ರಾಜ್ಯದಲ್ಲಿ ಬೇಸಿಗೆ ಸಮಯಲ್ಲಿ ಬೀಸಲಿರುವ ಬಿಸಿಗಾಳಿ ಹಾಗೂ ಸೂರ್ಯನ ತಾಪಮಾನದಿಂದ ಆಗುವ ಪರಿಣಾಮಗಳಿಂದ ಪೌರಕಾರ್ಮಿಕರು ಅಥವಾ ನೈರ್ಮಲ್ಯ ಕಾರ್ಮಿಕರನ್ನು ರಕ್ಷಿಸುವ ಸಂಬಂಧ ಹೊರಡಿಸಲಾಗಿರುವ ಸುತ್ತೋಲೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಸೋಮವಾರ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ಅಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಸರ್ಕಾರದ ಪರ ವಕೀಲರು ಪೌರಾಡಳಿತ ನಿರ್ದೇಶಕರು ಏಪ್ರಿಲ್ 2ರಂದು ಹೊರಡಿಸಿರುವ ಸುತ್ತೋಲೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಈ ಸುತ್ತೋಲೆಯಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಅದನ್ನು ದಾಖಲಿಸಿಕೊಂಡ ಪೀಠವು ಸುತ್ತೋಲೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಆದೇಶಿಸಿತು. ಒಂದೊಮ್ಮೆ ಸುತ್ತೋಲೆ ಜಾರಿಗೊಳಿಸುವಲ್ಲಿ ಸರ್ಕಾರ ವಿಫಲವಾಗಿರುವುದು ಕಂಡು ಬಂದಲ್ಲಿ ಅರ್ಜಿದಾರರು ಮರಳಿ ನ್ಯಾಯಾಲಯಕ್ಕೆ ಬರಬಹುದು ಎಂದು ಸೂಚಿಸಿ ಅರ್ಜಿ, ಇತ್ಯರ್ಥಪಡಿಸಿತು.
ಸುತ್ತೋಲೆಯಲ್ಲಿ ಏನಿದೆ: ರಾಜ್ಯದಲ್ಲಿ ಬೇಸಿಗೆ ಸಂದಂರ್ಭದಲ್ಲಿ ಸೂರ್ಯನ ತಾಪಮಾನ ದಿನೇದಿನೇ ಹೆಚ್ಚಾಗುತ್ತಿರುವುದರಿಂದ ಎದುರಾಗುವ ಸವಾಲುಗಳನ್ನು ಉತ್ತಮವಾಗಿ ನಿಭಾಯಿಸಲು ಕೇಂದ್ರ ಸರ್ಕಾರ ಹೊರಡಿಸಿರುವ 2025ರ ಉಷ್ಣ ಅಲೆ ನಿರ್ವಹಣಾ ಮಾರ್ಗಸೂಚಿಯಂತೆ ಅಗತ್ಯ ಕ್ರಮವಹಿಸಬೇಕಿದೆ. ಅದರಂತೆ ಜಿಲ್ಲಾಮಟ್ಟದಲ್ಲಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಸಂಬಂಧಿಸಿದ ಇಲಾಖೆಗಳ ಸಂಯೋಜನೆಯನ್ನು ಪರಿಣಾಮಕಾರಿಗೊಳಿಸುವ ತುರ್ತು ಅವಶ್ಯಕತೆ ಇರುತ್ತದೆ. ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಯಾವುದೇ ಅನಾಹುತಗಳು ಸಂಭವಿಸದಂತೆ ಈ ಕೆಳಕಂಡ ಮುನ್ನೆಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಉಷ್ಣ ಅಲೆಗಳ ದುಷ್ಪರಿಣಾಮ ನಿಭಾಯಿಸಲು ಉಷ್ಣ ಅಲೆಗಳ ನೇರ ದುಷ್ಟರಿಣಾಮಗಳಿಗೆ ಒಳಗಾಗುವ ಪ್ರದೇಶಗಳನ್ನು ಗುರುತಿಸಿ ಕ್ರಮ ವಹಿಸಬೇಕು.
ಕಟ್ಟಡ ನಿರ್ಮಾಣ ಕಾರ್ಮಿಕರು, ಪೌರ ಕಾರ್ಮಿಕರು, ಅಂಗನವಾಡಿ ನೌಕರರು, ಅಸಂಘಟಿತ ಕಾರ್ಮಿಕರು ಹೆಚ್ಚಿನ ರೀತಿಯಲ್ಲಿ ಉಷ್ಣ ಅಲೆಗಳಿಗೆ ಗುರಿಯಾಗುತ್ತಾರೆ. ಕಾರ್ಮಿಕರ ಒತ್ತಡ ಕಡಿಮೆ ಮಾಡಲು ಸಮಯ ಬದಲಾವಣೆ, ಸಾರ್ವಜನಿಕರು ಕಚೇರಿಗೆ ಭೇಟಿ ನೀಡುವ ಸಮಯ ಬದಲಾಯಿಸುವುದು.
ಪೌರಕಾರ್ಮಿಕರ ಕಾರ್ಯನಿರ್ವಹಣೆಗೆ ಅನುಕೂಲವಾಗಲು ಸ್ಥಳೀಯ ಬಿಸಿಲಿನ ಪರಿಸ್ಥಿತಿಗೆ ಅನುಗುಣವಾಗಿ ಸಮಯ ನಿಗದಿಪಡಿಸಬೇಕು. ಕೆಲಸದ ಸಮಯದಲ್ಲಿ ಕುಡಿಯುವ ನೀರು ಹಾಗೂ ಉಪಹಾರ ಒದಗಿಸಬೇಕು.
ಅಸಂಘಟಿತ ಹಾಗೂ ಕಟ್ಟಡ ಕಾರ್ಮಿಕರ ಕೆಲಸ ಮಾಡುವ ಸ್ಥಳಗಳಲ್ಲಿ ಆಟದ ಮೈದಾನ ಹಾಗೂ ಪಾರ್ಕ್‌ಗಳಲ್ಲಿ ಕುಡಿಯುವ ನೀರು ಪೂರೈಸುವುದು.
ರಾಜ್ಯದಲ್ಲಿ ಬಿಸಿಲ ಝಳದ ಪರಿಣಾಮಗಳಿಗೆ ತುತ್ತಾಗುವ ಜನರ ನಿಖರ ಸಂಖ್ಯೆ ತಿಳಿಯಲು ಸಂಬಂಧಪಟ್ಟ ಸಿಬ್ಬಂದಿಗೆ ಉಷ್ಣ ಅಲೆಗಳ ವಿಜ್ಞಾನವನ್ನು ಅರ್ಥಮಾಡಿಸಬೇಕು.
ಮಾರುಕಟ್ಟೆ, ಬಸ್ ನಿಲ್ದಾಣ ಮತ್ತು ಜನತೆ ಸೇರುವ ಇತರೆ ಆಯಕಟ್ಟಿನ ಸ್ಥಳಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ಹಾಗೂ ನೆರಳಿನ ವ್ಯವಸ್ಥೆ ಕಲ್ಪಿಸುವುದು.