ಅಧಿಕಾರಿ ಆಗಸ್ಟ್ 30ರಂದು ಮಾಹಿತಿ ನೀಡಿದ್ದಾರೆ.
ಈ ಮಾಹಿತಿ ಪ್ರಕಾರ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಪೂರ್ವಾನುಮತಿ ಕೋರಿ 2021ರ ಡಿಸೆಂಬರ್ 9ರಂದು ಸಲ್ಲಿಸಿರುವ ಮನವಿ ಮತ್ತು ಆ ಮನವಿಯ ವಿಲೇವಾರಿಗೆ ಸಂಬಂಧಿಸಿದಂತೆ ಸ್ಪಷ್ಟನೆ ಕೋರಿರುವ ಪ್ರತಿ ನೀಡಬೇಕು ಎಂದು ಅಬ್ರಹಾಂ ಕೋರಿದ್ದರು.
ಇದಕ್ಕೆ ರಾಜಭವನವು ಮೆರಿಟ್ ಮೇಲೆ ನಿರ್ಧಾರ ಕೈಗೊಳ್ಳಲಾಗಿದ್ದು, 2024ರ ಆಗಸ್ಟ್ 9ರಂದು ಸಂಬಂಧಿತ ಕಡತಗಳೊಂದಿಗೆ ತನಿಖಾ ಸಂಸ್ಥೆಗೆ ಪ್ರಸ್ತಾವ ಮರಳಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಇಲಾಖೆ ಮಾಹಿತಿ ಸ್ವೀಕರಿಸಿರುವ ದಾಖಲೆಯನ್ನು ಒದಗಿಸಲಾಗಿದ್ದು, ತಾವು ಸಂಬಂಧಿತ ಪ್ರಾಧಿಕಾರವನ್ನು ಸಂಪರ್ಕಿಸಬಹುದು ಎಂದು ಉತ್ತರಿಸಲಾಗಿದೆ.
2024ರ ಫೆಬ್ರವರಿ 26ರಂದು ಬೃಹತ್ ಕೈಗಾರಿಕಾ ಇಲಾಖೆಯ ಮಾಜಿ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಪೂರ್ವಾನುಮತಿ ಕೋರಿ ಸಲ್ಲಿಸಿರುವ ಅರ್ಜಿ ಮತ್ತು ಅದಕ್ಕೆ ಸಂಬಂಧಿಸಿದ ಸ್ಪಷ್ಟನೆ ಕೋರಿರುವ ದಾಖಲೆಯನ್ನು ಅಬ್ರಹಾಂ ಕೇಳಿದ್ದರು.
ಇದಕ್ಕೆ ಮುರುಗೇಶ್ ನಿರಾಣಿ ವಿರುದ್ಧ ತನಿಖೆಗೆ ಸಹಮತಿಸುವ ಪ್ರಸ್ತಾವವನ್ನು 2024ರ ಮಾರ್ಚ್ 26ರಂದು ಹಿಂದಿರುಗಿಸಲಾಗಿದೆ. ಅಭಿಯೋಜನಾ ಮಂಜೂರಾತಿ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ದಾಖಲಾಗಿರುವ ವೇಳೆಗೆ ಅಂದರೆ ಆಗಸ್ಟ್ 19ರ ವೇಳೆಗೆ ಯಾವುದೇ ಪ್ರಕರಣ ರಾಜ್ಯಪಾಲರ ಕಚೇರಿಯಲ್ಲಿ ಬಾಕಿ ಉಳಿದಿಲ್ಲ. ಆರ್‌ಟಿಐನಡಿ ಕೇಳಿರುವ ಈ ಪ್ರಶ್ನೆಗೆ ಉತ್ತರಿಸುತ್ತಿರುವ ಆಗಸ್ಟ್ 30ರಂದು ಕಚೇರಿಯಲ್ಲಿ ಯಾವುದೇ ಕಡತ ಲಭ್ಯವಿಲ್ಲ. ಇದಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆ ದಾಖಲೆ ಹಿಂಪಡೆದಿರುವ ರಶೀದಿಯನ್ನು ಅಡಕಗೊಳಿಸಲಾಗಿದೆ. ಹೀಗಾಗಿ, ಸಂಬಂಧಿತ ಪ್ರಾಧಿಕಾರವನ್ನು ತಾವು ಭೇಟಿ ಮಾಡಬಹುದು ಎಂದು ತಿಳಿಸಲಾಗಿದೆ.
ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ಪೂರ್ವಾನುಮತಿ ಕೋರಿ 2023ರ ನವೆಂಬರ್ 21ರಂದು ಸಲ್ಲಿಕೆಯಾಗಿರುವ ಮನವಿ ಮತ್ತು ಆ ಸಂಬಂಧ ಕೋರಲಾಗಿರುವ ಮಾಹಿತಿ, ವಿಲೇವಾರಿಗೆ ಸಂಬಂಧಿಸಿದ ಮಾಹಿತಿ ಕೋರಲಾಗಿತ್ತು. ಕುಮಾರಸ್ವಾಮಿ ವಿರುದ್ಧ ಪೂರ್ವಾನುಮತಿ ಕೋರಿದ್ದ ಮನವಿಯನ್ನು 2024ರ ಜುಲೈ 29ರಂದು ಸಂಬಂಧಿತ ಪ್ರಾಧಿಕಾರಕ್ಕೆ ಮರಳಿಸಲಾಗಿದೆ ಎಂದು ರಾಜಭವನ ತಿಳಿಸಿದೆ.
ಇಲ್ಲಿ ಮಹತ್ವದ ಬೆಳವಣಿಗೆಯೇನೆಂದರೆ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಾರಿ ಮಾಡಿದ್ದ ಶೋಕಾಸ್ ನೋಟಿಸ್‌ಗೆ ಜುಲೈ 26ರಂದು ಅವರು ವಿಸ್ತೃತವಾದ ಪ್ರತ್ಯುತ್ತರ ಸಲ್ಲಿಸಿದ್ದರು. ತಮ್ಮ ಪ್ರತಿಕ್ರಿಯೆಯಲ್ಲಿ ಸಿದ್ದರಾಮಯ್ಯ ಅವರು ಎಚ್‌ಡಿಕೆ, ಜೊಲ್ಲೆ, ರೆಡ್ಡಿ ಮತ್ತು ನಿರಾಣಿ ವಿರುದ್ದದ ಪೂರ್ವಾನುಮತಿ ಪ್ರಸ್ತಾವಗಳು ರಾಜ್ಯಪಾಲರ ಅಂಗಳದಲ್ಲಿ ಬಾಕಿ ಇವೆ ಅಂಶ ಸೇರ್ಪಡೆ ಮಾಡಿದ್ದರು. ಇದಾದ ಮೂರು ದಿನಗಳಲ್ಲಿ ಎಚ್‌ಡಿಕೆ ವಿರುದ್ಧ ಪೂರ್ವಾನುಮತಿ ಕೋರಿದ್ದ ಪ್ರಸ್ತಾವವನ್ನು ರಾಜ್ಯಪಾಲರು ತನಿಖಾ ಸಂಸ್ಥೆಗೆ ಮರಳಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಇನ್ನು, ಹಾಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಪೂರ್ವಾನುಮತಿ ಕೋರಿ 2024ರ ಮೇ 13ರಂದು ಸಲ್ಲಿಕೆಯಾಗಿದ್ದ ಮನವಿಯನ್ನು ಜೂನ್ 27ರಂದು ಮರಳಿಸಲಾಗಿದೆ ಎಂದು ರಾಜಭವನದ ಸಾರ್ವಜನಿಕ ಮಾಹಿತಿ ಅಧಿಕಾರಿ ಜಿ ಪ್ರದೀಪ್ ತಿಳಿಸಿದ್ದಾರೆ.
ಈ ಮಧ್ಯೆ, ಇಂದು ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆಯ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಪೂರ್ವಾನುಮತಿ ನೀಡಲು ಯಾವುದೇ ಪ್ರಸ್ತಾವಗಳು ರಾಜ್ಯಪಾಲರ ಮುಂದಿಲ್ಲ ಆಗಸ್ಟ್ ೧೯ರಂದು ಹೇಳಿದ್ದರು. ಇದನ್ನೇ ಇಂದು ಪುನರುಚ್ಚರಿಸಿದರು. ಸಂಬಂಧಿಸಿದ ಅಧಿಕೃತ ದಾಖಲೆಗಳನ್ನು ಪೀಠದ ಮುಂದಿರಿಸಿದರು. ತದನಂತರ, ಅಬ್ರಹಾಂ ಪರ ವಕೀಲ ರಂಗನಾಥ್ ರೆಡ್ಡಿ ಅವರು ಸಹ ತಾವು ಆರ್‌ಟಿಐ ಅಡಿ ಮಾಹಿತಿ ಪಡೆದಿದ್ದು, ರಾಜ್ಯಪಾಲರ ಮುಂದೆ ಅರ್ಜಿದಾರರು ಹೇಳಿರುವ ಯಾವುದೇ ಪ್ರಕರಣಗಳು ಪ್ರಾಸಿಕ್ಯೂಷನ್ ಅನುಮತಿಗಾಗಿ ಬಾಕಿ ಇಲ್ಲ ಎನ್ನುವ ಮಾಹಿತಿ ದೊರೆತಿದೆ ಎಂದು ಪೀಠಕ್ಕೆ ತಿಳಿಸಿದರು.