Delhi High Court
Delhi High Court 
ಸುದ್ದಿಗಳು

ದೃಷ್ಟಿಹೀನ ದಾವೆದಾರರಿಗೆ ನ್ಯಾಯಾಲಯದ ದಾಖಲೆಗಳನ್ನು ಬ್ರೈಲ್ ಲಿಪಿಯಲ್ಲಿ ಒದಗಿಸಿ: ದೆಹಲಿ ಹೈಕೋರ್ಟ್

Bar & Bench

ದೃಷ್ಟಿಹೀನ ದಾವೆದಾರರು ಓದಬಲ್ಲ ಭಾಷೆಯಲ್ಲಿ (ಬ್ರೈಲ್ ಲಿಪಿ) ನ್ಯಾಯಾಲಯದ ದಾಖಲೆಗಳನ್ನು ಒದಗಿಸಲು ಅಗತ್ಯ ವ್ಯವಸ್ಥೆ ಮಾಡುವಂತೆ ದೆಹಲಿ ಹೈಕೋರ್ಟ್‌ ದೆಹಲಿ ಸರ್ಕಾರಕ್ಕೆ ನಿರ್ದೇಶಿಸಿದೆ.

ಪಕ್ಷಕಾರರು ಅರ್ಥಮಾಡಿಕೊಳ್ಳಬಹುದಾದ ಭಾಷೆ ಮತ್ತು ಸಂವಹನ ವಿಧಾನದಲ್ಲಿ ದಾಖಲೆಗಳನ್ನು ಪಡೆಯುವ ಹಕ್ಕನ್ನು ನ್ಯಾಯ ಪಡೆಯುವ ಹಕ್ಕು ಒಳಗೊಂಡಿದೆ ಎಂದು ನ್ಯಾಯಮೂರ್ತಿ ಅನೂಪ್‌ ಕುಮಾರ್ ಮೆಂಡಿರಟ್ಟ ಅವರಿದ್ದ ಏಕಸದಸ್ಯ ಪೀಠ ಹೇಳಿದೆ.

ಅತ್ಯಾಚಾರ ಪ್ರಕರಣವೊಂದರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ನಿರ್ದೇಶನ ನೀಡಿತು. ಪ್ರಕರಣದ ಮೇಲ್ಮನವಿದಾರ ಮತ್ತು ದೂರುದಾರೆ ಇಬ್ಬರೂ ದೃಷ್ಟಿದೋಷವುಳ್ಳವರಾಗಿದ್ದು, 2018ರಲ್ಲಿ ದೈಹಿಕ ಸಂಬಂಧ ಬೆಳೆಸಿದ್ದರು ಎನ್ನಲಾಗಿತ್ತು.

ಅರ್ಜಿದಾರ ಆರೋಪಿ ಸಂತ್ರಸ್ತೆಗೆ ಕುಂಕುಮವಿಟ್ಟು ಮದುವೆಯಾಗುವುದಾಗಿ ಭರವಸೆ ನೀಡಿ ಆಕೆಯೊಂದಿಗೆ ಶಾರೀರಿಕ ಸಂಬಂಧ ಬೆಳೆಸಿದ್ದ. ಪ್ರಕರಣದ ಸತ್ಯಾಸತ್ಯತೆಯನ್ನು ಗಮನಿಸಿದ ನ್ಯಾಯಾಲಯವು ಅರ್ಜಿದಾರರಿಗೆ ಜಾಮೀನು ನೀಡಿತು. ಆದರೆ, ಬ್ರೈಲ್ ಲಿಪಿಯಲ್ಲಿ ಆದೇಶ ಪ್ರತಿಯನ್ನು ನೀಡಬೇಕೆಂದು ದೂರುದಾರರ ಪರ ವಕೀಲರು ಮನವಿ ಮಾಡಿದ್ದರು.

ಅರ್ಜಿದಾರ ಮತ್ತು ಸಂತ್ರಸ್ತೆ ಇಬ್ಬರೂ ದೃಷ್ಟಿಹೀನರಾಗಿದ್ದು ತಮಗಿರುವ ಕಾನೂನು ಹಕ್ಕುಗಳ ದಾಖಲೆಯನ್ನು ಅರಿಯಲು ಅರ್ಹರಾಗಿದ್ದಾರೆ. ಹೀಗಾಗಿ ದೂರುದಾರೆ ಮತ್ತು ಆರೋಪಿ ಇಬ್ಬರಿಗೂ ದಾಖಲೆಗಳನ್ನು ಒದಗಿಸಬೇಕು ಎಂದ ನ್ಯಾಯಾಲಯ ತಾನು ನೀಡಿರುವ ನಿರ್ದೇಶನವನ್ನು ಸಂಬಂಧಪಟ್ಟ ಎಲ್ಲರ ಗಮನಕ್ಕೆ ತರಲು ಸೂಕ್ತ ರೀತಿಯಲ್ಲಿ ಪ್ರಸಾರ ಮಾಡಬೇಕು ಎಂದು ಸೂಚಿಸಿತು.