Karnataka HC and Protests
Karnataka HC and Protests  
ಸುದ್ದಿಗಳು

ಬೆಂಗಳೂರಿನಲ್ಲಿ ಪ್ರತಿಭಟನೆ, ಮೆರವಣಿಗೆ: ನ್ಯಾಯಾಲಯದ ಆದೇಶ, ನಿಯಮ ಕಡ್ಡಾಯವಾಗಿ ಪಾಲಿಸಲು ಹೈಕೋರ್ಟ್ ನಿರ್ದೇಶನ

Bar & Bench

ಬೆಂಗಳೂರಿನ ಗಾಂಧಿನಗರದಲ್ಲಿರುವ ಸ್ವಾತಂತ್ರ್ಯ ಉದ್ಯಾನ (ಫ್ರೀಡಂ ಪಾರ್ಕ್) ಹೊರತುಪಡಿಸಿ ನಗರದ ಬೇರೆ ಯಾವುದೇ ಭಾಗದಲ್ಲೂ ರಾಜಕೀಯ ಅಥವಾ ರಾಜಕಿಯೇತರ ಸಂಘಟನೆಗಳು ಮೆರವಣಿಗೆ, ಪ್ರತಿಭಟನೆ, ಬಹಿರಂಗ ಸಭೆ ನಡೆಸಲು ಅನುಮತಿ ನೀಡದಂತೆ ನ್ಯಾಯಾಲಯ ಹೊರಡಿಸಿರುವ ಆದೇಶ ಮತ್ತು ಈ ಸಂಬಂಧ 2021ರಲ್ಲಿ ಜಾರಿಗೊಳಿಸಲಾಗಿರುವ ‘ಪ್ರತಿಭಟನೆ, ಪ್ರದರ್ಶನ ಮತ್ತು ಪ್ರತಿಭಟನಾ ಮೆರವಣಿಗೆಗಳ (ಬೆಂಗಳೂರು ನಗರ) ಪರವಾನಗಿ ಮತ್ತು ನಿಯಂತ್ರಣ ನಿಯಮʼಗಳನ್ನು ಕಟ್ಟುನಿಟ್ಟಾಗಿ ಕಾರ್ಯಗತಗೊಳಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದ್ದು, ಸೋಮವಾರ ಅರ್ಜಿ ಇತ್ಯರ್ಥಪಡಿಸಿತು.


ಮೆರವಣಿಗೆ ಮತ್ತು ಪ್ರತಿಭಟನೆಯಿಂದ ನಗರದಲ್ಲಿ ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲ ವಿಜಯ್ ಕುಮಾರ್ ಎ. ಪಾಟೀಲ್ ಅವರು “ಬೆಂಗಳೂರು ನಗರದಲ್ಲಿ ಪ್ರತಿಭಟನೆ ಹಾಗೂ ಧರಣಿಗಳನ್ನು ನಿಯಂತ್ರಣ ಮಾಡುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸ್ ಕಾಯಿದೆ-1963ರ ಸೆಕ್ಷನ್ 31(1) ಅಡಿಯಲ್ಲಿ ‘ಪ್ರತಿಭಟನೆ, ಪ್ರದರ್ಶನ ಮತ್ತು ಪ್ರತಿಭಟನಾ ಮೆರವಣಿಗೆಗಳ (ಬೆಂಗಳೂರು ನಗರ) ಪರವಾನಗಿ ಮತ್ತು ನಿಯಂತ್ರಣ ನಿಯಮ’ಗಳನ್ನು ರೂಪಿಸಿ 2021ರಲ್ಲಿ ಜಾರಿಗೊಳಿಸಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ 27 ಎಫ್‌ಐಆರ್ ಸಹ ದಾಖಲಿಸಲಾಗಿದೆ” ಎಂದು ಪೀಠಕ್ಕೆ ವಿವರಿಸಿದರು.

ಸರ್ಕಾರದ ವಾದವನ್ನು ದಾಖಲಿಸಿಕೊಂಡ ಪೀಠವು 2022ರ ಮಾರ್ಚ್‌ 3ರಂದು ಹೈಕೋರ್ಟ್ ನೀಡಿರುವ ನಿರ್ದೇಶನ ಮತ್ತು 2021ರಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಮುಂದುವರಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿ, ಅರ್ಜಿ ಇತ್ಯರ್ಥಪಡಿಸಿತು.

ಪ್ರಕರಣದ ಹಿನ್ನೆಲೆ: ನಗರದಲ್ಲಿ ಮೆರವಣಿಗೆ ಮತ್ತು ಪ್ರತಿಭಟನೆಯಿಂದ ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗುತ್ತಿರುವ ವಿಚಾರ ಸಂಬಂಧ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದ ಹಾಲಿ ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು 2021ರ ಮಾರ್ಚ್‌ನಲ್ಲಿ ಹೈಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿಯವರಿಗೆ ಪತ್ರ ಬರೆದಿದ್ದರು. ಅದನ್ನು ಪರಿಗಣಿಸಿ, ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡು ಹೈಕೋರ್ಟ್‌ ವಿಚಾರಣೆ ನಡೆಸಿತ್ತು.